ನಾಯಕರ ಸಂಘದ ಅಧ್ಯಕ್ಷ ಎಂ.ರಾಮಚಂದ್ರ ಸಲಹೆ
ನಿವೃತ್ತ ನೌಕರರಿಗೆ ಸನ್ಮಾನ ಸಮಾರಂಭ
ಪ್ರತಿನಿಧಿ ವರದಿ ಚಾಮರಾಜನಗರ
ನಾಯಕ ಸಮುದಾಯದ ವಿದ್ಯಾರ್ಥಿಗಳು ಐಎಎಸ್, ಕೆಎಎಸ್ ನಂತಹ ಉನ್ನತ ಹುದ್ದೆಗಳಿಗೆ ತೆರಳಲು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದು ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ನಾಯಕರ ಸಂಘದ ಅಧ್ಯಕ್ಷ ಎಂ.ರಾಮಚಂದ್ರ ಸಲಹೆ ನೀಡಿದರು.
ನಗರದ ಮಹರ್ಷಿ ಶ್ರೀ ವಾಲ್ಮೀಕಿ ಭವನದಲ್ಲಿ ತಾಲೂಕು ನಾಯಕ ಸರ್ಕಾರಿ ನೌಕರರ ಕ್ಷೇಮಾಭಿವೃದ್ದಿ ಸಂಘ, ನಾಯಕ ನೌಕರರ ಸ್ನೇಹ ಬಳಗ ಹಾಗೂ ಮಹರ್ಷಿ ಶ್ರೀ ವಾಲ್ಮೀಕಿ ನೌಕರರ ಸೌಹಾರ್ದ ಸಹಕಾರ ನಿಯಮಿತದ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ, 11ನೇ ವರ್ಷದ ವಾರ್ಷಿಕೋತ್ಸವ, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ನಿವೃತ್ತ ನೌಕರರಿಗೆ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಮಹರ್ಷಿ ವಾಲ್ಮೀಕಿಯವರು ಶಿಕ್ಷಣಕ್ಕೆ ಒತ್ತು ನೀಡಿದರು. ಲವ-ಕುಶರಿಗೆ ವಿದ್ಯೆ ಕಲಿಸುವ ಮೂಲಕ ತಂದೆ ರಾಮನ್ನು ಮೀರಿಸುವಂತೆ ಮಾಡಿದರು. ಈ ನಿಟ್ಟಿನಲ್ಲಿ ಸಮುದಾಯದ ಮಕ್ಕಳು ಅರ್ಧಕ್ಕೆ ಶಿಕ್ಷಣ ಮೊಟಕುಗೊಳಿಸಬಾರದು. ಇಂದು ಸರ್ಕಾರ ಪೋಷಕರಿಗೆ ಹೊರೆಯಾಗದಂತೆ ಉಚಿತ ಶಿಕ್ಷಣವನ್ನು ನೀಡುವ ಜತೆಗೆ ಉಚಿತ ತರಬೇತಿಯನ್ನು ನೀಡುತ್ತಿದೆ. ಪೋಷಕರು ಸರ್ಕಾರದ ಸವಲತ್ತುಗಳನ್ನು ಸದ್ಬಳಕೆಮಾಡಿಕೊಂಡು ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಬೇಕಿದೆ ಎಂದರು.
ನಾಯಕ ಸರ್ಕಾರಿ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಪ್ರತಿಭಾ ಪುರಸ್ಕಾರ ಹಮ್ಮಿಕೊಂಡು, ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡುತ್ತಿರುವುದು ವಿದ್ಯಾರ್ಥಿಗಳ ಹೆಚ್ಚಿನ ಓದಿಗೆ ಪೂರಕವಾಗಲಿದೆ. ಇದು ಸಮುದಾಯದ ಮಕ್ಕಳ ಓದಿಗೆ ಪ್ರೇರಣೆಯಾಗಲಿದೆ. ಪ್ರತಿಭಾ ಪುರಸ್ಕಾರ ಪಡೆದಿರುವ ವಿದ್ಯಾರ್ಥಿಗಳ ಜೀವನ ಉಜ್ವಲಿಸಲಿ ಎಂದು ಆಶಿಸಿದರು.
ಜಿಲ್ಲಾ ಗ್ಯಾರಂಟಿ ಯೋಜನೆಗಳ ಪ್ರಾಧಿಕಾರ ಅಧ್ಯಕ್ಷ ಎಚ್.ವಿ.ಚಂದ್ರು ಮಾತನಾಡಿ, ಮಹರ್ಷಿ ಶ್ರೀವಾಲ್ಮೀಕಿ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಸಮುದಾಯದ ವಿದ್ಯಾರ್ಥಿಗಳು ಅದರ್ಶವಾಗಿಟ್ಟುಕೊಂಡು ಶಿಕ್ಷಣ ಕಲಿಯುವಂತಾಗಬೇಕು ಎಂದರು.
2023-24ನೇ ಸಾಲಿನ ಎಸ್ಎಸ್ ಎಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಿ, ಬ್ಯಾಗ್, ನೆನಪಿನ ಕಾಣಿಕೆ, ಪ್ರಮಾಣಪತ್ರ ನೀಡಿ ಗೌರವಿಸಲಾಯಿತು.
ಸಮುದಾಯದ ಮುಖಂಡರಾದ ಕೆಲ್ಲಂಬಳ್ಳಿ ಸೋಮನಾಯಕ ಹಾಗೂ ಕಣ್ಣೇಗಾಲ ಎಂ.ಶಿವಕುಮಾರ್ ಮಾತನಾಡಿದರು. ಮುಖಂಡರಾದ ಚಂದಕವಾಡಿ ಕಪಿನಿನಾಯಕ, ಪು.ಶ್ರೀನಿವಾಸನಾಯಕ, ನಗರಸಭಾ ಮಾಜಿ ಅಧ್ಯಕ್ಷ ಸುರೇಶ್ ನಾಯಕ, ಶಿಕ್ಷಕ ಕೆಂಪನಪುರ ಸಿದ್ದರಾಜು, ಹರದನಹಳ್ಳಿ ನಟರಾಜು, ನಿವೃತ್ತ ಪ್ರಾಂಶುಪಾಲ ಬಂಗಾರನಾಯಕ, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಆರ್.ಸುಂದರ್, ವಾಲ್ಮೀಕಿ ಟ್ರಸ್ಟ್ ಅಧ್ಯಕ್ಷ ಬಿ.ಕಾಂ.ಮಹದೇವನಾಯಕ, ಯಜಮಾನ ಮಹದೇವನಾಯಕ ಸೇರಿದಂತೆ ಇತರರು ಇದ್ದರು.
7ಸಿಎಚ್ಎನ್.4: ಚಾ.ನಗರದ ಶ್ರೀಮಹರ್ಷಿ ವಾಲ್ಮೀಕಿ ಭವನದಲ್ಲಿ ನಡೆದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಎಸ್ಎಸ್ಎಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.