ಮೈಸೂರು: ಲೋಕಸಭೆ ಚುನಾವಣೆಗೆ ಚಾಮರಾಜನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸುನಿಲ್ ಬೋಸ್ ಪರ ಚುನಾವಣಾ ಪ್ರಚಾರ ಕೈಗೊಂಡಿದ್ದ ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರಗೆ ಪ್ರತಿಭಟನೆಯ ಬಿಸಿ ತಟ್ಟಿದೆ. ಚುನಾವಣಾ ಬಹಿಷ್ಕಾರದ ಬೆದರಿಕೆ ಹಾಕಿರುವ ಪ್ರತಿಭಟನಾಕಾರರು, ಯತೀಂದ್ರರನ್ನು ತರಾಟೆಗೆ ತೆಗೆದುಕೊಂಡ ಘಟನೆ ನಂಜನಗೂಡು ತಾಲೂಕು ಮಲ್ಲುಪುರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನಡೆದಿದೆ. ಇದರೊಂದಿಗೆ ಮುಖ್ಯಮಂತ್ರಿಗಳ ತವರಿನಲ್ಲೇ ಚುನಾವಣಾ ಬಹಿಷ್ಕಾರದ ಎಚ್ಚರಿಕೆ ಕೇಳಿಬಂದಂತಾಗಿದೆ. ನಂಜನಗೂಡು ತಾಲೂಕು ಮಲ್ಲುಪುರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರುವ ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆ ಬಳಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಹಲವು ದಿನಗಳಿಂದ ಪ್ರತಿಭಟನೆ ನಡೆಯುತ್ತಿದೆ. ಈ ಮಧ್ಯೆ, ಚುನಾವಣಾ ಪ್ರಚಾರಕ್ಕಾಗಿ ಮಲ್ಲುಪುರಕ್ಕೆ ಭೇಟಿ ನೀಡಿದ ಯತೀಂದ್ರ ಪ್ರತಿಭಟನಾ ನಿರತ ರೈತರನ್ನು ಭೇಟಿಯಾಗಿ ಮತ ಯಾಚಿಸಿದರು. ಈ ವೇಳೆ, ಬೇಡಿಕೆಗಳನ್ನು ಈಡೇರಿಸುವಂತೆ ಯತೀಂದ್ರರನ್ನು ರೈತರು ಒತ್ತಾಯಿಸಿದರು.
ಚುನಾವಣೆಗೋಸ್ಕರ ಬಂದಿದ್ದೀರಿ: ರೈತರ ಆಕ್ರೋಶ
ಪ್ರತಿಭಟನಾ ನಿರತ ರೈತರು ಸಿಟ್ಟಾಗುತ್ತಿದ್ದಂತೆಯೇ ಅವರನ್ನು ಓಲೈಸಲು ಯತೀಂದ್ರ ಮುಂದಾದರು. ಆದರೆ, ಇದನ್ನು ಲೆಕ್ಕಿಸದ ರೈತರು, ಚುನಾವಣೆಗೋಸ್ಕರ ಇಲ್ಲಿಗೆ ಬಂದಿದ್ದೀರಿ. ಇಲ್ಲದಿದ್ದರೆ ನೀವು ಯಾವುದೇ ಕಾರಣಕ್ಕೂ ಬರುತ್ತಿರಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕಾರ್ಖಾನೆಯವರು ನಮ್ಮ ಮಾತನ್ನು ಕೇಳುತ್ತಿಲ್ಲ ಎಂದು ರೈತರು ಹೇಳಿದರು. ಇದಕ್ಕುತ್ತರಿಸಿದ ಯತೀಂದ್ರ, ಇದನ್ನು ನಮ್ಮ ತಂದೆಯವರ ಗಮನಕ್ಕೆ ತರುತ್ತೇನೆ ಎಂದರು. ಇದನ್ನು ಕೇಳುತ್ತಿದ್ದಂತೆಯೇ ಕುಪಿತಗೊಂಡ ಪ್ರತಿಭಟನಾಕಾರರು, ‘ಇನ್ನೂ ಈ ವಿಚಾರವನ್ನು ನಿಮ್ಮ ತಂದೆಯವರ ಗಮನಕ್ಕೆ ತಂದಿಲ್ಲವೇ’ ಎಂದು ವಾಗ್ದಾಳಿ ನಡೆಸಿದರು.