ಪ್ರತಿನಿಧಿ ವರದಿ ಗೋಣಿಕೊಪ್ಪ
ಕೊಡವರ ಮದುವೆಯಲ್ಲಿ ವಧುವಿಗೆ ಕಟ್ಟುವ ಪತ್ತಾಕ್ ಶಾಸ್ತ್ರದಲ್ಲಿ ವಿಧವೆ ಎಂದು ನಿರ್ಲಕ್ಷಿಸುವ ತಾತ್ಸಾರ ಬೇಡ ಎಂದು ಪೊನ್ನಂಪೇಟೆ ಕೊಡವ ಸಮಾಜ ಅಧ್ಯಕ್ಷ ಕಾಳಿಮಾಡ ಎಂ. ಮೋಟಯ್ಯ ಹೇಳಿದರು.
ಪೊನ್ನಂಪೇಟೆ ಕೊಡವ ಸಮಾಜ ಪೊಮ್ಮಕ್ಕಡ ಕೂಟದಿಂದ ಆಯೋಜಿಸಿದ್ದ ವಿಶ್ವ ಮಹಿಳಾ ದಿನಾಚರಣೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದರು. ವಧುವಿಗೆ ತಾಯಿ ಪತ್ತಾಕ್ ಕಟ್ಟಬೇಕಾದ ಆಚರಣೆಯಲ್ಲಿ ತಾಯಿ ವಿಧವೆ ಎಂಬ ಕಾರಣಕ್ಕೆ ಬೇರೆಯವರಿಗೆ ಅವಕಾಶ ನೀಡಲಾಗುತ್ತಿದೆ. ಹೆಣ್ಣನ್ನು ನೋಯಿಸುವ ಕಾರ್ಯ ನಡೆಯಬಾರದು. ತಾಯಿಗಿಂತ ಹೆಚ್ಚು ಬೇಡ ಎಂಬ ಮನಸ್ಥಿತಿಯಲ್ಲಿ ಮುಂದುವರಿಯಬೇಕಿದೆ. ಸಮಾಜ ಕೂಡ ಈ ಬಗ್ಗೆ ಚರ್ಚಿಸಿ ವಿಧವೆಗೆ ಪತ್ತಾಕ್ ಕಟ್ಟುವ ಅವಕಾಶ ನೀಡಬೇಕು ಎಂಬ ನಿರ್ಧಾರವನ್ನು ತೆಗೆದುಕೊಂಡಿದೆ ಎಂದರು.
ಮಹಿಳೆಯರು ಕೊಡವ ಸಂಸ್ಕೃತಿಯಲ್ಲಿನ ಮಹಿಳೆಯರ ಜವಾಬ್ದಾರಿ ನಿಭಾಯಿಸಬೇಕಿದೆ. ಪಾಲ್ಕೂಳ್ ಶಾಸ್ತ್ರ, ಪೊಂಬಣ, ಮೊಸ್ಕೋಲಿ ತೆಗೆಯುವುದು, ಮಗಳನ್ನು ವರನಿಗೆ ಕೈಹಿಡಿದು ಒಪ್ಪಿಸುವ ಶಾಸ್ತ್ರ, ಸಮ್ಮಂದ ಅಡುಕುವೊ ಪದ್ದತಿಯಲ್ಲಿ ಮಹಿಳೆಯರಿಗೆ ಜವಾಬ್ದಾರಿ ಹೆಚ್ಚಿದೆ. ಇಂತಹ ಪದ್ದತಿಗಳ ಪೋಷಣೆಗೆ ಮಹಿಳೆಯರು ಒತ್ತು ನೀಡಬೇಕು ಎಂದು ಸಲಹೆ ನೀಡಿದರು.
ಗೋಣಿಕೊಪ್ಪ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಮುಕ್ಕಾಟೀರ ಗ್ರೀಷ್ಮಾ ಬೋಜಮ್ಮ ಮಾತನಾಡಿ, ಒಂದು ಕುಟುಂಬದ ಆರೋಗ್ಯ ಮಹಿಳೆಯರ ಜವಾಬ್ದಾರಿಯಲ್ಲಿರುತ್ತದೆ. ಇದನ್ನು ಅರಿತು ಮಹಿಳೆಯರು ಉತ್ತಮ ಆರೋಗ್ಯಕ್ಕೆ ಕಾಳಜಿ ತೋರಬೇಕಿದೆ ಎಂದು ಸಲಹೆ ನೀಡಿದರು.
