ಈ ಬಾರಿಯ ಹಾಸನ ಲೋಕಸಭಾ ಕ್ಷೇತ್ರದ ಫಲಿತಾಂಶ ತೀವ್ರ ಕುತೂಹಲಕ್ಕೆ ಕಾರಣವಾಗುದೆ. ಹಾಸನದಲ್ಲಿ ಕ್ಷೇತ್ರದಲ್ಲಿ ಘಟಾನುಘಟಿ ರಾಜಕೀಯ ಮುತ್ಸದಿಗಳ ಮೊಮ್ಮಕ್ಕಳ ನಡುವೆ ಜಿದ್ದಾಜಿದ್ದಿ ಏರ್ಪಟ್ಟಿದೆ. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಮೊಮ್ಮಗ ಪ್ರಜ್ವಲ್ ರೇವಣ್ಣ ಜೆಡಿಎಸ್ ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿದ್ದರೆ, ಮಾಜಿ ಮಂತ್ರಿ, ದಿವಂಗತ ಜಿ. ಪುಟ್ಟಸ್ವಾಮಿಗೌಡರ ಮೊಮ್ಮಗ ಶ್ರೇಯಸ್ ಪಾಟೀಲ್ ಕಾಂಗ್ರೆಸ್ನಿಂದ ಸ್ಪರ್ಧೆ ಮಾಡಿದ್ದಾರೆ. ಹೀಗಾಗಿ ಪ್ರಜ್ವಲ್, ಶ್ರೇಯಸ್ ಪಾಟೀಲ್ ನಡುವೆ ಜಿದ್ದಾಜಿದ್ದಿ ಏರ್ಪಟ್ಟಿದ್ದು, ಈ ಬಾರಿ ಎರಡು ಕುಟುಂಬದ ಜಟ್ಟಿ ಕಾಳಗದಲ್ಲಿ ಯಾರು ಗೆಲ್ಲುತ್ತಾರೆ ಎಂದು ನೋಡಬೇಕಿದೆ.
ಎಕ್ಸಿಟ್ ಪೋಲ್ ಹೇಳುವುದೇನು?
ಜೂನ್ 1ರಂದು ಹಲವು ಖಾಸಗಿ ವಾಹಿನಿಗಳು ಮತ್ತು ಸುದ್ದಿ ಸಂಸ್ಥೆಗಳು ಪ್ರಕಟಿಸಲಾದ ಬಹುತೇಕ ಚುನಾವಣೋತ್ತರ ಸಮೀಕ್ಷೆಗಳ ಪ್ರಕಾರ ಹಾಸನದಲ್ಲಿ ಎನ್ ಡಿಎ ಮೈತ್ರಿಕೂಟದ ಅಭ್ಯರ್ಥಿ ಪ್ರಜ್ವಲ್ ರೇವಣ್ಣನೇ ಗೆಲ್ಲಬಹುದು ಎನ್ನುವ ಭವುಷ್ಯ ನುಡಿದಿವೆ. ಸಾಕಷ್ಟು ವಿವಾದ, ಗೊಂದಲದೊಂದಿಗೆ ರಾಜಕೀಯ ಸವಾಲುಗಳು, ಪೆನ್ಡ್ರೈವ್ ವೈರಲ್ ನಡುವೆಯೇ ಪ್ರಜ್ವಲ್ ರೇವಣ್ಣ ಅವರು ಗೆಲುವು ಸಾಧಿಸಬಹುದು ಎಂದು ಎಕ್ಸಿಟ್ ಪೋಲ್ ತಿಳಿಸಿವೆ. ಇನ್ನು ಇತ್ತ ಕಾಂಗ್ರೆಸ್ ಸಹ ತಮ್ಮ ಗೆಲುವಿನ ಕ್ಷೇತ್ರಗಳಲ್ಲಿ ಹಾಸನವೊಂದನ್ನೂ ಸಹ ಇಟ್ಟುಕೊಂಡಿದೆ. ಜೆಡಿಎಸ್ ಬಿಜೆಪಿ ಮೈತ್ರಿ ಅಭ್ಯರ್ಥಿ ವಿರುದ್ಧ ಆಡಳಿತ ವಿರೋಧಿ ಅಲೆ, ಪೆನ್ಡ್ರೈವ್, ಕುಟುಂಬ ರಾಜಕಾರಣದಿಂದ ಕ್ಷೇತ್ರದ ಜನ ಬೇಸತ್ತು ಈ ಬಾರಿ ಕಾಂಗ್ರೆಸ್ನ ಶ್ರೇಯಸ್ ಪಾಟೀಲ್ ಕೈ ಹಿಡಿಯುತ್ತಾರೆ ಎನ್ನುವ ನಂಬಿಕೆ ಕಾಂಗ್ರೆಸ್ ನಾಯಕರಲ್ಲಿದೆ.
