ಈ ಬಾರಿ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿ ಮಾಜಿ ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ ಸ್ಪರ್ಧೆ ಮಾಡುವುದು ಖಚಿತವಾಗಿದೆ. ಇನ್ನೂ ಅಧಿಕೃತವಾಗಿ ಮಂಡ್ಯ ಸೇರಿದಂತೆ ಕೋಲಾರ, ಹಾಸನ ಲೋಕಸಭಾ ಕ್ಷೇತ್ರಗಳಿಗೆ ಜೆಡಿಎಸ್ ಅಭ್ಯರ್ಥಿಗಳನ್ನು ಘೋಷಣೆ ಮಾಡಿಲ್ಲ. ಆದರೂ ಯಾರ್ಯಾರು ಸ್ಪರ್ಧಿಸುತ್ತಾರೆ ಎನ್ನುವುದು ಅಂತಿಮವಾಗಿದೆ. ಅದರಂತೆ ಮಂಡ್ಯದಿಂದ ಕುಮಾರಸ್ವಾಮಿ ಕಣಕ್ಕಿಳಿಯಲಿದ್ದು, ಏಪ್ರಿಲ್.4ರಂದು ನಾಮಪತ್ರ ಸಲ್ಲಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಬಾರಿಯೂ ಸಹ ಮಂಡ್ಯ ಲೋಕಸಭಾ ಚುನಾವಣೆ ರಂಗೇರಲಿದೆ.
ಕರ್ನಾಟಕದಲ್ಲಿ ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಮೂರು ಕ್ಷೇತ್ರಗಳಲ್ಲಿ ಜೆಡಿಎಸ್ ಸ್ಪರ್ಧಿಸಲಿದೆ. ಹಾಸನ, ಕೋಲಾರ ಮತ್ತು ಮಂಡ್ಯ ಕ್ಷೇತ್ರಗಳಲ್ಲಿ ಜೆಡಿಎಸ್ ಸ್ಪರ್ಧಿಸಲಿದೆ. ಇದೀಗ ಮಂಡ್ಯ ಜೆಡಿಎಸ್ ಅಭ್ಯರ್ಥಿಯಾಗಿ ಎಚ್ಡಿ ಕುಮಾರಸ್ವಾಮಿ ಅವರು ಏಪ್ರಿಲ್ 4ರಂದು ನಾಮಪತ್ರ ಸಲ್ಲಿಸಲಿದ್ದಾರೆ. ಅದೇ ರೀತಿಯಾಗಿ ಉಳಿದ ಎರಡು ಕ್ಷೇತ್ರಗಳಾದ ಹಾಸನದಲ್ಲಿ ಹಾಲಿ ಸಂಸದ ಪ್ರಜ್ವಲ್ ರೇವಣ್ಣ ಮತ್ತು ಕೋಲಾರ ಕ್ಷೇತ್ರದಿಂದ ಮಲ್ಲೇಶ್ ಬಾಬು ಸ್ಪರ್ಧಿಸಲಿದ್ದಾರೆ. ಕಳೆದ ಚುನಾವಣೆಯಲ್ಲಿ ಪುತ್ರ ನಿಖಿಲ್ ಕುಮಾರಸ್ವಾಮಿ ಸೋಲುಕಂಡಿದ್ದರು. ಆದ್ರೆ, ಈ ಬಾರಿ ಸ್ವತಃ ಕುಮಾರಸ್ವಾಮಿ ಕಣಕ್ಕಿಳಿಯುತ್ತಿರುವುದು ಈ ಬಾರಿ ಮತ್ತೆ ಮಂಡ್ಯ ಲೋಕಸಭಾ ಕ್ಷೇತ್ರ ಭಾರೀ ಸದ್ದು ಮಾಡುವುದಂತೂ ಸತ್ಯ. ಆದ್ರೆ, ಹಾಲಿ ಸಂಸದೆ ಸುಮಲತಾ ಅಂಬರೀಶ್ ನಡೆ ಏನು ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ.