– ಕೋಮು ಘರ್ಷಣೆ ವಿಚಾರದಲ್ಲಿ ನ್ಯಾಯ ಸಿಗದ ಆರೋಪ
– ಫ್ಲೆಕ್ಸ್ ತೆರವಿಗೆ ಪೊಲೀಸರ ಯತ್ನ, ಗ್ರಾಮಸ್ಥರ ಆಕ್ರೋಶ
ಪ್ರತಿನಿಧಿ ವರದಿ ನಂಜನಗೂಡು
ಫ್ಲೆಕ್ಸ್ ಅಳವಡಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಗ್ರಾಮದಲ್ಲಿ ನಡೆದಿದ್ದ ಗಲಭೆ ವಿಚಾರದಲ್ಲಿ ನ್ಯಾಯ ಒದಗಿಸುವಲ್ಲಿ ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳು ವಿಫಲವಾಗಿರುವ ಕಾರಣದಿಂದ ಲೋಕಸಭಾ ಚುನಾವಣಾ ಮತದಾನ ಬಹಿಷ್ಕರಿಸಲು ನಂಜನಗೂಡು ತಾಲೂಕಿನ ಹಲ್ಲರೆ ಗ್ರಾಮದ ಪರಿಶಿಷ್ಟ ಜಾತಿ ಸಮುದಾಯದ ಮತದಾರರು ನಿರ್ಧರಿಸಿದ್ದಾರೆ.
ಗ್ರಾಮದಲ್ಲಿ ಅಂಬೇಡ್ಕರ್ ನಾಮಫಲಕ ಅಳವಡಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಗಲಭೆ ನಡೆದು, ಎರಡು ಕೋಮುಗಳ ನಡುವೆ ಘರ್ಷಣೆ ನಡೆದಿತ್ತು. ಈ ಘಟನೆಗೆ ಸಂಬಂಧಿಸಿದಂತೆ ಅನ್ಯಾಯಕ್ಕೆ ಒಳಗಾದವರಿಗೆ ನ್ಯಾಯ ಒದಗಿಸುವಂತೆ ನಿರಂತರವಾಗಿ ಜಿಲ್ಲಾಡಳಿತ, ತಾಲ್ಲೂಕು ಆಡಳಿತ ಹಾಗೂ ಸ್ಥಳೀಯ ಜನಪ್ರತಿನಿಧಿಗಳನ್ನು ಒತ್ತಾಯಿಸಿದರೂ, ಅಧಿಕಾರಿಗಳಾಗಲಿ ಅಥವಾ ಜನಪ್ರತಿನಿಧಿಗಳಾಗಲಿ ಯಾವುದೇ ರೀತಿಯಲ್ಲೂ ಸ್ಪಂದಿಸಿಲ್ಲ ಎಂಬುದು ಗ್ರಾಮಸ್ಥರ ಆರೋಪವಾಗಿದೆ.
ಘಟನೆಯಲ್ಲಿ ನೊಂದವರಿಗೆ ನ್ಯಾಯ ಒದಗಿಸುವಲ್ಲಿ ಜಿಲ್ಲಾ ಮತ್ತು ತಾಲ್ಲೂಕು ಆಡಳಿತದ ವಿಫಲವಾಗಿರುವುದನ್ನು ಖಂಡಿಸಿ, ಹಲ್ಲರೆ ಗ್ರಾಮದ ಪರಿಶಿಷ್ಟ ಜಾತಿ ಸಮುದಾಯದ ಮತದಾರರು ಮತದಾನ ಬಹಿಷ್ಕರಿಸಲು ನಿರ್ಧಿಸಿದ್ದಾರೆ. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಗ್ರಾಮಸ್ಥರು ಮತದಾನ ಬಹಿಷ್ಕರಿಸುತ್ತಿರುವ ಕುರಿತಂತೆ ಗ್ರಾಮದಲ್ಲಿ ಫ್ಲೆಕ್ಸ್ ಸಹ ಅಳವಡಿಸಲಾಗಿದ್ದು, ಆ ಮೂಲಕ ಗ್ರಾಮಸ್ಥರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
=================
ಬಾಕ್ಸ್
ಫ್ಲೆಕ್ಸ್ ತೆರವು ಮಾಡಿದ್ದಕ್ಕೆ ಆಕ್ರೋಶ
ಹಲ್ಲರೆ ಗ್ರಾಮದ ಜನತೆ ಮತದಾನ ಬಹಿಷ್ಕರಿಸುವ ನಿರ್ಧಾರಕೈಗೊಂಡ ಹಿನ್ನೆಲೆಯಲ್ಲಿ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಬೇಟಿ ನೀಡಿದ್ದರು. ಈ ವೇಳೆ ಗ್ರಾಮದಲ್ಲಿ ಅಳವಡಿಸಲಾಗಿದ್ದ ಮತದಾನ ಬಹಿಷ್ಕರಿಸುವ ಕುರಿತ ಫ್ಲೆಕ್ಸ್ ತೆರವುಗೊಳಲು ಪೊಲೀಸರು ಮುಂದಾಗಿದ್ದಾರೆ. ಆದರೆ ಪೊಲೀಸರು ಈ ನಡೆಗೆ ಆಕ್ರೋಶಗೊಂಡ ಗ್ರಾಮಸ್ಥರು, ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರವಿರುವ ಮತದಾನ ಬಹಿಷ್ಕಾರದ ಫ್ಲೆಕ್ಸ್ ಅನ್ನು ತೆರವುಗೊಳಿಸುವ ಮೂಲಕ ಪೊಲೀಸರು ಅಂಬೇಡ್ಕರ್ ಅವರಿಗೆ ಅಪಮಾನಿಸಿದ್ದಾರೆ ಎಂದು ಆರೋಪಿಸಿದರು. ಅಲ್ಲದೇ ಏಕಾಏಕಿ ಗ್ರಾಮಕ್ಕೆ ಆಗಮಿಸಿ ಫ್ಲೆಕ್ಸ್ ತೆರವುಗೊಳಿಸಿದ ಪೊಲೀಸ್ ಅಧಿಕಾರಿಯನ್ನು ಅಮಾನತು ಮಾಡುವಂತೆ ಆಗ್ರಹಿಸಿದರು.