ಬೆಳಗಾವಿ: ನಮ್ಮ ನಾಯಕರ ಅತಿಯಾದ ವಿಶ್ವಾಸವೇ ರಾಜ್ಯದಲ್ಲಿ ಕಾಂಗ್ರೆಸ್ ಎರಡಂಕಿ ತಲುಪದೇ ಇರಲು ಕಾರಣ ಎಂದು ಸಚಿವ ಸತೀಶ್ ಜಾರಕಿಹೊಳಿ ಪರೋಕ್ಷವಾಗಿ ಡಿಕೆ ಶಿವಕುಮಾರ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದರ ಬೆನ್ನಲ್ಲೇ ಇದೀಗ ಬೆಳಗಾವಿ ಲೋಕಸಭಾ ಫಲಿತಾಂಶದ ಬಗ್ಗೆ ಪ್ರತಿಕ್ರಿಯಿಸಿದ್ದು, ಬೆಳಗಾವಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೋಲಲು ನಾನು ಕಾರಣವಲ್ಲ. 5 ಲಕ್ಷ ಲಿಂಗಾಯತ ಮತದಾರರಿದ್ದಾರೆ. ಅವರು ನನ್ನ ಮಾತು ಕೇಳುತ್ತಾರಾ? ಮತದಾರರನ್ನು ಸೆಳೆಯುವಲ್ಲಿ ಸಚಿವೆ ಹೆಬ್ಬಾಳ್ಕರ್ ವಿಫಲರಾಗಿದ್ದಾರೆ ಎಂದು ಹೇಳಿದ್ದಾರೆ.
ಬೆಳಗಾವಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಸತೀಶ್ ಜಾರಕಿಹೊಳಿ, ಬೆಳಗಾವಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೋಲಲು ನಾನು ಕಾರಣವಲ್ಲ. 5 ಲಕ್ಷ ಲಿಂಗಾಯತ ಮತದಾರರಿದ್ದಾರೆ. ಅವರು ನನ್ನ ಮಾತು ಕೇಳುತ್ತಾರಾ? ಮತದಾರರನ್ನು ಸೆಳೆಯುವಲ್ಲಿ ಸಚಿವೆ ಹೆಬ್ಬಾಳ್ಕರ್ ವಿಫಲರಾಗಿದ್ದಾರೆ. ಇದೇ ಬೆಳಗಾವಿ ಕ್ಷೇತ್ರದ ಕಾಂಗ್ರೆಸ್ ಸೋಲಿಗೆ ಕಾರಣ. ನಾವು ಗೆಲ್ಲುವ ನಿಟ್ಟಿನಲ್ಲಿ ಕೆಲಸ ಮಾಡಿದ್ದೇವೆ, ಸೋಲಿಸಲು ಅಲ್ಲ. ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲೇ ಮೃಣಾಲ್ಗೆ ಹಿನ್ನಡೆ ಆಗಿದೆ. ಲಿಂಗಾಯತ, ಮರಾಠ ಮತ ಸೆಳೆಯಲು ವಿಫಲವಾಗಿದ್ದರಿಂದ ಸೋಲಾಗಿದೆ ಎಂದು ಸ್ಪಷ್ಟಪಡಿಸಿದರು. ಈ ಮೂಲಕ ಸತೀಶ್ ಜಾರಕಿಹೊಳಿ ತಮ್ಮ ಮೇಲಿನ ಆರೋಪದ ಬಗ್ಗೆ ಸ್ಪಷ್ಟನೆ ನೀಡಿದರು.
ಲೋಕಸಭೆ ಚುನಾವಣೆ ವೇಳೆ ಚಿಕ್ಕೋಡಿ ಕ್ಷೇತ್ರದ ಉಸ್ತುವಾರಿಯನ್ನು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ಗೆ ನೀಡಲಾಗಿತ್ತು. ಅದರಂತೆ ಹೆಬ್ಬಾಳ್ಕರ್ ಸಹ ಸತೀಶ್ ಜಾರಕಿಹೊಳಿ ಪುತ್ರಿ ಪ್ರಿಯಾಂಕ ಪರ ಚಿಕ್ಕೋಡಿ ಕ್ಷೇತ್ರದಲ್ಲಿ ಪ್ರಚಾರ ಮಾಡಿದ್ದು, ಇದೀಗ ಪ್ರಿಯಾಂಕ ಗೆಲುವಿನ ನಗೆ ಬೀರಿದ್ದಾರೆ. ಇನ್ನು ಬೆಳಗಾವಿ ಲೋಕಸಭಾ ಕ್ಷೇತ್ರದ ಚುನಾವಣಾ ಉಸ್ತುವಾರಿ ಹೊಣೆಯನ್ನು ಸಚಿವ ಸತೀಶ್ ಜಾರಕಿಹೊಳಿ ವಹಿಸಲಾಗಿತ್ತು. ಸಚಿವೆ ಲಕ್ಷ್ಮೀ ಪುತ್ರ ಮೃಣಾಲ್ ಹೆಬ್ಬಾಳ್ಕರ್ ಗೆಲ್ಲಿಸಿಕೊಂಡು ಬರುವ ಹೊಣೆ ಸತೀಶ್ ಜಾರಕಿಹೊಳಿಗೆ ನೀಡಲಾಗಿತ್ತು. ಆದ್ರೆ, ಅದು ಸಾಧ್ಯವಾಗಲಿಲ್ಲ. ಈ ಹಿನ್ನೆಲೆಯಲ್ಲಿ ಇದೀಗ ಸೋಲಿಗೆ ಕಾರಣ ಸತೀಶ್ ಜಾರಕಿಹೊಳಿ ಎನ್ನುವ ಮಾತುಗಳು ಕೇಳಿಬರುತ್ತಿವೆ. ಹೀಗಾಗಿ ಇದಕ್ಕೆ ಖುದ್ದು ಸತೀಶ್ ಜಾರಕಿಹೊಳಿ ತಮ್ಮ ಮೇಲಿನ ಆರೋಪಗಳಿಗೆ ಸ್ಪಷ್ಟನೆ ನೀಡಿದ್ದಾರೆ.