ಮೈಸೂರು : ವರುಣ ಕ್ಷೇತ್ರಕ್ಕೆ ರಾಜೀನಾಮೆ ಕೊಡಿ. ನಾನು ಚಾಮುಂಡೇಶ್ವರಿ ಕ್ಷೇತ್ರಕ್ಕೆ ರಾಜೀನಾಮೆ ಕೊಡ್ತಿನಿ. ಬನ್ನಿ ಇಬ್ಬರು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಚುನಾವಣೆಗೆ ನಿಲ್ಲೋಣಾ. ಯಾರು ಗೆಲುತ್ತಾರೆ ನೋಡೋಣಾ ಎಂದು ಸಿಎಂ ಸಿದ್ದರಾಮಯ್ಯಗೆ ಶಾಸಕ ಜಿ.ಟಿ. ದೇವೇಗೌಡ ಬಹಿರಂಗ ಸವಾಲು ಹಾಕಿದ್ದಾರೆ. ಜಿಟಿ ದೇವೇಗೌಡ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಏನೂ ಕಡಿದು ಕಟ್ಟೆ ಹಾಕಿದ್ದಾರೆ ಎಂಬ ಸಿಎಂ ಮಾತಿಗೆ ಕೆಂಡಮಂಡಲರಾದ ಜಿಟಿಡಿ, ಸಿದ್ದರಾಮಯ್ಯ ಗೆ ಅಭಿವೃದ್ಧಿ ಅಂದರೆ ಏನೂ ಅಂತಾ ಗೊತ್ತಿಲ್ಲ. ಅಭಿವೃದ್ಧಿ ಮಾಡದೆ ರಾಜಕೀಯದಲ್ಲಿ ಬೆಳೆದಿದ್ದು ಅಂದರೆ ಅದು ಸಿದ್ದರಾಮಯ್ಯ ಮಾತ್ರ. ಚಾಮುಂಡೇಶ್ವರಿ ಕ್ಷೇತ್ರಕ್ಕೆ ನೀವು ಮಾಡಿದ ಅಭಿವೃದ್ಧಿ ಕಾರ್ಯದ ಶ್ವೇತ ಪತ್ರ ಹೊರಡಿಸಿ. ಚಾಮುಂಡೇಶ್ವರಿ ಉಪ ಚುನಾವಣೆ ವೇಳೆ ನಾನು ಜೆಡಿಎಸ್ ಪರ ಪ್ರಚಾರಕ್ಕೆ ಹೋಗಲಿಲ್ಲ. ಅದಕ್ಕಾಗಿ ಆಗ ನೀವು ಗೆದ್ದರಿ. ನನ್ನನ್ನು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲಿಸಲು ಎಷ್ಟು ಸಲ ಪ್ರಯತ್ನ ಪಟ್ರಿ? ನನ್ನ ಕಾಯೋಕೆ ದೈವ ಇಲ್ವಾ, ಧರ್ಮ ಇಲ್ವಾ ಅದು ಹೇಗೆ ಸೋಲಿಸ್ತಿರಿ ನೀವು ನನ್ನ? ನೀವು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋತ ಮೇಲೆ ಮುಗಿದು ಹೋಯ್ತು. ಯಾಕೆ ಪದೇ ಪದೇ ಹೀಗೆ ಮಾತಾಡ್ತಿರಿ ಎಂದು ಕಿಡಿಕಾರಿದರು.