ಕಲಬುರಗಿ : ಆದಾಯ ತೆರಿಗೆ ಇಲಾಖೆಯು 1823 ಕೋಟಿ ರೂ.ಪಾವತಿಸುವಂತೆ ಕಾಂಗ್ರೆಸ್ಗೆ ನೋಟಿಸ್ ನೀಡಿದೆ. ಇದು ಬಿಜೆಪಿಯವರ ತೆರಿಗೆ ಭಯೋತ್ಪಾದನೆಯಾಗಿದ್ದು, ನಮ್ಮನ್ನು ಹೆದರಿಸುತ್ತಿದ್ದಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ಮಾಡಿದರು. ಕಲಬುರಗಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಐಟಿ, ಇಡಿ, ಸಿಬಿಐ ಬಿಜೆಪಿಯ ಹೊಸ ಘಟಕಗಳು. ಈ ಹೊಸ ಘಟಕಗಳಿಂದ ವಿಪಕ್ಷದವರಿಗೆ ಪ್ರೇಮ ಪತ್ರಗಳು ಬರುತ್ತಿವೆ. ಯಾವ ಆಧಾರದ ಮೇಲೆ ಇಲಾಖೆ ನೋಟಿಸ್ ನೀಡಿದೆ ಎಂಬುದು ಗೊತ್ತಿಲ್ಲ. ಪಕ್ಷದ ಇತಿಹಾಸದಲ್ಲಿ ಎಂದೂ ಕೂಡಾ ಈ ರೀತಿ ಆಗಿರಲಿಲ್ಲ ಎಂದು ತಿಳಿಸಿದರು.
ರಾಜಕೀಯ ಪಕ್ಷಗಳಿಗೆ ತೆರಿಗೆ ವಿನಾಯಿತಿ ಇದೆ. 14 ಲಕ್ಷ ರೂ. ಲೋಪ ಆಗಿದೆ ಅಂತ 1,823 ಕೋಟಿ ರೂ. ಪಾವತಿಸಿ ಅಂತ ಆದಾಯ ತೆರಿಗೆ ಇಲಾಖೆ ನೋಟಿಸ್ ನೀಡಿದೆ. 14 ಲಕ್ಷ ರೂ. ಬಗ್ಗೆ ದಾಖಲೆ ನೀಡಿದ್ದೇವೆ, ಆದರೂ ಕೂಡ ದಂಡ ಕಟ್ಟಲು ಹೇಳಿದ್ದಾರೆ. ಬಿಜೆಪಿಯ ಅನಾಮದೇಯ 92 ಪ್ರಕರಣಗಳಿವೆ. 4.5 ಲಕ್ಷಕ್ಕೆ ದಾಖಲೆ ಇಲ್ಲ. ಬಿಜೆಪಿಗೆ 2016-17ರಲ್ಲಿ 47 ಕೋಟಿ ರೂ. 2016-17ರಲ್ಲಿ ದೇಣಿಗೆ ಬಂದಿದೆ. ಇದಕ್ಕೆ ದಾಖಲೆ ಇಲ್ಲ ಎಂದು ತಿಳಿಸಿದ್ದಾರೆ.
ಐಟಿ, ಇಡಿ, ಸಿಬಿಐ ಬಿಜೆಪಿಯ ಸ್ಟಾರ್ ಪ್ರಚಾರಕರು. ಬಿಜೆಪಿ ಪಕ್ಷಕ್ಕೆ ಕೆಲವೊಂದು ಅನಾಮಧೇಯ ಖಾತೆಯಿಂದ ದೇಣಿಗೆ ಬಂದಿದೆ. ಇದು ಐಟಿ ಇಲಾಖೆಗೆ ಕಾಣುತ್ತಿಲ್ಲ. ಪ್ರಫುಲ್ ಪಟೇಲ್ ಬಿಜೆಪಿಗೆ ಸೇರಿ ಇನ್ನು ಹತ್ತು ತಿಂಗಳಾಗಿಲ್ಲ, ಆಗಲೇ ಸಿಬಿಐ ಪ್ರಫುಲ್ ಪಟೇಲ್ ಅವರಿಗೆ ಕ್ಲೀನ್ ಚಿಟ್ ನೀಡಿದೆ. ಇದನ್ನು ಯಾಕೆ ಚುನಾವಣೆ ಆಯೋಗ ನೋಡುತ್ತಿಲ್ಲ ಎಂದು ಪ್ರಶ್ನಿಸಿದರು.