ಎಚ್ಚರ ವಹಿಸುವಂತೆ ಆರೋಗ್ಯ ಇಲಾಖೆ ಮನವಿ
ಚಿಕ್ಕಬಳ್ಳಾಪುರ : ಸೊಳ್ಳೆ ಕಚ್ಚುವುದರಿಂದ ಹರಡುವ ಡೆಂಘೆ ಹಾಗೂ ಚಿಕೂನ್ ಗೂನ್ಯ ತಡೆಗೆ ಸಾರ್ವಜನಿಕರು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುವಂತೆ ಆರೋಗ್ಯ ಇಲಾಖೆ ಮನವಿ ಮಾಡಿದೆ.
ಈಡಿಸ್ ಸೊಳ್ಳೆಗಳಿಂದ ಚಿಕೂನ್ ಗೂನ್ಯ ಹಾಗೂ ಜಿಕಾ ವೈರಸ್ ಸೋಂಕು ಹರಡುವುದರಿಂದ ರೋಗ ಹರಡುವಿಕೆಯನ್ನು ತಡೆಗಟ್ಟುವಲ್ಲಿ ರೋಗವಾಹಕದ ನಿಯಂತ್ರಣವು ಪ್ರಮುಖ ಪಾತ್ರ ವಹಿಸುತ್ತದೆ. ಈ ಹಿನ್ನೆಲೆಯಲ್ಲಿ ಡೆಂಘೆ ಜ್ವರದ ಲಕ್ಷಣಗಳು, ತೀವ್ರತೆ ಚಿಕಿತ್ಸೆ ನಿರ್ವಹಣೆ ಹಾಗೂ ಈಡಿಸ್ ಸೊಳ್ಳೆ ಉತ್ಪತ್ತಿ ತಾಣಗಳ ನಿರ್ಮೂಲನೆ ಬಗ್ಗೆ ಸಾರ್ವಜನಿಕರು ಸ್ವಯಂ ರಕ್ಷಣಾ ವಿಧಾನಗಳನ್ನು ಅನುಸರಿಸಬೇಕಿದೆ ಎಂದು ಆರೋಗ್ಯ ಇಲಾಖೆ ಸಲಹೆ ನೀಡಿದೆ.
ಡೆಂಘೆ ಜ್ವರ: ಸೋಂಕಿತ ಈಡಿಸ್ ಸೊಳ್ಳೆ ಕಚ್ಚುವುದರಿಂದ ಡೆಂಗಿ ಜ್ವರವು ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತದೆ. ಈಡಿಸ್ ಸೊಳ್ಳೆಗಳು ಸಾಮಾನ್ಯವಾಗಿ ಹಗಲು ಹೊತ್ತಿನಲ್ಲಿ ಕಚ್ಚುತ್ತವೆ. ಸೊಳ್ಳೆ ಕಚ್ಚಿದ 5-7 ದಿನಗಳಲ್ಲಿ ರೋಗದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.
ರೋಗ ಲಕ್ಷಣಗಳು: ಇದ್ದಕ್ಕಿದಂತೆ ವಿಪರೀತ ಜ್ವರ, ಕಣ್ಣಿನ ಗುಡ್ಡಗಳ ಹಿಂಭಾಗದಲ್ಲಿ ನೋವು, ತೀವ್ರ ತಲೆ ನೋವು, ಮೈಕೈ, ಕೀಲು ನೋವು, ವಾಕರಿಕೆ ವಾಂತಿ, ಜೊತೆಗೆ ತೀವ್ರ ಹೊಟ್ಟೆ ನೋವು, ಬಾಯಿ, ಮೂಗು, ವಸಡುಗಳಲ್ಲಿ ರಕ್ತಸ್ರಾವದ ಗುರುತುಗಳು ಕಾಣಿಸಿಕೊಳ್ಳುತ್ತವೆ. ಚರ್ಮದ ಮೇಲೆ ಅಲ್ಲಲ್ಲಿ ಕೆಂಪಾದ ಗಂಧೆಗಳು / ರಕ್ತಸ್ರಾವದ ಗುರುತುಗಳು. ಕಪ್ಪು ಬಣ್ಣದ ಮಲ ವಿಸರ್ಜನೆ. ವಿಪರೀತ ಬಾಯಾರಿಕೆ. ತಣ್ಣನೆಯ ಬಿಳಿಚಿದ ಚರ್ಮ. ಜ್ಞಾನ ತಪ್ಪುವುದು. ರಕ್ತದ ಒತ್ತಡ, ನಾಡಿ ಬಡಿತ ಕುಸಿತ, ಡೆಂಗಿ ರಕ್ತ ಸ್ರಾವ ಜ್ವರ, ಡೆಂಗಿ ಆಘಾತ ಜ್ವರದ ಲಕ್ಷಣಗಳಾಗಿವೆ. ಡೆಂಗಿ ಜ್ವರಕ್ಕೆ ನಿರ್ದಿಷ್ಟವಾದ ಚಿಕಿತ್ಸೆ ಇರುವುದಿಲ್ಲ. ಆದರೆ ರೋಗ ಲಕ್ಷಗಳಿಗೆ ಅನುಗುಣವಾಗಿ ಚಿಕಿತ್ಸೆಯನ್ನು ನೀಡಲಾಗುತ್ತದೆ. ಡೆಂಗಿ ಜ್ವರದ ಲಕ್ಷಣಗಳು ಕಂಡು ಬಂದ ತಕ್ಷಣವೇ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ತೆರಳಿ ಸೂಕ್ತ ಚಿಕಿತ್ಸೆಯನ್ನು ಪಡೆಯಬೇಕು.
