ಪೊಲೀಸರಿಂದಲೇ ನಡೆಯಿತು ಅಂತ್ಯಕ್ರಿಯೆ
ಪ್ರತಿನಿಧಿ ವರದಿ ಕೊಳ್ಳೇಗಾಲ
ತಾಲೂಕಿನ ಶಿವನಸಮುದ್ರ ಬಳಿಯ ದರ್ಗಾದಲ್ಲಿ ಅಪರಿಚಿತ ಮಹಿಳೆ ಶವ ದೊರಕಿದ್ದು, ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಶನಿವಾರ ಪ್ರಕರಣ ದಾಖಲಾಗಿದೆ.
ಸುಮಾರು 50 ರಿಂದ 55 ವರ್ಷ ಪ್ರಾಯದ ಅಪರಿಚಿತ ಮಹಿಳೆಯ ಶವವನ್ನು ಸಾರ್ವಜನಿಕರು ಶನಿವಾರ ಬೆಳಗ್ಗೆ ಗಮನಿಸಿದ್ದು, ಈ ಕುರಿತು ಗ್ರಾಮಾಂತರ ಠಾಣಾ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಬಳಿಕ ಸ್ಥಳಕ್ಕೆ ಎಎಸ್ಪಿ ಉದ್ದೇಶ್, ಡಿವೈಎಸ್ಪಿ ಎಂ.ಧರ್ಮೇಂದ್ರ, ಸಿಪಿಐ ಶಿವಮಾದಯ್ಯ, ಎಸೈ ಗಣೇಶ್ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ನಡುವೆ ದರ್ಗಾ ಬಳಿಯಲ್ಲಿರುವ ವಕ್ಛ್ ಬೋರ್ಡ್ ಮಂಡಳಿಯ ಸೂಪರ್ ವೈಸರ್ ಹಕಾವುಲ್ಲಾ ಅವರು ಪೊಲೀಸರಿಗೆ ಲಿಖಿತ ಹೇಳಿಕೆ ನೀಡಿದ್ದು, ಅಪರಿಚಿತ ಮಹಿಳೆ ಶವ ತಮ್ಮ ಕಚೇರಿ ಪಕ್ಕದಲ್ಲಿ ಅಂಗಾತ ಮಲಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಇವರು ಯಾರೆಂದು ಗೊತ್ತಿಲ್ಲ ಎಂದು ತಿಳಿಸಿದ್ದಾರೆ.
ಪರಿಣಾಮ, ಗ್ರಾಮಾಂತರ ಠಾಣಾ ಪೊಲೀಸರು, ಸುಮಾರು ಎರಡು ದಿನಗಳ ಹಿಂದೆ ಮೃತಪಟ್ಟಿರುವ ಈ ಮಹಿಳೆಯ ಗುರುತು ಪತ್ತೆಯಾಗದ ಹಿನ್ನೆಲೆ ಚಾ.ನಗರ ಜಿಲ್ಲಾ ಆಸ್ಪತ್ರೆಯ ಶವಗಾರಕ್ಕೆ ಮೃತ ದೇಹವನ್ನು ಸ್ಥಳಾಂತರಿಸಿ, ವೈದ್ಯರಿಂದ ಮರಣೋತ್ತರ ಪರೀಕ್ಷೆ ನಡೆಸಿದರು. ನಂತರ ಸಂಜೆ ಕೊಳ್ಳೇಗಾಲ ಪಟ್ಟಣದ ಬಸ್ ನಿಲ್ದಾಣ ಬಳಿಯಲ್ಲಿರುವ ಕೊಂಗಳಕೆರೆಯಲ್ಲಿ ಅಂತ್ಯಕ್ರಿಯೆ ನೆರವೇರಿಸಿದ್ದಾರೆ.
7ಕೆಜಿಎಲ್-2 ಫೋಟೋ ಶೀರ್ಷಿಕೆ: ಕೊಳ್ಳೇಗಾಲ ತಾಲೂಕಿನ ಶಿವನಸಮುದ್ರ ಬಳಿಯ ದರ್ಗಾದಲ್ಲಿ ದೊರೆತ ಅಪರಿಚಿತ ಮಹಿಳೆ ಶವವನ್ನು ಗ್ರಾಮಾಂತರ ಠಾಣಾ ಪೊಲೀಸರು ಶನಿವಾರ ಸಂಜೆ ಪಟ್ಟಣದ ಕೊಂಗಳಕೆರೆಯಲ್ಲಿ ಅಂತ್ಯಕ್ರಿಯೆ ನೆರವೇರಿಸಿದರು.