ಪ್ರತಿನಿಧಿ ವರದಿ ಬೇಲೂರು
ತಾಲೂಕಿನ ದೊಡ್ಡಸಾಲಾವರ ಗ್ರಾಮದಲ್ಲಿ ಸೋಮವಾರ ರಾತ್ರಿ ಗುಂಡು ಹಾರಿಸಿ ಪತ್ನಿಯನ್ನು ಹತ್ಯೆಗೈದಿರುವ ಪತಿ, ಬಳಿಕ ತಾನೂ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಜಾಜಿ (45) ಮತ್ತು ಹರೀಶ್ ಪೂಜಾರಿ [50] ಕ್ರಮವಾಗಿ ಹತ್ಯೆಗೀಡಾದ ಮತ್ತು ಆತ್ಮಹತ್ಯೆ ಮಾಡಿಕೊಂಡ ದಂಪತಿ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತ್ನಿಯ ಮೇಲೆ ನಾಡ ಬಂದೂಕಿನಿಂದ ಗುಂಡು ಹಾರಿಸಿರುವ ಪತಿ, ಬಳಿಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ಧಾನೆ.
ಪ್ರತಿನಿತ್ಯ ಒಂದಲ್ಲ ಒಂದು ಕಾರಣಕ್ಕೆ ಪತಿ-ಪತ್ನಿಯ ನಡುವೆ ಜಗಳ ನಡೆಯುತ್ತಿತ್ತು. ಅಂತೆಯೆ, ಸೋಮವಾರ ರಾತ್ರಿ ಜಗಳ ಶುರುವಾಗಿ, ವಿಕೋಪಕ್ಕೆ ತಿರುಗಿದೆ. ವಾಗ್ವಾದದಿಂದ ತೀವ್ರವಾಗಿ ಆಕ್ರೋಶಗೊಂಡ ಹರೀಶ್, ಪತ್ನಿಗೆ ನಾಡ ಬಂದೂಕಿನಿಂದ ಗುಂಡು ಹಾರಿಸಿ ಹತ್ಯೆಗೈದಿದ್ದಾನೆ. ನಂತರ ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ದಂಪತಿಗೆ ಮೂವರು ಮಕ್ಕಳಿದ್ದು, ಎಲ್ಲರೂ ಬೇರೆ ಊರುಗಳಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಮನೆಯಲ್ಲಿ ಗಂಡ-ಹೆಂಡತಿ ಇಬ್ಬರೇ ಇದ್ದರು. ಗುಂಡಿನ ಶಬ್ದ ಕೇಳಿದ್ದರಿಂದ ಸ್ಥಳೀಯರು ಹೋಗಿ ನೋಡಿದಾಗ ವಿಷಯ ತಿಳಿದಿದೆ.
ಸ್ಥಳಕ್ಕೆ ಅರೇಹಳ್ಳಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.