ಪ್ರತಿನಿಧಿ ವರದಿ ಹನೂರು
ಪಟ್ಟಣದ ಕೇಂದ್ರ ಸ್ಥಾನದಲ್ಲಿ ರೈತ ಸಂಘದ ನೂತನ ಅಧ್ಯಕ್ಷ ಮಾದಪ್ಪ ನೇತೃತ್ವದಲ್ಲಿ ಹಸಿರು ಶಾಲು ದೀಕ್ಷೆಯನ್ನು 96 ಮಂದಿ ರೈತರು ಪಡೆದರು.
ಹನೂರು ಪಟ್ಟಣದ ವಿವೇಕಾನಂದ ಶಾಲಾ ಮುಂಭಾಗ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆಯ ಹನೂರು ಘಟಕವನ್ನು ರೈತ ಸಂಘದ ಜಿಲ್ಲಾಧ್ಯಕ್ಷ ಹೊನ್ನೂರ್ ಪ್ರಕಾಶ್ ಅವರು ಉದ್ಘಾಟಿಸಿದರು.
ನೂತನ ಹನೂರು ಘಟಕದ ನೂತನ ಅದ್ಯಕ್ಷರಾಗಿ ಎಸ್.ಮಾದಪ್ಪ, ಉಪಾಧ್ಯಕ್ಷ ಮಹದೇವಶೆಟ್ಟಿ ಬೆಳ್ಳತ್ತೂರು, ಕಾರ್ಯದರ್ಶಿ ಎಮ್.ಮಾದಪ್ಪನ್ ಬೆಳ್ಳತ್ತೂರು, ಖಜಾಂಚಿ ನಟರಾಜು ಸೇರಿದಂತೆ 96ಮಂದಿ ಹಸಿರು ಶಾಲು ದೀಕ್ಷೆ ಪಡೆಯುವ ಮುಖಾಂತರ ಸದಸ್ಯತ್ವ ಪಡೆದಿದ್ದಾರೆ.
ರೈತ ಸಂಘದ ಜಿಲ್ಲಾಧ್ಯಕ್ಷ ಹೊನ್ನೂರು ಪ್ರಕಾಶ್ ಮಾತನಾಡಿ, ಹನೂರು ಸುತ್ತಮುತ್ತಲಿನ ಗ್ರಾಮಗಳಾದ ವೈಶಂಪಾಳ್ಯ, ಬೆಳ್ತೂರು, ಉದ್ದನೂರು ಮಹಾಲಿಂಗನಕಟ್ಟೆ ಸೇರಿ ನಾನಾ ಗ್ರಾಮಗಳ ರೈತರು ಒಗ್ಗೂಡಿ ರೈತ ಸಂಘವನ್ನು ಹನೂರು ಕೇಂದ್ರ ಸ್ಥಾನದಲ್ಲಿ ರಚನೆ ಮಾಡಿರುವುದು ಒಂದು ಉತ್ತಮ ಬೆಳವಣಿಗೆ. ಜತೆಗೆ ಆಯಾ ಗ್ರಾಮಗಳಲ್ಲೆ ಘಟಕ ಮಾಡಿದ್ದೂ ಗ್ರಾಮದಲ್ಲಿನ ಮೂಲಭೂತ ಸೌಲಭ್ಯಗಳು ಹಾಗೂ ಸರ್ಕಾರದ ಯೋಜನೆಗಳನ್ನು ಪಡೆಯಲು ಸಂಘಟನೆಯಿಂದ ಹೆಚ್ಚು ಬಲ ಬಂದಂತೆ ಆಗುತ್ತದೆ ಎಂದರು.
ತಾಲೂಕು ಘಟಕದ ಅಧ್ಯಕ್ಷ ಚಂಗಡಿ ಕರಿಯಪ್ಪ ಮಾತನಾಡಿ, ಗಡಿ ಗ್ರಾಮಗಳಲ್ಲಿ ಕಾಡುಪ್ರಾಣಿಗಳ ಹಾವಳಿಯಿಂದ ರೈತರು ಹಾಗೂ ಗ್ರಾಮಸ್ಥರು ದಿನ ನಿತ್ಯ ಒಂದಲ್ಲ ಒಂದು ಸಮಸ್ಯೆಯಿಂದ ಪರಿತಪಿಸುತ್ತಿದ್ದಾರೆ. ಹೀಗಾಗಿ ಸಂಬಂಧಪಟ್ಟ ಅರಣ್ಯ ಇಲಾಖೆ ಅಧಿಕಾರಿಗಳು ಗಮನ ಹರಿಸಿ ಕಾಡಂಚಿನ ಗ್ರಾಮಗಳಲ್ಲಿ ಹೆಚ್ಚಿನ ಸಿಬ್ಬಂದಿ ನಿಯೋಜಿಸ ಬೇಕು. ಆನೆ, ಹಂದಿ ಹಾಗೂ ಇತರೆ ಪ್ರಾಣಿಗಳನ್ನು ನಿಯಂತ್ರಿಸಲು ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳು ಗಮನ ಹರಿಸಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ರೈತ ಮುಖಂಡರಾದಂತಹ ಅಂಬಳೆ ಶಿವುಕುಮಾರ, ರಾಜು ಶ್ರೀನಿವಾಸ ಸೇರಿದಂತೆ ಹಲವರು ಹಾಜರಿದ್ದರು.