ಪ್ರಯಿನಿಧಿ ವರದಿ ಚಾಮರಾಜನಗರ
ಚಾಮರಾಜನಗರ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ 85 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕ ಮತದಾರು ಹಾಗೂ ವಿಶೇಷಚೇತನ ಮತದಾರರಿಗೆ ಏ. 13ರಿಂದ 18ರವರೆಗೆ ಅಂಚೆ ಮತಪತ್ರದ ಮೂಲಕ ಮನೆಯಲ್ಲಿಯೇ ಮತದಾನ ಮಾಡುವ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಶಿಲ್ಪಾನಾಗ್ ತಿಳಿಸಿದರು.
ನಗರದ ಜಿಲ್ಲಾಡಳಿತ ಭವನದಲ್ಲಿರುವ ಕೆಸ್ವಾನ್ ಕಚೇರಿ ಸಭಾಂಗಣದಲ್ಲಿ ಹಿರಿಯ ನಾಗರಿಕರು ಹಾಗೂ ವಿಶೇಷಚೇತನರಿಗೆ ಮನೆಯಲ್ಲಿಯೇ ಮತದಾನ ಮಾಡುವ ಸಂಬಂಧ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ ಎಲ್ಲಾ ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿಗಳು ಹಾಗೂ ವಿವಿಧ ರಾಜಕೀಯ ಪಕ್ಷದ ಅಭ್ಯರ್ಥಿಗಳು, ಪ್ರತಿನಿಧಿಗಳೊಂದಿಗೆ ನಡೆದ ಸಿದ್ದತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಭಾರತ ಚುನಾವಣಾ ಆಯೋಗದ ನಿರ್ದೇಶನದನ್ವಯ 85 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಹಾಗೂ ವಿಶೇಷಚೇತನರಿಗೆ ಅನುಕೂಲವಾಗುವಂತೆ ಏ. 13ರಿಂದ 18ರವರೆಗೆ ದಿನಾಂಕ ನಿಗದಿಪಡಿಸಿ, ಮನೆಯಲ್ಲಿಯೇ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ. ಈ ಸಂಬಂಧ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಹಿರಿಯ ನಾಗರಿಕರು ಹಾಗೂ ವಿಶೇಷಚೇತನ ಮತದಾರರ ಮಾಹಿತಿಯನ್ನು ಸಂಗ್ರಹಿಸಿ ಎಲೆಕ್ಟೋನ್ ತಂತ್ರಾಂಶದಲ್ಲಿ ದಾಖಲಿಸಲಾಗಿದೆ. ಸದರಿ ಮತದಾರರಿಗೆ ಅಂಚೆ ಮತಪತ್ರದ ಮೂಲಕ ಮತದಾನ ಮಾಡಲು ಅಗತ್ಯ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.
ಚಾಮರಾಜನಗರ (ಪ.ಜಾ) ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ ಎಚ್.ಡಿ. ಕೋಟೆ, ನಂಜನಗೂಡು, ವರುಣ, ಟಿ. ನರಸೀಪುರ, ಹನೂರು, ಕೊಳ್ಳೇಗಾಲ, ಚಾಮರಾಜನಗರ ಹಾಗೂ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 26019 ಜನ 85 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಹಾಗೂ 25589 ವಿಶೇಷಚೇತನರನ್ನು ಗುರುತಿಸಲಾಗಿದೆ. ಈ ಪೈಕಿ 982 ಹಿರಿಯ ನಾಗರಿಕರು ಹಾಗೂ 445 ವಿಶೇಷಚೇತನ ಮತದಾರರು ಮನೆಯಲ್ಲಿ ಮತದಾನ ವ್ಯವಸ್ಥೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಉಳಿದವರು ಮತಗಟ್ಟೆಗೆ ಬಂದು ಮತ ಚಲಾಯಿಸಲಿದ್ದಾರೆ ಎಂದು ತಿಳಿಸಿದರು.
ಎರಡನೇ ಹಂತದ ಮತಗಟ್ಟೆ ಅಧಿಕಾರಿಗಳ ತರಬೇತಿಯನ್ನು ಏ.20 ಮತ್ತು 21ರಂದು ನಿಗದಿಪಡಿಸಲಾಗಿದೆ. ಅಲ್ಲದೇ ಎಲೆಕ್ಟ್ರಾನಿಕಲಿ ಟ್ರಾನ್ಸ್ಮೀಟೇಡ್ ಪೋಸ್ಟಲ್ ಬ್ಯಾಲೆಟ್ ಸಿಸ್ಟಮ್ (ಇಟಿಪಿಬಿಎಸ್) ವ್ಯವಸ್ಥೆಯಡಿ ಕ್ಷೇತ್ರ ವ್ಯಾಪ್ತಿಯಲ್ಲಿ 357 ಸೇವಾ ಮತದಾರರಿಗೆ ಅಂಚೆ ಪತ್ರ ಮತದಾನಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ಎಡಿಸಿ ಗೀತಾ ಹುಡೇದ, ಎಂಟು ವಿಧಾನಸಭಾ ಕ್ಷೇತ್ರಗಳ ಸಹಾಯಕ ಚುನಾವಣಾಧಿಕಾರಿಗಳು, ಪಕ್ಷೇತರ ಅಭ್ಯರ್ಥಿಗಳಾದ ಜಿ.ಡಿ. ರಾಜಗೋಪಾಲ, ಎಚ್.ಕೆ. ಸ್ವಾಮಿ, ವಿವಿಧ ರಾಜಕೀಯ ಪಕ್ಷಗಳ ಚುನಾವಣಾ ಏಜೆಂಟರು ಸಭೆಯಲ್ಲಿ ಇದ್ದರು.
12ಸಿಎಚ್ಎನ್.3:
ಚಿತ್ರವಿದೆ.