ನವದೆಹಲಿ: ಭಾರತದಲ್ಲಿ ಮಹಿಳೆಯರು ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳುವಲ್ಲಿ ಮುಕ್ತರಾಗಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಉದ್ಯಮಿ, ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಜತೆ ಸಂವಾದ ನಡೆಸಿದ ಅವರು, ಭಾರತದಲ್ಲಿ ಡಿಜಿಟಲ್ ಕ್ರಾಂತಿಯ ಬಗ್ಗೆ ಚರ್ಚಿಸಿದರು. ಇದೇ ವೇಳೆ, ಗ್ರಾಮೀಣ ಭಾರತದಲ್ಲಿ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ ಸ್ಥಾಪಿಸುವ ಮಹತ್ವಾಕಾಂಕ್ಷೆಯನ್ನು ಮೋದಿ ವ್ಯಕ್ತಪಡಿಸಿದರು.
ಉಭಯ ನಾಯಕರ ಸಂವಾದದ ಪ್ರೋಮೋವನ್ನು ಗುರುವಾರ ಬಿಡುಗಡೆ ಮಾಡಲಾಗಿತ್ತು. ಇದೀಗ ಸಂವಾದದ ಪೂರ್ತಿ ವಿಡಿಯೋ ಬಿಡುಗಡೆಯಾಗಿದೆ. ಪ್ರಧಾನಿ ಮೋದಿ ಸಹ ಎಕ್ಸ್ ಖಾತೆಯಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಬಿಲ್ ಗೇಟ್ಸ್ ಜತೆಗೆ ಒಳನೋಟವುಳ್ಳ ಒಂದು ಸಂವಾದ. ದಯವಿಟ್ಟು ನೋಡಿ ಎಂದು ಎಕ್ಸ್ ಪೋಸ್ಟ್ನಲ್ಲಿ ಮೋದಿ ಉಲ್ಲೇಖಿಸಿದ್ದಾರೆ.