ಸಮಾಜ ಸೇವಕಿ ಅಜ್ಜಿಕುಟ್ಟೀರ ಕಾಂಚನ್ ಪೊನ್ನಣ್ಣ ಮಾತನಾಡಿ, ಮಹಿಳೆ ಮತ್ತೊಂದು ಮಹಿಳೆಯನ್ನು ಪ್ರೋತ್ಸಾಹಿಸುವ ಕಾರ್ಯ ಹೆಚ್ಚಾಗಬೇಕಿದೆ. ತಾತ್ಸಾರಕ್ಕೆ ಒಳಗಾಗುವ ಮಹಿಳೆಯನ್ನು ಹಗುರವಾಗಿ ನಡೆಸಿಕೊಳ್ಳುವ ಮನೋಭಾವದಿಂದ ಹೊರ ಬರುವ ಕಾರ್ಯ ನಡೆಯಬೇಕು ಎಂದರು.
ಕೂಟದ ಅಧ್ಯಕ್ಷೆ ಕೊಣಿಯಮಡ ಕಾವ್ಯ ಸಂಜು ಮಾತನಾಡಿ, ಕೂಟದಿಂದ ಕೊಡವ ಸಂಸ್ಕೃತಿ ಪೋಷಣೆಗೆ ಪೂರಕ ಕಾರ್ಯಕ್ರಮ ಅಯೋಜಿಸಲಾಗುವುದು. ಮಹಿಳೆಯರಿಗೆ ಪ್ರೋತ್ಸಾಹ ನೀಡುವ ಯೋಜನೆ ಇದೆ ಎಂದರು.
ಕೊಡವ ವಾಲಗ್ತತಾಟ್ನಲ್ಲಿ ಮಹಿಳೆಯರು ಹೆಜ್ಜೆ ಹಾಕಿದರು. ಹೂಗುಚ್ಚ ಸ್ಪರ್ಧೆಯಲ್ಲಿ ಚೆಪ್ಪುಡೀರ ರಾಧಾ ಅಚ್ಚಯ್ಯ (ಪ್ರ), ಕೊಣಿಯಂಡ ರೋಹಿಣಿ (ದ್ವಿ), ಕಾಟಿಮಾಡ ಭಾನು ದೇವಯ್ಯ (ತೃ), ಬೆಂಕಿ ಇಲ್ಲದ ಅಡುಗೆಯಲ್ಲಿ ರಾಧಾ ಅಚ್ಚಯ್ಯ, ಕೊಣಿಯಂಡ ರೋಹಿಣಿ ಜಂಟಿಯಾಗಿ ಪ್ರಥಮ ಬಹುಮಾನ ಪಡೆದರು. ತೀರ್ಥಯಾತ್ರೆ ಸ್ಪರ್ಧೆಯಲ್ಲಿ ಚೊಟ್ಟೆಪಂಡ ಮಿಲನ್ ಪ್ರಥಮ, ಕೊಣಿಯಂಡ ಬೋಜಮ್ಮ ಉತ್ತಪ್ಪ ದ್ವಿತೀಯ, ಮಾಚಿಮಾಡ ರೇಷ್ಮಾ ಕುಶಾಲಪ್ಪ ತೃತೀಯ ಸ್ಥಾನ ಪಡೆದುಕೊಂಡರು. ಹಿರಿಯ ಅಥ್ಲೆಟ್ ಚೆಕ್ಕೇರ ವಾಣಿ ಅವರನ್ನು ಈ ಸಂದರ್ಭ ಸನ್ಮಾನಿಸಲಾಯಿತು. ಕೊಡವ ಸಮಾಜ ಆಟ್ಪಾಟ್ ತಂಡದ ಬಾಲಕಿಯರು ಕೊಡವ ನೃತ್ಯದ ಮೂಲಕ ಗಮನ ಸೆಳೆದರು.
ಕಾರ್ಯದರ್ಶಿ ಬಲ್ಲಡಿಚಂಡ ಕಸ್ತೂರಿ, ಜಂಟಿ ಕಾರ್ಯದರ್ಶಿ ಮೂಕಳೇರ ಆಶಾ, ಖಜಾಂಚಿ ಚೆಕ್ಕೇರ ವಾಣಿ ಸಂಜು ಇದ್ದರು.
ಫೋಟೋ 21 ಜಿಕೆಪಿ 02 ; ಪೊನ್ನಂಪೇಟೆ ಕೊಡವ ಸಮಾಜ ಪೊಮ್ಮಕ್ಕಡ ಕೂಟದಿಂದ ಆಯೋಜಿಸಿದ್ದ ವಿಶ್ವ ಮಹಿಳಾ ದಿನಾಚರಣೆ ಉದ್ಘಾಟನೆ