ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ದೇಶದ ಪ್ರಧಾನಿಯಾಗಲಿದ್ದಾರೆ. ಉತ್ತರದ ರಾಜ್ಯಗಳಲ್ಲಿ ಬಿಜೆಪಿ ಅತಿ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ . ಆದರೆ ಕರ್ನಾಟಕದಲ್ಲಿ ಈ ಬಾರಿ ಬಿಜೆಪಿ ಗೆಲ್ಲೋದು ಅರ್ಧದಷ್ಟು ಮಾತ್ರ. ಕರ್ನಾಟಕದಲ್ಲಿ ಬಿಜೆಪಿ ಹೆಚ್ಚು ಸ್ಥಾನಗಳನ್ನು ಗೆಲ್ಲೋದು ಕಷ್ಟ ಎಂದು ಹಿರಿಯ ಸಾಹಿತಿ ಎಸ್ ಎಲ್ ಭೈರಪ್ಪ ಭವಿಷ್ಯ ನುಡಿದಿದ್ದಾರೆ. ಮೈಸೂರಿನ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಕಾಂಗ್ರೆಸ್ ಸ್ಟ್ರಾಂಗ್ ಆಗಿದೆ. ಇಲ್ಲಿ ಬಿಜೆಪಿ ಬಹಳ ವೀಕ್ ಆಗಿದೆ. ಉತ್ತರಪ್ರದೇಶದ ಮಾದರಿಯಲ್ಲಿ ನಮ್ಮ ರಾಜ್ಯದಲ್ಲೂ ಬಿಜೆಪಿ ಸರ್ಕಾರ ಇದ್ದಿದ್ದರೇ ಹೆಚ್ಚಿನ ಸೀಟು ಗೆಲ್ಲಬಹುದಿತ್ತು. ಕರ್ನಾಟಕದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ಸರ್ಕಾರಕ್ಕೆ ಅಧಿಕಾರಿಗಳ ಮೇಲೆ ಹಿಡಿತ ಇರಲಿಲ್ಲ. ಅದೇ ಕಾರಣದಿಂದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸೋತಿತು. ಆದರೀಗ ಕಾಂಗ್ರೆಸ್ ಸರ್ಕಾರಕ್ಕೆ ಅಧಿಕಾರಿಗಳ ಮೇಲೆ ಸಂಪೂರ್ಣ ಹಿಡಿತವಿದೆ. ಈ ಬಾರಿಯ ಚುನಾವಣೆಯಲ್ಲಿ ಮೋದಿ ಅಲೆ ಕಡಿಮೆ ಆಗಿದೆಯಾ ಎಂಬುದು ಗೊತ್ತಿಲ್ಲ ಎಂದು ಹಿರಿಯ ಸಾಹಿತಿ ಎಸ್ ಎಲ್ ಭೈರಪ್ಪ ಮೈಸೂರಿನಲ್ಲಿ ಹೇಳಿಕೆ ನೀಡಿದ್ದಾರೆ.
ಇನ್ನು ಸಂಸದ ಪ್ರತಾಪ್ ಸಿಂಹಗೆ ಬಿಜೆಪಿ ಟಿಕೆಟ್ ಕೈ ತಪ್ಪಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಸಂಸದ ಪ್ರತಾಪ್ ಸಿಂಹ ಆಕ್ರಮಕಾರಿ ಸ್ವಭಾವದ ಲೀಡರ್. ಸಂಸದನಾಗಿದ್ದ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಪ್ರತಾಪ್ ಸಿಂಹಗೆ ಮುಂದೆಯೂ ಸಾಕಷ್ಟು ಜವಾಬ್ದಾರಿಗಳು ಇವೆ. ಸಂಸದನಲ್ಲದಿದ್ದರೂ ಬೇರೆ ಕೆಲಸಗಳನ್ನು ಮಾಡಲು ಪ್ರತಾಪ್ ಸಿಂಹಗೆ ಅವಕಾಶಗಳಿವೆ. ಬಿಜೆಪಿ ಅಭ್ಯರ್ಥಿಯಾಗಿ ಯದುವೀರ್ ರನ್ನು ಆಯ್ಕೆ ಮಾಡಿರುವುದು ಒಳ್ಳೆಯ ಬೆಳವಣಿಗೆ. ಯದುವೀರ್ ಕೂಡ ಉನ್ನತ ವಿದ್ಯಾಭ್ಯಾಸ ಮಾಡಿದ್ದಾರೆ. ಯದುವೀರ್ ಕೂಡ ಉತ್ತಮ ಆಯ್ಕೆಯಾಗಿದ್ದಾರೆ ಎಂದು ಅಭಿಪ್ರಾಯಪಟ್ಟರು.