ಬೆಂಗಳೂರು: ಮಹಿಳೆಯ ಕಿಡ್ನಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಳೆನರಸೀಪುರ ಕ್ಷೇತ್ರದ ಜೆಡಿಎಸ್ ಶಾಸಕ ಎಚ್ಡಿ ರೇವಣ್ಣಗೆ 17ನೇ ಎಸಿಎಂಎಂ ಕೋರ್ಟ್ 7 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. ಇದರಿಂದ ರೇವಣ್ಣ ಪರಪ್ಪನ ಅಗ್ರಹಾರ ಜೈಲು ಸೇರಿದ್ದು, ಇದೀಗ ಜೈಲು ಅಧಿಕಾರಿಗಳು ರೇವಣ್ಣಗೆ ವಿಚಾರಣಾಧೀನ ಕೈದಿ ನಂಬರ್ ನೀಡಿದ್ದಾರೆ. ಜೈಲಿಗೆ ಬರುವ ಎಲ್ಲಾ ಆರೋಪಿಗಳಿಗೆ ಎಂಟ್ರಿ ನಂಬರ್ ನೀಡಲಾಗುತ್ತದೆ. ಅದರಂತೆ ರೇವಣ್ಣ ವಿಚಾರಣಾಧೀನ ಬಂಧಿ ನಂಬರ್ 4567 ನೀಡಲಾಗಿದೆ.
ಮೇ 14ರವರೆಗೆ ನ್ಯಾಯಾಂಗ ಬಂಧನ
ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಎನ್ನಲಾಗಿರುವ ಸಂಸತ್ರಸ್ತೆಯನ್ನು ಅಪಹರಣ ಪ್ರಕರಣದಲ್ಲಿ ಬಂಧನವಾಗಿರುವ ಮಾಜಿ ಸಚಿವ ಹೆಚ್ಡಿ ರೇವಣ್ಣ ಅವರಿಗೆ ಕೋರ್ಟ್ ನ್ಯಾಯಾಂಗ ಬಂಧನ ವಿಧಿಸಿದೆ. ಎಸ್ಐಟಿ ಕಸ್ಟಡಿ ಅವಧಿ ಮೇ 08 ಮುಕ್ತಾಯವಾಗಿದ್ದರಿಂದ ರೇವಣ್ಣ ಅವರನ್ನು ಬೆಂಗಳೂರಿನ 17ನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಇದೀಗ ಕೋರ್ಟ್ ಮೇ 14ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶ ಹೊರಡಿಸಿದೆ. ಮತ್ತೊಂದೆಡೆ ರೇವಣ್ಣ ಅವರ ಜಾಮೀನು ಅರ್ಜಿ ಸಹ ನಾಳೆಗೆ ಮುಂದೂಡಿದೆ. ಇದರಿಂದ ರೇವಣ್ಣಗೆ ಪರಪ್ಪನ ಅಗ್ರಹಾರ ಜೈಲೇ ಗತಿ.
ಹೆಚ್ಡಿ ರೇವಣ್ಣ ಬಂಧನ
ಈ ಮಧ್ಯೆ ಮಾಜಿ ಹೆಚ್ಡಿ ರೇವಣ್ಣ ವಕೀಲರ ಮೊರೆ ಹೋಗಿದ್ದು, ಮಧ್ಯಂತರ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಸಿದ್ದರು. ಶನಿವಾರ (ಮೇ 04) ಸಂಜೆ ರೇವಣ್ಣಗೆ ಮಧ್ಯಂತರ ನಿರೀಕ್ಷಣಾ ಜಾಮೀನು ನೀಡಲು ನ್ಯಾಯಾಲಯ ನಿರಾಕರಿಸಿತು. ಇದೇ ಬೆನ್ನಲ್ಲೇ ಶನಿವಾರ ಸಂಜೆಯೇ ಪದ್ಮನಾಭನಗರದ ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡರ ನಿವಾಸದಲ್ಲಿ ಹೆಚ್ಡಿ ರೇವಣ್ಣ ಅವರನ್ನು ಬಂಧಿಸಲಾಗಿತ್ತು.
ಶನಿವಾರ ರಾತ್ರಿ 7.30ರ ಸುಮಾರಿಗೆ ಎಸ್ಐಟಿ ಅಧಿಕಾರಿಗಳು ರೇವಣ್ಣ ಅವರನ್ನು ಸಿಐಡಿ ಕಚೇರಿಗೆ ರೇವಣ್ಣ ಕರೆತಂದರು. ಭಾನುವಾರ ಸಂಜೆ ಬೌರಿಂಗ್ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ನಡೆಯಿತು. ಅದೇ ದಿನ ರಾತ್ರಿ 7 ಗಂಟೆಗೆ ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಾಗಿತ್ತು. ನ್ಯಾಯಾಧೀಶರು ನಾಲ್ಕು ದಿನ ಎಸ್ಐಟಿ ಕಸ್ಟಡಿಗೆ ನೀಡಿದ್ದರು.