ಚಿಕೂನ್ ಗೂನ್ಯ: ಸೋಂಕಿತ ಈಡಿಸ್ ಜಾತಿಯ ಸೊಳ್ಳೆಗಳು ಕಚ್ಚುವುದರಿಂದ ಸೋಂಕು ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತದೆ. ಆದರೆ ಚಿಕೂನ್ ಗೂನ್ಯ ಮಾರಣಾಂತಿಕವಲ್ಲ.
ರೋಗದ ಲಕ್ಷಣಗಳು: ಇದ್ದಕ್ಕಿದ್ದಂತೆ ಜ್ವರ, ಕೀಲುಗಳಲ್ಲಿ ತೀವ್ರವಾದ ನೋವು ಮತ್ತು ಊತ ಕಾಣಿಸಿಕೊಳ್ಳುವುದು ರೋಗ ಲಕ್ಷಣವಾಗಿದೆ. ಸೋಂಕಿಗೆ ನಿರ್ದಿಷ್ಟವಾದ ಚಿಕಿತ್ಸೆ ಇರುವುದಿಲ್ಲ. ಆದರೆ, ರೋಗ ಲಕ್ಷಣಗಳಿಗೆ ಅನುಗುಣವಾಗಿ ಚಿಕಿತ್ಸೆಯನ್ನು ನೀಡಲಾಗುತ್ತದೆ. ಆದ್ದರಿಂದ ಯಾವುದೇ ಜ್ವರವಿರಲಿ ಹತ್ತಿರದ ಸರ್ಕಾರಿ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆಯನ್ನು ಪಡೆಯಬೇಕು. ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ರಕ್ತಪರೀಕ್ಷೆ ಹಾಗೂ ಚಿಕಿತ್ಸೆ ನೀಡಲಾಗುವುದು
ಏರ್ ಕೂಲರ್ಗಳಲ್ಲಿ ನೀರನ್ನು ಕನಿಷ್ಠ ವಾರಕ್ಕೊಮ್ಮೆ ಬದಲಾಯಿಸಬೇಕು. ಯಾವಾಗಲೂ ಮೈ ತುಂಬ ಬಟ್ಟೆ ಧರಿಸಬೇಕು. ಹಗಲು ಹೊತ್ತಿನಲ್ಲಿ ನಿದ್ರಿಸುವ / ವಿಶ್ರಾಂತಿ ಪಡೆಯುವ ಗರ್ಭಿಣಿಯರು, ಮಕ್ಕಳು ಮತ್ತು ವಯಸ್ಸಾದವರು ತಪ್ಪದೆ ಸೊಳ್ಳೆ ಪರದೆಯನ್ನು ಉಪಯೋಗಿಸಬೇಕು. ಡೆಂಘೆ ಪೀಡಿತರೂ ತಪ್ಪದೆ ಸೊಳ್ಳೆ ಪರದೆಯನ್ನು ಬಳಸಬೇಕು. ಜ್ವರ ಪೀಡಿತರು ಸಾಕಷ್ಟು ದ್ರವರೂಪದ ಆಹಾರಗಳನ್ನು ಸೇವಿಸುವುದು ಹಾಗೂ ಅಗತ್ಯ ವಿಶ್ರಾಂತಿಯನ್ನು ಪಡೆಯಬೇಕು. ಮನೆಯ ಕಿಟಕಿ ಬಾಗಿಲುಗಳಿಗೆ ಸೊಳ್ಳೆ ನಿರೋಧಕ ಜಾಲರಿಗಳನ್ನು ಅಳವಡಿಸಬೇಕು. ಈಡಿಸ್ ಲಾರ್ವಾ ಸಮೀಕ್ಷೆ ಹಾಗೂ ಉತ್ಪತ್ತಿ ತಾಣ ಸಮೀಕ್ಷೆಗೆಂದು ಮನೆ ಭೇಟಿ ನೀಡುವ ಆರೋಗ್ಯ ಇಲಾಖೆಯ ಸಿಬ್ಬಂದಿ ಹಾಗೂ ಆಶಾ ಸ್ವಯಂಸೇವಕರು ನೀಡುವ ಸಲಹೆ – ಸೂಚನೆ ಪಾಲಿಸಬೇಕು ಎಂದು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ಪ್ರಕಾಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.