ಬೆಂಗಳೂರು: ಮಾರ್ಚ್ 1ರಿಂದ ಮಾರ್ಚ್ 22ರವರೆಗೆ ನಡೆದಿದ್ದ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಬುಧವಾರ ಪ್ರಕಟಗೊಂಡಿದೆ. ಬೆಂಗಳೂರಿನಲ್ಲಿ ಶಿಕ್ಷಣ ಇಲಾಖೆ ಸುದ್ದಿಗೋಷ್ಠಿ ನಡೆಸಿ ಫಲಿತಾಂಶ ಪ್ರಕಟಿಸಿದೆ. ಈ ಬಾರಿ, ಶೇ 81.15 ಮಂದಿ ಉತ್ತೀರ್ಣರಾಗಿದ್ದಾರೆ. 11 ಗಂಟೆಗೆ ಅಧಿಕೃತ ವೆಬ್ಸೈಟ್ನಲ್ಲಿ ಫಲಿತಾಂಶ ಪ್ರಕಟವಾಗಲಿದ್ದು, ವಿದ್ಯಾರ್ಥಿಗಳು ಲಾಗಿನ್ ಕ್ರೆಡೆನ್ಶಿಯಲ್ಸ್ ನಮೂದಿಸುವ ಮೂಲಕ ಪಿಯು ಮಂಡಳಿಯ ಅಧಿಕೃತ ವೆಬ್ಸೈಟ್ karresults.nic.in ಮತ್ತು pue.kar.nic ಮೂಲಕ ದ್ವಿತೀಯ ಪಿಯು ಫಲಿತಾಂಶಗಳನ್ನು ಪರಿಶೀಲಿಸಬಹುದಾಗಿದೆ.
2024 ರ ದ್ವಿತೀಯ ಪಿಯು ಪರೀಕ್ಷೆಗೆ 3.3 ಲಕ್ಷ ಹುಡುಗರು ಮತ್ತು 3.6 ಲಕ್ಷ ಹುಡುಗಿಯರು ಹಾಜರಾಗಿದ್ದರು. ರಾಜ್ಯದಾದ್ಯಂತ 1,124 ಕೇಂದ್ರಗಳಲ್ಲಿ ನಡೆದಿದ್ದ ಪರೀಕ್ಷೆಗೆ ಒಟ್ಟು 6.98 ಲಕ್ಷ ವಿದ್ಯಾರ್ಥಿಗಳು ಹಾಜರಾಗಿದ್ದರು.
ಕಳೆದ ಬಾರಿ ಮೇಲುಗೈ ಸಾಧಿಸಿದ್ದ ವಿದ್ಯಾರ್ಥಿನಿಯರು
ಕಳೆದ ವರ್ಷದ, ಅಂದರೆ 2023 ರ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿನಿಯರು ಮೇಲುಗೈ ಸಾಧಿಸಿದ್ದರು. ಪರೀಕ್ಷೆಗೆ ಹಾಜರಾಗಿದ್ದ ವಿದ್ಯಾರ್ಥಿನಿಯರ ಪೈಕಿ ಶೇಕಡಾ 80.25 ರಷ್ಟು ಉತ್ತೀರ್ಣರಾಗಿದ್ದರೆ, ವಿದ್ಯಾರ್ಥಿಗಳ ಪೈಕಿ ಶೇಕಡಾ 69.05 ರಷ್ಟು ಮಂದಿ ಉತ್ತೀರ್ಣರಾಗಿದ್ದರು. ಒಟ್ಟಾರೆ ಉತ್ತೀರ್ಣ ಪ್ರಮಾಣ ಶೇಕಡಾ 74.67 ರಷ್ಟಿತ್ತು. ಒಟ್ಟು 7,26,195 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.