ಮತದಾನಕ್ಕೆ ಎರಡು ದಿನ ಇರುವಾಗಲೇ ಪೆನ್ಡ್ರೈವ್ ಓಪನ್
ಹಾಸನದ ಹಾಲಿ ಸಂಸದ ಪ್ರಜ್ವಲ್ ರೇವಣ್ಣ. ಈ ಬಾರಿಯ ಚುನಾವಣೆಯಲ್ಲಿಯೂ ಅವರೇ ಬಿಜೆಪಿ-ಜೆಡಿಸ್ ಮೈತ್ರಿ ಅಭ್ಯರ್ಥಿ. ಮತದಾನಕ್ಕೂ ಮೊದಲು ಹಂಚಿಕೆಯಾದ ಪ್ರಜ್ವಲ್ ರೇವಣ್ಣರದ್ದು ಎಂದು ಆರೋಪಿಸಲಾದ ಅಶ್ಲೀಲ ವಿಡಿಯೋ ಪ್ರಕರಣ ದೇಶಾದ್ಯಂತ ಸಂಚಲನಕ್ಕೆ ಕಾರಣವಾಗಿತ್ತು. ಲೋಕಸಭೆ ಚುನಾವಣೆಯ ನಡುವೆ ಭಾರತ ಮಾತ್ರವಲ್ಲದೇ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರೀ ಸದ್ದು ಮಾಡಿದ ಹಾಸನದ ಸಂಸದ ಪ್ರಜ್ವಲ್ ರೇವಣ್ಣ ಅವರ ಲೈಂಗಿಕ ದೌರ್ಜನ್ಯ ಹಾಗೂ ಪೆನ್ಡ್ರೈವ್ ಪ್ರಕರಣದ ನಡುವೆಯೇ ಅಲ್ಲಿನ ಫಲಿತಾಂಶ ಏನಾಗಬಹುದು ಎನ್ನುವ ಕುತೂಹಲ ಇದ್ದೇ ಇದೆ.
ಹಾಸನ ಲೋಕಸಭಾ ವ್ಯಾಪ್ತಿಗೆ ಬರುವ ವಿಧಾನಸಭಾ ಕ್ಷೇತ್ರಗಳು
ಹಾಸನ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ 7 ವಿಧಾನಸಭಾ ಕ್ಷೇತ್ರಗಳು ಮತ್ತು ಚಿಕ್ಕಮಗಳೂರಿನ ಕಡೂರು ವಿಧಾನಸಭಾ ಕ್ಷೇತ್ರ ಸೇರಿ 8 ಕ್ಷೇತ್ರಗಳು ಬರುತ್ತವೆ. ಕಡೂರು, ಅರಸೀಕೆರೆ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರು ಇದ್ದಾರೆ. ಹಾಸನ, ಹೊಳೆನರಸೀಪುರ, ಶ್ರವಣಬೆಳಗೊಳ ಮತ್ತು ಅರಕಲಗೂಡಿನಲ್ಲಿ ಜೆಡಿಎಸ್ ಶಾಸಕರು ಇದ್ದಾರೆ. ಇನ್ನು ಬೇಲೂರು ಮತ್ತು ಸಕಲೇಶಪುರದಲ್ಲಿ ಬಿಜೆಪಿ ಶಾಸಕರಿದ್ದಾರೆ.
ಮೊದಲ ಚುನಾವಣೆಯಲ್ಲೇ 1 ಲಕ್ಷಕ್ಕೂ ಅಧಿಕ ಅಂತರದಿಂದ ಗೆದ್ದಿದ್ದ ಪ್ರಜ್ವಲ್
2019ರ ಚುನಾವಣೆಯಲ್ಲಿ, ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದವು. ಮೊದಲ ಚುನಾವಣೆ ಎದುರಿಸಿದ್ದ ಪ್ರಜ್ವಲ್ ರೇವಣ್ಣ 6,76,606 ಮತಗಳನ್ನು ಪಡೆದಿದ್ದು, 1,41,224 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಎದುರಾಳಿಯಾಗಿದ್ದ ಬಿಜೆಪಿಯ ಎ. ಮಂಜು 5,35,282 ಮತಗಳನ್ನು ಪಡೆದು ಸೋಲು ಕಂಡಿದ್ದರು. ಮೊದಲ ಚುನಾವಣೆಯಲ್ಲಿಯೇ ಪ್ರಜ್ವಲ್ ರೇವಣ್ಣ ಕಾಂಗ್ರೆಸ್ ಬೆಂಬಲವನ್ನು ಪಡೆದು, ಸಂಸತ್ ಪ್ರವೇಶ ಮಾಡಿದ್ದರು.