ಬಿಜೆಪಿ ನಾಯಕ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಒಬ್ಬ ‘ಗೂಂಡಾ, ರೌಡಿ’. ಪ್ರಧಾನಿ ಮೋದಿ ಅರಿಗೆ ಇಂಥವರೇ ಸಹವರ್ತಿಗಳು ಎಂದು ಕಾಂಗ್ರೆಸ್ ಮುಖಂಡ, ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರ ಸಿದ್ದರಾಮಯ್ಯ ಟೀಕಿಸಿದ್ದಾರೆ. ಚಾಮರಾಜನಗರದ ಹನೂರಿನಲ್ಲಿ ಗುರುವಾರ ಕಾಂಗ್ರೆಸ್ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಅಮಿತ್ ಶಾ ಗುಜರಾತ್ನಲ್ಲಿ ಕೊಲೆ ಆರೋಪ ಎದುರಿಸುತ್ತಿದ್ದಾರೆ. ಅವರಿಗೆ ಅಪರಾಧ ಚಟುವಟಿಕೆಗಳ ಹಿನ್ನೆಲೆ ಇದೆ. ಆದರೆ ಈಗ ಅವರು ದೇಶದಲ್ಲಿ ಉನ್ನತ ಸ್ಥಾನದಲ್ಲಿದ್ದಾರೆ ಎಂದರು. ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ಮುಂದುವರಿಸಿದ ಯತೀಂದ್ರ, ನಿರುದ್ಯೋಗಿಗಳಿಗೆ 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಭರವಸೆ ನೀಡಿದ್ದರು. ಈಗ ಉದ್ಯೋಗ ಸೃಷ್ಟಿಸುವುದು ಕೇಂದ್ರ ಸರ್ಕಾರದ ಜವಾಬ್ದಾರಿಯಲ್ಲ ಎನ್ನುತ್ತಾರೆ. ಕಪ್ಪುಹಣ ತರುವುದಾಗಿ ಭರವಸೆ ನೀಡಿದರು. ಆದರೆ ಏನಾಯಿತು? ಸ್ವಿಸ್ ಬ್ಯಾಂಕ್ನಲ್ಲಿರುವ ಖಾತೆದಾರರ ಹೆಸರನ್ನು ಸಹ ಅವರು ಬಹಿರಂಗಪಡಿಸಿಲ್ಲ ಎಂದರು.
ಬಿಜೆಪಿ 400ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆಯುವುದಾಗಿ ಹೇಳಿಕೊಳ್ಳುತ್ತಿದೆ. 400 ಸೀಟು ಬಂದರೆ ಸಂವಿಧಾನ ಬದಲಿಸುವುದು ಅವರ ರಹಸ್ಯ ಅಜೆಂಡಾ. ದೇಶದ ಇತಿಹಾಸದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯ ಕತ್ತು ಹಿಸುಕುವ ಸರ್ಕಾರವಿದ್ದರೆ ಅದು ಮೋದಿ ಸರ್ಕಾರ ಎಂದು ಯತೀಂದ್ರ ಆಕ್ರೋಶ ವ್ಯಕ್ತಪಡಿಸಿದರು.