ಕಲಬುರಗಿ: ಲೋಕಸಭಾ ಚುನಾವಣೆ ಹಿನ್ನಲೆ ಬಿಸಿಲ ನಾಡು ಕಲಬುರಗಿಯಲ್ಲಿ ಇಂದು(ಏ.12) ಕಾಂಗ್ರೆಸ್ ಅಬ್ಬರದ ಪ್ರಚಾರ ನಡೆಸಿದ್ದು, ಈ ವೇಳೆ ಮಾತನಾಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ‘ಕಾಂಗ್ರೆಸ್ನ 25 ಗ್ಯಾರಂಟಿಗಳಿದ್ದು, ಎಲ್ಲ ಭರವಸೆ ಈಡೇರಿಸುತ್ತೇವೆ. ಎಲ್ಲೇ ಕೇಳಿದರೂ ನಾನು ಒಳ್ಳೆಯ ಕೆಲಸ ಮಾಡಿದ್ದೇನೆಂದು ಹೇಳುತ್ತಿರಾ, ಆದರೆ, ಮತಗಟ್ಟೆಗೆ ಹೋದಾಗ ನಿಮಗೆ ಏನು ಅನಿಸುತ್ತೋ ಗೊತ್ತಿಲ್ಲ, ನಮ್ಮನ್ನೇ ಮರೆತು ಬಿಡ್ತೀರಾ ಎಂದು ಮಲ್ಲಿಕಾರ್ಜುನ ಖರ್ಗೆ ಬೇಸರ ವ್ಯಕ್ತಪಡಿಸಿದರು.
ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣಗೆ ವೋಟ್ ಕೊಟ್ಟು ನೋಡಿ. 5 ವರ್ಷಗಳಲ್ಲಿ ಕಲಬುರಗಿಯಲ್ಲಿ ಬದಲಾವಣೆ ಆಗುತ್ತದೆ. ನಾನು ಇನ್ನೂ ಸತ್ತಿಲ್ಲ, ಜನರ ಸೇವೆ ಮಾಡಲು ಬದ್ಧನಾಗಿದ್ದೇನೆ. ಭಾಷಣದ ವೇಳ ಮಲ್ಲಿಕಾರ್ಜುನ ಖರ್ಗೆ ಭಾವುಕರಾದರು. ‘ನನ್ನ ಗುರಿ ನಿಜವಾಗಿಯೂ ಕಲ್ಯಾಣ ಕರ್ನಾಟಕ ಮಾಡುವುದಾಗಿದೆ. ಕಲ್ಯಾಣ ಕರ್ನಾಟಕ ಭಾಗಕ್ಕೆ 371ಜೆ ಸ್ಥಾನಮಾನ ತಂದು ಕೊಟ್ಟಿದ್ದೇನೆ. ಈ ಮೂಲಕ ಸಂವಿಧಾನದ ಪುಸ್ತಕದಲ್ಲಿ ಕಲಬುರಗಿ ಹೆಸರು ಸೇರಿಸಿದ್ದೇನೆ ಎಂದರು.
ಇದರ ಜೊತೆಗೆ ಕೇಂದ್ರಿಯ ವಿಶ್ವ ವಿದ್ಯಾಲಯ, ಇಎಸ್ಐ, ಜವಳಿ ಪಾರ್ಕ್, ನ್ಯಾಷನಲ್ ಹೈವೇ ಎಲ್ಲವೂ ಮಾಡಿದ್ದೆ. ಬಿಜೆಪಿಯವರಿಗೆ ಈ ಭಾಗದ ಅಭಿವೃದ್ಧಿ ಬೇಕಾಗಿಲ್ಲ. ಈ ಭಾಗಕ್ಕೆ ಬಿಜೆಪಿ ಕೊಡುಗೆ ಶೂನ್ಯವಾಗಿದೆ. ನನ್ನ ಗುರಿ ಒಂದೇ ಈ ಭಾಗವನ್ನು ಅಭಿವೃದ್ದಿ ಮಾಡುವ ಮೂಲಕ ಬಸವಣ್ಣನ, ಅಂಬೇಡ್ಕರ್ ತತ್ವ ಉಳಿಯಬೇಕು ಎನ್ನುವುದು. ಇದು ಕೇವಲ ರಾಧಕೃಷ್ಣ ಎಲೆಕ್ಷನ್ ಅಲ್ಲ, ಬದಲಾಗಿ ದೇಶದ ಸಂವಿಧಾನ, ಪ್ರಜಾಪ್ರಭುತ್ವ ಉಳಿಸುವ ಚುನಾವಣೆ. ಈಗಾಗಲೆ ಮೋದಿ ಎಲ್ಲ ಮಷಿನರಿ ಬಳಸಿಕೊಂಡು ಪ್ರಜಾಪ್ರಭುತ್ವ ಹಾಳು ಮಾಡುತ್ತಿದ್ದಾರೆ. ಅದನ್ನ ನಾವು ಉಳಿಸಬೇಕಾಗಿದೆ. ಅದಕ್ಕಾಗಿ ನೀವೆಲ್ಲಾ ಕಾಂಗ್ರೆಸ್ಗೆ ಮತ ನೀಡಿ ಎಂದರು.