– ಹಾಸನದಲ್ಲಿ ಮೈತ್ರಿ ವಿಚಾರದಲ್ಲಿ ನಿಲ್ಲದ ಮುನಿಸು
– ಮಾಜಿ ಶಾಸಕ ಪ್ರೀತಂಗೌಡ ಮಾರ್ಮಿಕ ಹೇಳಿಕೆ
ಪ್ರತಿನಿಧಿ ವರದಿ ಮೈಸೂರು
ಹಾಸನ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್-ಬಿಜೆಪಿ ನಡುವಿನ ಮೈತ್ರಿ ವಿಚಾರದಲ್ಲಿ ಅಸಮಾಧಾನ ಹೊಂದಿರುವ ಮಾಜಿ ಶಾಸಕ ಪ್ರೀತಂಗೌಡ, ಎನ್ಡಿಎ ಅಭ್ಯರ್ಥಿಗೆ ಹೊಳೆನರಸೀಪುರದ ವಿಧಾನಸಭಾ ಕ್ಷೇತ್ರದಲ್ಲಿ ಬರುವ ಲೀಡ್ಗಿಂತ ಒಂದು ಮತ ಹೆಚ್ಚು ಲೀಡ್ ಹಾಸನದಲ್ಲಿ ಬರುತ್ತದೆ, ಇದಕ್ಕಿಂತ ಇನೇನ್ನು ಹೇಳಬೇಕು ಹೇಳಿ ಎಂದು ಮಾರ್ಮಿಕವಾಗಿ ಹೇಳಿದರು.
ಮೈಸೂರಿನಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಯಾವ ಬೆಂಬಲಿಗರು ಕಾಂಗ್ರೆಸ್ ಜೊತೆಗೆ ಹೋಗಿಲ್ಲ, ಈಗ ಹೋಗಿರುವವರು ಯಾರೋ ಒಬ್ಬ ಬೂತ್ ಅಧ್ಯಕ್ಷ ಕೂಡ ಅಲ್ಲ. ಯಾರೋ ಟೀ ಕೂಡಿದ ಕೂಡಲೇ ಅಥವಾ ಪ್ರಚಾರ ಪತ್ರವನ್ನು ಕೊಟ್ಟ ಕೂಡಲೇ ಅವರು ಕಾಂಗ್ರೆಸ್ ಸೇರಿದಂತೆ ಆಗುವುದಿಲ್ಲ. ನಾವೇ ಕಾಂಗ್ರೆಸ್ ಅವರನ್ನು ಇಲ್ಲಿಗೆ ಕರೆದುಕೊಂಡು ಬರುವ ಪ್ರಯತ್ನ ಮಾಡುತ್ತಿದ್ದೇನೆ. ಇಲ್ಲಿಂದ ಅಲ್ಲಿಗೆ ಹೋಗೊ ಪ್ರಶ್ನೆ ಯಾರಿಗೆ ಬರುತ್ತದೆ. ನಮ್ಮ ಕಾರ್ಯಕರ್ತರ ಪ್ರತ್ಯೇಕ ಸಭೆಯ ಅಗತ್ಯ ಏನು ಇಲ್ಲ. 2ನೇ ತಾರೀಖು ಸಭೆ ಮಾಡಿ ಕೆಲಸ ಮಾಡಲು ಹೇಳಿದ್ದೇನೆ. ಎಲ್ಲರೂ ಎನ್ಡಿಎ ಅಭ್ಯರ್ಥಿ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಸುಮ್ಮನೆ ಪದೇ ಪದೆ ಊಹಾಪೋಹಗಳಿಗೆ ಉತ್ತರ ಕೊಡಲು ಆಗುವುದಿಲ್ಲ. ಎನ್ಡಿಎ ಅಭ್ಯರ್ಥಿ ಪರ ಕೆಲಸ ಮಾಡುತ್ತೇವೆ ಹಾಗೂ ಅವರನ್ನು ಗೆಲ್ಲಿಸುತ್ತೇವೆ ಎಂದು ತಮ್ಮ ಹಾಗೂ ಪ್ರಜ್ವಲ್ ನಡುವಿನ ಕಿತ್ತಾಟದ ವಿಚಾರವಾಗಿ ಪ್ರತಿಕ್ರಿಯೆ ನೀಡಿದರು.
ಪ್ರಚಾರ ಮಾಡ್ತಿನಿ ಎನ್ನದ ಪ್ರೀತಂ: ಹಾಸನದಲ್ಲಿ ಮೈತ್ರಿ ಬಗೆಗಿನ ಅಸಮಾಧಾನ ಇಂದಿಗೂ ಶಮನವಾಗಿಲ್ಲ ಎಂಬುದನ್ನು ಮಾಜಿ ಶಾಸಕ ಪ್ರೀತಮ್ ಗೌಡ, ಮತ್ತೊಮ್ಮೆ ಪರೋಕ್ಷವಾಗಿ ಸಾಬೀತುಪಡಿಸಿದ್ದಾರೆ. ಎನ್ಡಿಎ ಅಭ್ಯರ್ಥಿ ಪರವಾಗಿ ಹಾಸನದದಲ್ಲಿ ಪ್ರಚಾರ ಮಾಡುವ ವಿಚಾರವಾಗಿ ಪ್ರತಿಕ್ರಿಯಿಸಿದ ಪ್ರೀತಂಗೌಡ, ತಮ್ಮ ಹೇಳಿಕೆ ವೇಳೆ ಒಮ್ಮೆಯೂ ಸಹ ಪ್ರಚಾರ ಮಾಡುತ್ತೇನೆಂದು ಹೇಳಲಿಲ್ಲ. ಇತ್ತ ಎನ್ಡಿಎ ಅಭ್ಯರ್ಥಿಯಾದ ಪ್ರಜ್ವಲ್ ರೇವಣ್ಣ ಅವರ ಹೆಸರನ್ನು ಹೇಳದ ಪ್ರೀತಂಗೌಡ, ಅತ್ತ ಅವರ ಪರವಾಗಿ ಪ್ರಚಾರ ಮಾಡುತ್ತೇನೆಂದು ಸಹ ಹೇಳಲಿಲ್ಲ. ಈ ವಿಷಯವಾಗಿ ಸುದ್ದಿಗಾರರು ಎಷ್ಟೇ ಬಾರಿ ಪ್ರಶ್ನೆ ಮಾಡಿದರು, ಪ್ರಚಾರ ಮಾಡುವ ವಿಚಾರವಾಗಿ ಒಮ್ಮೆಯೂ ಸಹ ಉತ್ತರ ನೀಡಲಿಲ್ಲ. ಈಗಾಗಲೇ ಸಭೆ ನಡೆಸಿದ್ದೇನೆ, ಹಬ್ಬಕ್ಕೆ ಹಾಸನಕ್ಕೆ ಹೋಗುತ್ತೇನೆ ಎಂದಷ್ಟೇ ಹೇಳಿದರು.