- ಬೆಸಗೂರಿನಲ್ಲಿ 150 ರಷ್ಟು ಮನೆಕಳಿ
- ಕೋಟೂರಿನಲ್ಲಿ ದುರ್ಗಿ ನುಡಿದಂತೆ ಆಚರಣೆ
ಸಣ್ಣುವಂಡ ಕಿಶೋರ್ ನಾಚಪ್ಪ ಗೋಣಿಕೊಪ್ಪ
ಮೂರು ವರ್ಷಕೊಮ್ಮೆ ನಡೆಯುವ ಕೋಟೂರು ಮತ್ತು ಬೆಸಗೂರು ಗ್ರಾಮಗಳ ಬೋಡ್ನಮ್ಮೆಯಲ್ಲಿ ಕುದ್ರೆ, ಮೊಗ ಹೊತ್ತು ಆಚರಿಸಲಾಯಿತು.
ಪ್ರತ್ಯೇಕ ದಿನಗಳಲ್ಲಿ ನಡೆದ ಆಚರಣೆಯಲ್ಲಿ ಗ್ರಾಮಸ್ಥರು ಭಾಗಿಯಾದರು. ಹಿಂದಿನಿಂದಲೂ ಉಭಯ ಗ್ರಾಮಗಳು ಮೂರು ವರ್ಷಕ್ಕೊಮ್ಮೆ ಆಚರಿಸುವುದು ವಿಶೇಷತೆ ಪಡೆದುಕೊಂಡಿದೆ. ಮೂಂದ್ ಕಾಲಕೊಮ್ಮ ನಡ್ಪ ಬೋಡ್ ತಾಲಿ ಲೆಲ್ಲೆಲ್ಲಾ ಎಂಬ ಹಾಡು ಪ್ರತೀತಿಯಲ್ಲಿದೆ.
ಕೋಟೂರು ಬೋಡ್: ಗ್ರಾಮದ ಬೋಡ್ ನಮ್ಮೆ ಸಂಪನ್ನಗೊಂಡಿತು. ಮೇ 18 ರಿಂದ ಮೇ 24 ರವರೆಗೆ ವಿವಿಧ ಆಚರಣೆ ನೆರವೇರಿತು. ಮೂರು ವರ್ಷಕೊಮ್ಮೆ ನಡೆಯುವ ಆಚರಣೆಯಲ್ಲಿ ಗ್ರಾಮಸ್ಥರು ಸಂಭ್ರಮಿಸಿದರು. ನಮ್ಮೆ ಕುರಿಪೊ ಆಚರಣೆಯೊಂದಿಗೆ ನಮ್ಮೆಗೆ ಚಾಲನೆ ನೀಡಲಾಯಿತು.
ಕಾಟಿಮಾಡ ಕುಟುಂಬದ ಬಲ್ಯಮನೆಯ ಮೊಗ ಮನೆಯಲ್ಲಿ ಮೊಗವನ್ನು ಪಣಿಕ ಜನಾಂಗದ ವ್ಯಕ್ತಿ ಇಳಿಸುವ ಶಾಸ್ತ್ರ ನೆರವೇರಿಸಿದರು. ಕೊಂಗೀರ ಮತ್ತು ಕಳಿಚೀರ ಕುಟುಂಬದಿಂದ ಪ್ರತ್ಯೇಕವಾಗಿ ಎರಡು ಕುದ್ರೆಗಳು ಇಳಿಯುವ ಶಾಸ್ತ್ರ ನೆರವೇರಿತು. ಕಾಟಿಮಾಡ ಕುಟುಂಬ ಮತ್ತು ಕೊಳ್ಳಿಮಾಡ ಕುಟುಂಬದ ಮನೆಯಿಂದ ಭದ್ರಕಾಳಿ ಮೊಗವನ್ನು ಇಳಿಸಲಾಯಿತು.
ಗ್ರಾಮದ ದುರ್ಗಿ ದೇವರು ಸೂಚಿಸುವ ವ್ಯಕ್ತಿ, ಕುದ್ರೆ, ವೇಷಧಾರಿಗಳ ಪಾತ್ರ ನಿಭಾಯಿಸಿದರು. 2 ಮೊಗವನ್ನು ಅಂಬಲಕ್ಕೆ ತಂದು ಕುಣಿಯುವ ಆಚರಣೆ ನಡೆಯಿತು. ಕುದ್ರೆ ಕಳಿ, ವೇಷದಾರಿಗಳು ಕುಣಿತ, ದೇವರ ಪ್ರಾರ್ಥನೆ ನೆರವೇರಿತು. ಭದ್ರಕಾಳಿ ಸ್ಥಾನದಲ್ಲಿ ಪ್ರಸಾದ ಅರ್ಪಣೆ ಮೂಲಕ ಭಕ್ತಿ ಮೆರೆದರು.
ಕಾಟಿಮಾಡ ಮತ್ತು ಕೊಳ್ಳಿಮಾಡ ಕುಟುಂಬದಿಂದ ಶುಕ್ರವಾರ ಊರ್ ಊಟ ಕಾರ್ಯ ನೆರವೇರಿತು. ಸೌಹಾರ್ಧತೆ ಸಂಕೇತವಾಗಿ ಸಾಮೂಹಿಕ ಬೋಜನದಲ್ಲಿ ಪಾಲ್ಗೊಂಡರು. ಮನೆ ಕಳಿ, ಚೂಳೆಕಳಿ, ವಡ್ಡ ಕಳಿ ಮೂಲಕ ಮನೆ ಮನೆಗಳಿಗೆ ತೆರಳಿ ಆಚರಿಸುವ ಹಿನ್ನೆಲೆ ಹಬ್ಬಕ್ಕೆ ಇದೆ. ಈಶ್ವರನಿಗೆ ಪ್ರಸಾದ ಅರ್ಪಿಸುವ ಆಚರಣೆ ಮೂಲ ಹೊಂದಿದ್ದು, ಭದ್ರಕಾಳಿ ದೇವತೆ ಆಚರಣೆಯ ಭಾಗವಾಗಿದೆ ಎಂದು ಹಿರಿಯರು ಹೇಳುತ್ತಾರೆ.
