ಬೆಂಗಳೂರು: ಹಾಸನ ಸಂಸದ ಪ್ರಜ್ವಲ್ ರೇವಣ್ಣ ಪಾಲ್ಗೊಂಡಿದ್ದಾರೆ ಎನ್ನಲಾಗುತ್ತಿರುವ ಲೈಂಗಿಕ ದೌರ್ಜನ್ಯದ ಅಶ್ಲೀಲ ವಿಡಿಯೋ ಪ್ರಕರಣ ರಾಜ್ಯದಲ್ಲಿ ಸಂಚಲನ ಸೃಷ್ಟಿಸಿದೆ. ಈ ವಿಡಿಯೋದಲ್ಲಿನ ಸಂತ್ರಸ್ತೆಯರ ನೆರವಿಗಾಗಿ ವಿಶೇಷ ತನಿಖಾ ತಂಡ ಸಹಾಯವಾಣಿ ತೆರೆದಿದೆ. ಯಾರೇ ಸಂತ್ರಸ್ತರು ಹಾಗೂ ಭಾತ್ಮೀದಾರರಿಗೆ (ಮಾಹಿತಿದಾರರಿಗೆ) ಅವರಿಗೆ ಕಾನೂನು ನೆರವು, ರಕ್ಷಣೆ ಹಾಗೂ ಇನ್ನಿತರ ಯಾವುದೇ ಸಹಾಯ ಬೇಕಾಗಿದ್ದಲ್ಲಿ ಸಹಾಯವಾಣಿ ಸಂಖ್ಯೆ 6360938947 ಕರೆ ಮಾಡುವಂತೆ ಎಸ್ಐಟಿ ಪತ್ರಿಕಾ ಪ್ರಕಟಣೆ ಹೊರಡಿಸಿದೆ.
ತನಿಖೆಯ ಸಂದರ್ಭದಲ್ಲಿ ಈ ಘಟನೆಗೆ ಸಂಬಂಧಿಸಿದಂತೆ ಇನ್ನಷ್ಟು ಸಂತ್ರಸ್ತರು ಇರುವುದು ತಿಳಿದು ಬಂದಿದ್ದು, ಸಂತ್ರಸ್ತರು ಹಾಗೂ ಬಾತ್ಮೀದಾರರಿಗೆ (ಮಾಹಿತಿದಾರರಿಗೆ) ಕಾನೂನು ನೆರವು ಹಾಗೂ ರಕ್ಷಣೆ ನೀಡಲು ಸಹಾಯವಾಣಿ ತೆರೆಯಲಾಗಿದ್ದು.6360938947 ಸಹಾಯವಾಣಿ ಸಂಖ್ಯೆ ಸಂಪರ್ಕಿಸಬಹುದು. ಸಂತ್ರಸ್ತರು ಅಥವಾ ಬಾತ್ಮೀದಾರರ ಹೆಸರುಗಳನ್ನು ಗೌಪ್ಯವಾಗಿಡಲಾಗುವುದು ಎಂದು ವಿಶೇಷ ತನಿಖಾ ತಂಡದ ಮುಖ್ಯಸ್ಥರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಪೆನ್ಡ್ರೈವ್ ವಿಡಿಯೊ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಸ್ಐಟಿ ಅಧಿಕಾರಿಗಳು ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಈಗಾಗಲೇ ಮಾಜಿ ಸಚಿವ ಎಚ್.ಡಿ. ರೇವಣ್ಣ ಅವರನ್ನು ಎಸ್ಐಟಿ ಅಧಿಕಾರಿಗಳು ಬಂಧಿಸಿದ್ದಾರೆ. ಈ ನಡುವೆ ವಿಡಿಯೊದಲ್ಲಿ ಸಾಕಷ್ಟು ಮಹಿಳಾ ಅಧಿಕಾರಿಗಳೂ ಇದ್ದಾರೆ ಎಂಬ ಬಗ್ಗೆ ಹೇಳಲಾಗಿತ್ತು. ಈ ಹಿನ್ನೆಲೆಯಲ್ಲಿ ವಿಡಿಯೊಗಳಲ್ಲಿ ಕಂಡ ಮುಖವನ್ನಾಧರಿಸಿ ಅವರ ಗುರುತನ್ನು ಪತ್ತೆ ಹಚ್ಚಿರುವ ಎಸ್ಐಟಿ ಅಧಿಕಾರಿಗಳು ಆ ಸಂತ್ರಸ್ತ ಅಧಿಕಾರಿಗಳಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಕೊಟ್ಟಿದ್ದಾರೆ ಎನ್ನಲಾಗಿದೆ. ಆದರೆ, ಒಬ್ಬೊಬ್ಬರು, ನಾನವಳಲ್ಲ ಎಂಬ ಉತ್ತರವನ್ನು ನೀಡಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ಕೆಲ ಸಂತ್ರಸ್ತೆಯರು ಮರ್ಯಾದೆಗೆ ಹೆದರಿ ವಿಚಾರಣೆಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಎಸ್ಐಟಿ ಸಂಸ್ರಸ್ತೆರಿಗಾಗಿ ಸಹಾಯವಾಣಿ ಆರಂಭಿಸಿದೆ.