ಪ್ರತಿನಿಧಿ ವರದಿ ವಿರಾಜಪೇಟೆ
ಕಾಂಗ್ರೆಸ್ ಪಕ್ಷದಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ಅದರ ಫಲವಾಗಿ ಪಕ್ಷ ನನ್ನನ್ನು ಗುರುತಿಸಿ ಟಿಕೆಟ್ ನೀಡಿದೆ. ತಮ್ಮೆಲ್ಲರ ಸಹಕಾರದಿಂದ ನಿಮ್ಮ ಸೇವೆ ಮಾಡಲು ಅವಕಾಶ ಮಾಡಿಕೊಡಿ ಎಂದು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಎಂ.ಲಕ್ಷ್ಮಣ್ ತಿಳಿಸಿದರು.
ವಿರಾಜಪೇಟೆಯ ಕೊಡವ ಸಮಾಜದಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ,
ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ತಾವೆಲ್ಲರೂ ಮತ ನೀಡಿ ಗೆಲ್ಲಿಸಿದ್ದಲ್ಲಿ, ಕ್ಷೇತ್ರದ ಶಾಸಕರೊಂದಿಗೆ ನಿಷ್ಠೆಯಿಂದ ಕೈ ಜೋಡಿಸಿ ಕ್ಷೇತ್ರದ ಅಭಿವೃದ್ಧಿಗೆ ದುಡಿಯುತ್ತೇನೆ. ಮೈಸೂರು ಕೊಡಗು ಕ್ಷೇತ್ರದ ಸಮಗ್ರ ಅಭಿವೃದ್ಧಿಯೊಂದಿಗೆ ಕೇಂದ್ರ ಸರ್ಕಾರದಿಂದ ನೂತನ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಕ್ಕೆ ತರುತ್ತೇವೆ ಎಂದು ಹೇಳಿದರು.
ದೇಶದ ಅಭಿವೃದ್ಧಿ ಹಾಗೂ ಜನಸಾಮಾನ್ಯರ ಹಿತ ಕಾಪಾಡುವ ಕಾಂಗ್ರೆಸ್ ಪಕ್ಷವು ಕೊಡಗು ಕ್ಷೇತ್ರಕ್ಕೆ ಮತಹತ್ವದ ಕೊಡುಗೆಯನ್ನು ನೀಡಿದೆ. ಕುಶಾಲನಗರ ಮತ್ತು ಪೊನ್ನಂಪೇಟೆ ಎಂಬ ಹೊಸ ತಾಲೂಕುಗಳ ರಚನೆ, ಭಾಗಮಂಡಲದ ಫ್ಲೈ ಓವರ್, ಮಡಿಕೇರಿ ಮೆಡಿಕಲ್ ಕಾಲೇಜು, ಕುಶಾಲನಗರದಲ್ಲಿಯನ ಇಂಜಿನಿಯರಿಂಗ್ ಕಾಲೇಜು, ವಿರಾಜಪೇಟೆ ಕೊಡವ ಹೆರಿಟೇಜ್ ಸೆಂಟರ್ ರಚನೆ, ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್ನಲ್ಲಿ 50, 100 ಕೋಟಿ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ. ಹೀಗೆ ಹತ್ತಾರು ಅಭಿವೃದ್ಧಿ ಕಾರ್ಯವನ್ನು ಕಾಂಗ್ರೆಸ್ ಪಕ್ಷ ಮಾಡಿದೆ ಎಂದು ಹೇಳಿದರು.
ಕೊಡಗು ಜಿಲ್ಲೆಯ ದಶಕಗಳ ಬೇಡಿಕೆಗಳಾದ ಕೊಡವ ಭಾಷೆಯನ್ನು ಸಂವಿಧಾನದ 8ನೇ ಪರಿಶ್ಚೇದಕ್ಕೆ ಸೇರಿಸುವುದು, ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರಿಗೆ ಭಾರತ ರತ್ನ ಗೌರವ, ಕಾಫಿ ಬೆಳೆಗಾರರಿಗೆ ಬೆಂಬಲ ಬೆಲೆ ಪ್ಯಾಕೇಜ್ ಘೋಷಣೆ, ಕೊಡಗಿನ ಪ್ರವಾಸೋದ್ಯಮ ಅಭಿವೃದ್ಧಿ ಪ್ರಾಧಿಕಾರ, ಕೊಡಗಿನ ಸೈನಿಕ ಶಾಲೆಯಲ್ಲಿ ಕೊಡಗಿನವರಿಗೆ ಶೇ50 ರಷ್ಟು ಸೀಟು ಮೀಸಲು, ಮಾಜಿ ಸೈನಿಕರಿಗೆ ಜಾಗ ಮಂಜೂರು ಈ ರೀತಿಯ ಮಹತ್ವದ ಬೇಡಿಕೆಯನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದು ತಿಳಿಸಿದರು.
ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ.ಎಚ್.ಸಿ.ಮಹದೇವಪ್ಪ ಮಾತನಾಡಿ, ನಾನು ಕೊಡಗು ಜಿಲ್ಲೆಯ ಉಸ್ತುವಾರಿ ಸಚಿವನಾಗಿದ್ದ ಸಂದರ್ಭದಲ್ಲಿ ಬಹಳ ಸಂತೋಷದಿಂದ ಉತ್ತಮ ಕೆಲಸ ಕಾರ್ಯಗಳನ್ನು ಮಾಡಿದ್ದೇನೆ. ಗುಂಡಿ ಬಿದ್ದಿದ್ದ ರಸ್ತೆಗಳನ್ನು ಅಭಿವೃದ್ಧಿಪಡಿಸಿ ಜನ ಸಾಮಾನ್ಯರಿಗೆ ಅನುಕೂಲವಾಗುವಂತೆ ಮಾಡಿಕೊಡಲಾಗಿದೆ. ಕೊಡಗು ಜಿಲ್ಲೆಯ ಜನರು ಸುಸಂಸ್ಕೃತರು ಹಾಗೂ ಸ್ನೇಹ ಜೀವಿಗಳು ಎಂದು ತಿಳಿಸಿದರು.
2013 ರಲ್ಲಿ ಕಾಂಗ್ರೆಸ್ ಪಕ್ಷದ ಅಧಿಕಾರದ ಅವಧಿಯಲ್ಲಿ ಕೊಡಗಿನ ಹೆಚ್ಚು ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗಿದೆ. ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ ಹಾಗೂ ಮಂತರ್ ಗೌಡ ಅವರು ಕ್ಷೇತ್ರದ ಅಭಿವೃದ್ದಿಗೆ ಶ್ರಮಿಸುತ್ತಿದ್ದಾರೆ. ಇನ್ನಷ್ಟು ಅಭಿವೃದ್ಧಿಗಾಗಿ ಈ ಭಾರಿ ಲೋಕಸಭಾ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿ ಲಕ್ಷ್ಮಣ್ ಅವರನ್ನು ಗೆಲ್ಲಿಸಿ ಪಾರ್ಲಿಮೆಂಟ್ ಗೆ ಕಳುಹಿಸಿ ಎಂದು ಹೇಳಿದರು.
ಪಶುಸಂಗೋಪನೆ ಇಲಾಖೆಯ ಸಚಿವರಾದ ಕೆ.ವೆಂಕಟೇಶ್ ಮಾತನಾಡಿ, ಕೊಡಗಿನ ಎರಡು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸುವುದು ಸಂತಸವಾಗಿದೆ. ಕ್ಷೇತ್ರದ ಜನರು ನಿರೀಕ್ಷೆಗೂ ಮೀರಿ ಬೆಂಬಲಿಸಿ, ಉತ್ತಮ ಸರ್ಕಾರವನ್ನು ನಿರ್ಮಾಣ ಮಾಡಲು ಕ್ಷೇತ್ರದ ಜನರು ಆಶೀರ್ವಾದ ಮಾಡಿದ್ದಾರೆ ಎಂದರು.
ಕಳೆದ ಚುನಾವಣೆಯಲ್ಲಿ ನಮ್ಮ ಪಕ್ಷ ನೀಡಿದ್ದ ಭರವಸೆ ಗಳನ್ನು ಗೆದ್ದ ತಕ್ಷಣ ಈಡೇರಿಸಿದ್ದೇವೆ. ಐದು ಗ್ಯಾರಂಟಿಗಳಾದ ಗೃಹಜ್ಯೋತಿ, ಗೃಹಲಕ್ಷ್ಮಿ, ಅನ್ನಭಾಗ್ಯ, ಯುವನಿಧಿ, ಶಕ್ತಿ ಯೋಜನೆಗಳನ್ನು ನೀಡಿ ನುಡಿದಂತೆ ನಡೆದುಕೊಂಡಿದ್ದೇವೆ ಎಂದು ತಿಳಿಸಿದರು.
ಕಾಂಗ್ರೆಸ್ ಸರ್ಕಾರ ಮಾಡಿದ ಅಭಿವೃದ್ಧಿಯ ಕೆಲಸಗಳು ನಿಮ್ಮ ಮುಂದೆ ಇದೆ. ಗ್ಯಾರಂಟಿಯ ಯೋಜನೆಗಳ ಜೊತೆಗೆ ಮತ್ತಷ್ಟು ಅಭಿವೃದ್ಧಿಯನ್ನು ಮಾಡಲಾಗಿದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಮತಗಳ ಅಂತರದಲ್ಲಿ ಗೆಲ್ಲಿಸಿ ಎಂದರು.
ಇದೇ ಸಂದರ್ಭದಲ್ಲಿ ಸರಿ ಸುಮಾರು 100 ಕ್ಕೂ ಹೆಚ್ಚು ಮುಖಂಡರು ಹಾಗೂ ಕಾರ್ಯಕರ್ತರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
ಸಭೆಯಲ್ಲಿ ಮಾಜಿ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ, ಮಾಜಿ ವಿಧಾನ ಪರಿಷತ್ ಸದಸ್ಯರಾದ ಅರುಣ್ ಮಾಚಯ್ಯ, ರಾಜ್ಯ ಗ್ಯಾರಂಟಿ ಅನುಷ್ಠಾನ ಸಮಿತಿಯ ಉಪಾಧ್ಯಕ್ಷೆ ಪುಷ್ಪಾ ಅಮರನಾಥ್, ಸುಶ್ರೂತ್ ಗೌಡ ಸೇರಿದಂತೆ ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.