– ಎಂಎಲ್ಸಿ ಎಚ್. ವಿಶ್ವನಾಥ್ ಹೇಳಿಕೆ
ಪ್ರತಿನಿಧಿ ವರದಿ ಮೈಸೂರು
ಮೈಸೂರಿನ ಯದುವಂಶದ ಸರ್ವಾನುಮತದಿಂದ ಅವಿರೋಧವಾಗಿ ಆಯ್ಕೆ ಮಾಡುವ ಮೂಲಕ ಯದುವಂಶಕ್ಕೆ ಗೌರವ ಸೂಚಿಸಬೇಕಿದೆ ಎಂದು ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಸಲಹೆ ಮಾಡಿದರು.
ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಅವರು ಬುಧವಾರ ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಅವರನ್ನು ಭೇಟಿ ಮಾಡಿ ಚುನಾವಣೆಯಲ್ಲಿ ಬೆಂಬಲ ನೀಡುವಂತೆ ಕೋರಿದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೊಸ ಹೊಸ ಆವಿಷ್ಕಾರಗಳನ್ನು ಮೈಸೂರಿಗೆ ಕೊಡುಗೆಯಾಗಿ ಕೊಟ್ಟವರು ಮೈಸೂರು ಅರಸರು. ಇಂದು ಆ ಅರಸರ ಕುಡಿ ಇಂದು ಚುನಾವಣಾ ಕಣದಲ್ಲಿದೆ. ಮೈಸೂರಿಗೆ ಮಹಾರಾಜರ ಕೊಡುಗೆ ಅಪರಿಮಿತ. ಅಂತಹ ವಂಶದ ಕುಡಿಯನ್ನು ಅವಿರೋಧವಾಗಿ ಆಯ್ಕೆ ಮಾಡುವ ಮೂಲಕ ಯದುವಂಶಕ್ಕೆ ಎಲ್ಲರೂ ಗೌರವ ಸೂಚಿಸಬೇಕಿದೆ ಎಂದರು.
ರಾಜಕೀಯ ಜಿದ್ದಾಜಿದ್ದಿ ಬೇಡ:
ರಾಜಕೀಯ ಲೇಪನ ಹೊರತುಪಡಿಸಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜಪ್ರಭುತ್ವಕ್ಕೆ ಅದರದ್ದೇ ಆದ ಮನ್ನಣೆ ಇದೆ. ನಿಮ್ಮ ರಾಜಕೀಯ ಜಿದ್ದಾಜಿದ್ದಿ ರಾಜ್ಯದ ೨೭ ಕ್ಷೇತ್ರಗಳಲ್ಲಿ ಇಟ್ಟುಕೊಳ್ಳಿ. ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಯಾವುದೇ ವಿಧವಾದ ರಾಜಕೀಯ ಲೇಪನಗಳನ್ನು ಮಾಡದೆ ರಾಜವಂಶದ ಕುಡಿಯನ್ನು ಅವಿರೋಧವಾಗಿ ಲೋಕಸಭೆ ಕಳುಹಿಸಬೇಕಿದೆ. ಇದಕ್ಕೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಶಿವಕುಮಾರ್ ಸೇರಿದಂತೆ ಎಲ್ಲರೂ ಸಹಕಾರ ಕೊಡಲಿ. ಕುಡಿಯುವ ನೀರು, ಕರೆಂಟ್, ಶಾಲೆ, ಆಸ್ಪತ್ರೆ, ರಸ್ತೆ ಸೇರಿದಂತೆ ಎಲ್ಲಾ ಯೋಜನೆಗಳಲ್ಲಿ ಮಹಾರಾಜರ ಕೊಡುಗೆ ಇದೆ. ಇದನ್ನು ನೆನಪು ಮಾಡಿಕೊಂಡು ಅರಸರ ಕುಡಿಯಾದ ಯದುವೀರ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡುವ ಮನಸ್ಸು ಮಾಡಲಿ ಎಂದರು.
=================
ಬಾಕ್ಸ್
ವಿಶ್ವನಾಥ್ ನಿವಾಸಕ್ಕೆ ವಿಜಯೇಂದ್ರ ಭೇಟಿ
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ಹಲವು ನಾಯಕರು ಎಚ್. ವಿಶ್ವನಾಥ್ ಅವರ ನಿವಾಸಕ್ಕೆ ಭೇಟಿ ನೀಡಿದರು. ಬಿಜೆಪಿ ಅಭ್ಯರ್ಥಿ ಯದುವೀರ್ ಒಡೆಯರ್ ಅವರೊಂದಿಗೆ ವಿಶ್ವನಾಥ್ ಅವರ ನಿವಾಸಕ್ಕೆ ತೆರಳಿದ ಬಿಜೆಪಿ ನಾಯಕರು, ಲೋಕಸಭಾ ಚುನಾವಣೆಯಲ್ಲಿ ಬೆಂಬಲ ನೀಡುವಂತೆ ಮನವಿ ಮಾಡಿದರು. ಶಾಸಕ ಟಿ.ಎಸ್. ಶ್ರೀವತ್ಸ, ಪ್ರಮುಖರಾದ ಡಿ. ಮಾದೇಗೌಡ, ಕವೀಶ್ ಗೌಡ, ಎಂ. ರಾಜೇಂದ್ರ, ಸಿದ್ದರಾಜು, ಶಿವಕುಮಾರ್ ಇತರರಿದ್ದರು.
=================
ಕೋಟ್
ಜಾತಿ ವಿಚಾರ ಮಾತನಾಡಬೇಡಿ, ನಾವೆಲ್ಲರೂ ಒಕ್ಕಲಿಗರೇ, ಭೂಮಿಪುತ್ರರೆ. ಅನ್ನದಾತರು ಯಾವುದೇ ಜಾತಿ, ಧರ್ಮ, ಉಪ ಜಾತಿಯವರಲ್ಲ ಎಲ್ಲರೂ ಒಂದೇ. ಅನ್ನದಾತರು, ರೈತರಿಗೆ ಅಣೆಕಟ್ಟು ಕಟ್ಟಿ ನೀರು ಕೊಟ್ಟವರು ಅರಸರು. ನಮ್ಮನ್ನು ಸಾಕಿ, ಸಲುಹಿದ ಮಹಾರಾಜರು, ಮೈಸೂರು ಸಂಸ್ಥಾನ ಪ್ರತಿ ಪ್ರಜೆಯ ಹೃದಯದಲ್ಲಿ ಅಜರಾಮರವಾಗಿರಬೇಕು.
ಎಚ್.ವಿಶ್ವನಾಥ್, ಎಂಎಲ್ಸಿ