ಬೆಸಗೂರು ಬೋಡ್: ಬೆಸಗೂರು ಬೋಡ್ನಮ್ಮೆ ಎರಡು ದಿನ ನಡೆಯಿತು. ಹಬ್ಬದ ಆಚರಣೆಯ ಮೂಲವಾಗಿರುವ ಮಾರಿ ನೀಕೋ ಕಾರ್ಯ ಮೇ 14 ರಂದು ನೆರವೇರಿಸಲಾಯಿತು. ಸುಮಾರು 150 ಕ್ಕೂ ಹೆಚ್ಚು ಮನೆಗಳಿಗೆ ಗ್ರಾಮಸ್ಥರು ತೆರಳಿ ಮನೆ ಕಳಿ ಆಚರಿಸುವ ವಿಶೇಷತೆ ಈ ಗ್ರಾಮಕ್ಕಿದೆ. ಇದರಿಂದಾಗಿ ಎರಡು ಭಾಗಗಳಾಗಿ ತಂಡ ರಚಿಸಿ ಮನೆ ಕಳಿ ಆಚರಿಸಲಾಗುತ್ತದೆ. ಕೊಮ್ಮಾಡ್ ಮತ್ತು ಬೇಂಗ್ನಾಡ್ ಎಂದು ಎರಡು ಭಾಗಗಳಲ್ಲಿ ಹಬ್ಬ ನಡೆಸಲಾಗುತ್ತದೆ. ಕೊಮ್ಮಾಡ್ ಭಾಗಕ್ಕೆ ಅರಮಣಮಾಡ ಕುಟುಂಬ, ಬೇಂಗ್ನಾಡ್ ಭಾಗಕ್ಕೆ ಮೇಚಮಾಡ ಕುಟುಂಬದ ಬಲ್ಯಮನೆಯಲ್ಲಿ ಆಚರಣೆ ನಡೆಯಿತು. ಬೋಟೆಕಾರ ಅಯ್ಯಪ್ಪನಿಗೆ ಬೋಟೆಕಾರ ಬೆಪ್ಪೊ ಆಚರಣೆ ನಡೆಯಿತು. ಆ ಮೂಲಕ ಊರಿನ ಶುದ್ದ, ಮರ ಗಿಡ ಕಡಿಯದಂತೆ ನಿಯಮ ಪಾಲಿಸಲಾಯಿತು. ನಂತರ ಅಂಬಲದಲ್ಲಿ ಕೊಮ್ಮಾಡ್ ಮತ್ತು ಬೇಂಗ್ನಾಡ್ ಭಾಗದ ಗ್ರಾಮಸ್ಥರು ಒಂದಾಗಿ ಸೇರಿ ಕಳಿಯಲ್ಲಿ ಪಾಲ್ಗೊಂಡರು. ಊರು ಸುತ್ತಿದ ನಂತರ ಮತ್ತೆ ಅಂಬಲಕ್ಕೆ ಸೇರುವುದು, ಕುದ್ರೆ ಹೊತ್ತು, ಮೊಗ ಹೊತ್ತು ಆಚರಣೆ ಮಾಡಲಾಯಿತು. ನಂತರ ಕೆಸರು ದೇಹಕ್ಕೆ ಹಾಕಿಕೊಂಡು ಬಂಡ್ಕಳಿ ಆಚರಿಸಲಾಯಿತು. ನಂತರ ದೇವರಿಗೆ ಭಂಡಾರ, ಪ್ರಸಾದ ಅರ್ಪಣೆ ಮೂಲಕ ಹಬ್ಬಕ್ಕೆ ತೆರೆ ಎಳೆಯಲಾಯಿತು. 150 ಮನೆಗಳಿಗೆ ಮನೆಕಳಿ ಆಚರಿಸುವ ವಿಶೇಷತೆ ಇಲ್ಲಿನ ಹಬ್ಬಕ್ಕೆ ಇದೆ. ಭದ್ರಕಾಳಿ ದರ್ಶನ ನೀಡುತ್ತದೆ.
ಮಾರಿ ನೀಕೋ ಕಾರ್ಯ: ಬೆಸಗೂರು ಬೋಡ್ನಮ್ಮೆಯಲ್ಲಿ ಮೇ 14 ರಂದು ಮಾರಿ ನೀಕೋ ಆಚರಣೆ ನೆರವೇರಿಸಲಾಯಿತು. ಆಚರಣೆಯ ಹಿನ್ನೆಲೆಯಂತೆ ಮನೆ, ಮನೆಗಳಿಗೆ ತೆರಳಿ ಕಸ ತಂದು ಹೊಳೆಯ ಬದಿಯಲ್ಲಿ ಇಟ್ಟು ಆಚರಿಸುವ ವಿಶೇಷ ಆಚರಣೆಯಾಗಿದ್ದು, ವಿಶೇಷತೆ ಪಡೆದುಕೊಂಡಿದೆ.
ಫೋಟೋ 26 ಜಿಕೆಪಿ 03 ; ಕೋಟೂರು ಗ್ರಾಮದ ದೇವರ ಕುದ್ರೆ.
04 ; ಬೆಸಗೂರು ಗ್ರಾಮದ ಕುದ್ರೆ ನಮ್ಮೆ
05 ; ಮಕ್ಕಳ ಸಂಭ್ರಮ