ಚಿಕ್ಕಮಗಳೂರು: ಕಾರ್ಮಿಕನನ್ನ ಕೊಂದಿದ್ದ ಕಾಡಾನೆ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಘಟನೆ ಚಿಕ್ಕಮಗಳೂರು ತಾಲೂಕಿನ ಕೆರೆಹಕ್ಲು ಗ್ರಾಮದಲ್ಲಿ ನಡೆದಿದೆ. 35 ವರ್ಷದ ಕಾಡಾನೆ ಇದಾಗಿದ್ದು, ಮೃತಪಟ್ಟ ಸ್ಥಳದಲ್ಲಿ ವಿದ್ಯುತ್ ತಂತಿ ತುಂಡಾಗಿ ಬಿದ್ದಿದ್ದು, ಅದನ್ನೇ ತುಳಿದು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ವಾರದ ಹಿಂದೆ ಕಾಡಾನೆ ದಾಳಿಗೆ ಕೂಲಿ ಕಾರ್ಮಿಕ ಬಲಿಯಾಗಿದ್ದ. ಇದಾದ ಬಳಿಕ ಕಾಡಾನೆ ಸೆರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಂಡಿದ್ದರು. ಇದರ ಬೆನ್ನಲ್ಲೇ ಕಾಡಾನೆ ಅನುಮಾನಾಸ್ಪದವಾಗಿ ಮೃತಪಟ್ಟಿದೆ. ಈ ಹಿನ್ನಲೆ ಕಾಡಾನೆ ಸಾವಿನ ಬಗ್ಗೆ ಸೂಕ್ತ ತನಿಖೆ ನಡೆಸಲು ಪರಿಸರವಾದಿಗಳು ಆಗ್ರಹಿಸಿದ್ದಾರೆ.
ಕಳೆದ ಮಾರ್ಚ್ 25 ರಂದು ಜಿಲ್ಲೆಯಲ್ಲಿ ಕಾಡಾನೆ ದಾಳಿಗೆ ಓರ್ವ ಕಾರ್ಮಿಕ ಮೃತಪಟ್ಟಿದ್ದ. ತರೀಕೆರೆ ತಾಲೂಕಿನ ವರ್ತೆಗುಂಡಿ ಗ್ರಾಮದ ಟಿಂಬರ್ ಕಾರ್ಮಿಕ ಅಕ್ಬರ್(35) ಮೃತ ವ್ಯಕ್ತಿ. ತೋಟದಲ್ಲಿ ಆನೆ ಓಡಿಸುವಾಗ ಏಕಾಏಕಿ ಆನೆ ನುಗ್ಗಿ ಬಂದಿದೆ. ಈ ವೇಳೆ ನೆಲಕ್ಕೆ ಬಿದ್ದ ಅಕ್ಬರ್ ಮೇಲೆ ಕಾಡಾನೆ ಕಾಲಿಟ್ಟು ಕೊಂದಿದೆ. ಈ ಹಿನ್ನಲೆ ರೊಚ್ಚಿಗೆದ್ದಿದ್ದ ಸ್ಥಳೀಯರು ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.