- ಜಿಲ್ಲಾ ಚುನಾವಣಾಧಿಕಾರಿ ಶಿಲ್ಪಾನಾಗ್ ಸೂಚನೆ
ಪ್ರತಿನಿಧಿ ವರದಿ ಚಾಮರಾಜನಗ
ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಮತಗಟ್ಟೆಗಳಲ್ಲಿ ವಿಶೇಷ ಚೇತನರು ಮತದಾನ ಮಾಡಲು ಅಗತ್ಯ ಮೂಲ ಸೌಕರ್ಯಗಳನ್ನು ಆದ್ಯತೆ ಮೇರೆಗೆ ಕಲ್ಪಿಸುವಂತೆ ಜಿಲ್ಲಾ ಚುನಾವಣಾಧಿಕಾರಿ ಶಿಲ್ಪಾ ನಾಗ್ ಸೂಚನೆ ನೀಡಿದರು.
ನಗರದ ಜಿಲ್ಲಾಡಳಿತ ಭವನದಲ್ಲಿರುವ ಕೆಸ್ವಾನ್ ಕಚೇರಿ ಸಭಾಂಗಣದಲ್ಲಿ ವಿಶೇಷಚೇತನ ಮತದಾರರಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವ ಸಂಬಂಧ ನೋಡಲ್ ಅಧಿಕಾರಿಗಳೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕ್ಷೇತ್ರ ವ್ಯಾಪ್ತಿಯಲ್ಲಿ 26 ಸಾವಿರಕ್ಕೂ ಹೆಚ್ಚಿನ ವಿಶೇಷ ಚೇತನ ಮತದಾರರನ್ನು ಗುರುತಿಸಲಾಗಿದ್ದು, ಮತಗಟ್ಟೆಗಳಲ್ಲಿ ವಿಶೇಷಚೇತನರಿಗೆ ಮತದಾನ ಮಾಡಲು ಅನುಕೂಲವಾಗುವಂತೆ ಕನಿಷ್ಠ ಸೌಲಭ್ಯಗಳನ್ನು ಒದಗಿಸಬೇಕಾಗಿದೆ. ಈ ನಿಟ್ಟಿನಲ್ಲಿ ವಿಶೇಷ ಚೇತನರಿಗೆ ಮತಗಟ್ಟೆಗಳಲ್ಲಿ ಅವಶ್ಯ ಸೌಲಭ್ಯಗಳನ್ನು ಒದಗಿಸಲು ಸಂಬಂಧ ಪಟ್ಟ ಅಧಿಕಾರಿಗಳು ಮುಂದಾಗಬೇಕು ಎಂದರು.
ಯಾವುದೇ ವಿಶೇಷ ಚೇತನರು ಮತದಾನದಿಂದ ವಂಚಿತರಾಗದಂತೆ ನಿಗಾ ವಹಿಸಬೇಕು. ಇದಕ್ಕಾಗಿ ಪ್ರತಿ ಗ್ರಾಮ ಪಂಚಾಯಿತಿವಾರು ಹಾಗೂ ಪ್ರತಿ ಮತಗಟ್ಟೆವಾರು ಎಷ್ಟು ವಿಶೇಷ ಚೇತನರಿದ್ದಾರೆ ಎಂಬ ಮಾಹಿತಿ ಸಂಗ್ರಹಿಸಿ. ಮತದಾನ ದಿನದಂದು ಅವರಿಗೆ ಮತದಾರರ ಚೀಟಿಯನ್ನು ಕ್ಷೇತ್ರ ಮತಗಟ್ಟೆ ಅಧಿಕಾರಿಗಳ ಮೂಲಕ ವಿತರಿಸಬೇಕು ಎಂದು ತಿಳಿಸಿದರು.
ವಿಶೇಷಚೇತನರು ಮತದಾನಕ್ಕೆ ಮತಗಟ್ಟೆಗಳಿಗೆ ಆಗಮಿಸಿದಾಗ ಇತರರೊಂದಿಗೆ ಸರತಿ ಸಾಲಿನಲ್ಲಿ ಕಾಯಿಸದೇ ಆದ್ಯತೆ ಮೇರೆಗೆ ಪ್ರತ್ಯೇಕ ವ್ಯವಸ್ಥೆ ಮಾಡಿಕೊಡಬೇಕು. ಕುಡಿಯುವ ನೀರು, ನೆರಳಿನ ವ್ಯವಸ್ಥೆ, ಶೌಚಾಲಯ, ಆಸನಗಳ, ರ್ಯಾಂಪ್ ಹಾಗೂ ಇತರೆ ಎಲ್ಲಾ ವ್ಯವಸ್ಥೆಗಳು ಸಮರ್ಪಕ ವಾಗಿರಬೇಕು ಎಂದು ತಿಳಿಸಿದರು.
ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳಲ್ಲಿ ಅಂಚೆಪತ್ರ ಮತದಾನದ ಸಲುವಾಗಿ ಒಟ್ಟು 25589 ವಿಶೇಷಚೇತನರನ್ನು ಗುರುತಿಸಿದ್ದು, ಈ ಪೈಕಿ 445 ವಿಶೇಷಚೇತನ ಮತದಾರರು ಮನೆಯಲ್ಲಿ ಮತದಾನ ವ್ಯವಸ್ಥೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಉಳಿದವರು ಮತಗಟ್ಟೆಗೆ ಬಂದು ಮತ ಚಲಾಯಿಸಲಿದ್ದಾರೆ. ಈ ಸಂಬಂಧ ಮತದಾರರಿಗೆ ನಮೂನೆ-12ಡಿ ಯನ್ನು ವಿತರಿಸಲಾಗಿದೆ. ಒಟ್ಟಾರೆ ಯಾವುದೇ ವಿಶೇಷಚೇತನರು ಕಡ್ಡಾಯವಾಗಿ ಮತದಾನ ಮಾಡಲು ಆಯಾ ತಹಶೀಲ್ದಾರು, ತಾಪಂ ಇಒಗಳು, ಜಿಪಂ ಸಿಇಒ ಮಾರ್ಗದರ್ಶನದಲ್ಲಿ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಆನಂದ್ ಪ್ರಕಾಶ್ ಮೀನಾ, ಎಡಿಸಿ ಗೀತಾ ಹುಡೇದ, ಎಂಟು ವಿಧಾನಸಭಾ ಕ್ಷೇತ್ರಗಳ ಸಹಾಯಕ ಚುನಾವಣಾಧಿಕಾರಿಗಳು, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಸುರೇಶ್, ಜಿಲ್ಲಾಮಟ್ಟದ ಅಧಿಕಾರಿಗಳು, ಇತರು ಇದ್ದರು.
13ಸಿಎಚ್ಎನ್.2:
ಚಿತ್ರವಿದೆ