- ಶಾಸಕ ಸ್ವರೂಪ ಪ್ರಕಾಶ್ ಅಭಿಪ್ರಾಯ
ಪ್ರತಿನಿಧಿ ವರದಿ ಹಾಸನ
ಪ್ರತಿಯೊಬ್ಬರು ಆರೋಗ್ಯವನ್ನು ಉತ್ತಮವಾಗಿ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಯೋಗಭ್ಯಾಸವನ್ನು ಪ್ರತಿನಿತ್ಯ ಅಳವಡಿಸಿಕೊಳ್ಳಬೇಕು ಎಂದು ಶಾಸಕ ಸ್ವರೂಪ ಪ್ರಕಾಶ್ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆಯುಷ್ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ, ಕ್ರೀಡಾ ಮತ್ತು ಯುವ ಸಬಲೀಕರಣ ಇಲಾಖೆ, ಹಾಗೂ ವಿವಿಧ ಯೋಗ ಸಂಘಟನೆಗಳ ಸಹಯೋಗದೊಂದಿಗೆ 10ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಯುಕ್ತ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಏರ್ಪಡಿಸಿದ್ದ ಯೋಗ ಜಾಥಾ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಚಾಲನೆ ನೀಡಿ ಮಾತನಾಡಿದರು.
ಪ್ರತಿದಿನ ಯೋಗ ಮಾಡುವುದರಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ವೃದ್ದಿಯಾಗುತ್ತದೆ ಎಂದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಬಿ.ಆರ್.ಪೂರ್ಣಿಮಾ ಮಾತನಾಡಿ, ವಿದೇಶಿಯರು ನಮ್ಮಲ್ಲಿಗೆ ಬಂದು ಯೋಗವನ್ನು ಕಲಿಯುತ್ತಿದ್ದಾರೆ. ಆದರೆ ನಮ್ಮ ಜೀವನದಲ್ಲಿ ಯೋಗವನ್ನು ಅಳವಡಿಸಿಕೊಳ್ಳುತ್ತಿಲ್ಲ. ಎಲ್ಲರೂ ಕೂಡ ಯೋಗವನ್ನು ಪ್ರತಿನಿತ್ಯ ಒಂದು ಭಾಗವಾಗಿ ಅಳವಡಿಸಿಕೊಂಡು ಇನ್ನು ಹೆಚ್ಚು ಯೋಗವನ್ನು ವಿಸ್ತಾರಗೊಳಿಸಬೇಕು ಎಂದು ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಕೆ.ಟಿ.ಶಾಂತಲಾ ಮಾತನಾಡಿ, ಆರೋಗ್ಯ ಸಾಮಥ್ರ್ಯವನ್ನು ಹೆಚ್ಚಿಸಿಕೊಳ್ಳಲು ಪ್ರತಿಯೊಬ್ಬರು ಜೀವನದಲ್ಲಿ ಯೋಗವನ್ನು ರೂಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜಿನ ಪ್ರಾಂಶುಪಾಲ ಪ್ರಸನ್ನ ಎನ್.ರಾವ್, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಈ.ಕೃಷ್ಣೇಗೌಡ, ಜಿಲ್ಲಾ ಆಯುಷ್ ಅಧಿಕಾರಿ ಮ್ಯಾಸಬೇರಿ ವಿವಿಧ ಯೋಗ ಸಂಸ್ಥೆಗಳ ಯೋಗಪಟುಗಳು ಮತ್ತಿತರರು ಭಾಗವಹಿಸಿದ್ದರು.