ನಟ ಡಾಲಿ ಧನಂಜಯ ಕುಟುಂಬದಲ್ಲಿ ಕಹಿ ಘಟನೆಯೊಂದು ನಡೆದುಹೋಗಿದೆ.
ಡಾಲಿ ಅವರ ಪ್ರೀತಿಯ ಅಜ್ಜಿ 95 ವರ್ಷದ ಮಲ್ಲಮ್ಮ ನಿಧನರಾಗಿದ್ದಾರೆ.ಲಿಂಗದೇವರಾಜೇಗೌಡ ಪತ್ನಿಯಾಗಿದ್ದ ಮಲ್ಲಮ್ಮ, ಹಾಸನದ ಅರಸೀಕೆರೆಯ ಕಾಳೇನಹಳ್ಳಿಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಕಳೆದ ಕೆಲ ತಿಂಗಳಿಂದ ವಯೋಸಹಜ ಕಾಯಿಲೆಯಿಂದ ಮಲ್ಲಮ್ಮ ಬಳಲುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.ಮಲ್ಲಮ್ಮ ಅವರ ಎರಡನೇ ಮಗನಾಗಿದ್ದ ಅಡವಿಸ್ವಾಮಿ ಅವರ ಪುತ್ರ ಡಾಲಿ ಧನಂಜಯ ಸ್ಯಾಂಡಲ್ ವುಡ್ ನ ಸದ್ಯದ ಬೇಡಿಕೆಯ ನಟರಲ್ಲಿ ಒಬ್ಬರಾಗಿದ್ದಾರೆ.
ಮೃತ ಮಲ್ಲಮ್ಮ ಅವರಿಗೆ 5 ಮಕ್ಕಳು. ಮೊಮ್ಮಗ ಡಾಲಿ ಅಂದರೆ ಅವರಿಗೆ ಅಚ್ಚುಮೆಚ್ಚು. ಪ್ರತಿ ಬಾರಿ ಚುನಾವಣಾ ಸಂದರ್ಭದಲ್ಲಿ ಡಾಲಿ ಧನಂಜಯ ಜತೆ ತೆರಳಿ ಮತದಾನ ಮಾಡುತ್ತಿದ್ದರು. ಧನಂಜಯಗೆ ಕೂಡ ಅಜ್ಜಿ ಮಲ್ಲಮ್ಮನ ಕಂಡ್ರೆ ತುಂಬಾನೆ ಪ್ರೀತಿ. ಚಿಕ್ಕವಯಸ್ಸಿನಿಂದಲೂ ಅಜ್ಜಿಯ ತೋಳಲ್ಲಿ ಧನಂಜಯ ಬೆಳೆದಿದ್ರು.
ಧನಂಜಯ್ಗೆ ಮದುವೆ ಮಾಡಬೇಕು. ನಾನು ಇದ್ದಾಗಲೇ ವಿವಾಹ ಮಾಡಬೇಕು ಎಂದು ಖಾಸಗಿ ಚಾನೆಲ್ ನ ಸಂದರ್ಶನದಲ್ಲಿ ಮಲ್ಲಮ್ಮ ಹೇಳಿದ್ರು. ಎಲ್ಲರ ಮದುವೆಯನ್ನೂ ಮಾಡಿದ್ದೇನೆ. ನಾವು ಹುಡುಕಿದ ಹುಡುಗಿಯನ್ನು ಅವನು ಒಪ್ಪಿಕೊಳ್ಳಬೇಕಲ್ಲ. ಅವನು ಒಪ್ಪಿಕೊಂಡು ಬಂದ್ರೆ ನಾನೇ ಮದುವೆ ಮಾಡ್ತೀನಿ ಎಂದಿದ್ದರು. ಮಲ್ಲಮ್ಮ ಡಾ. ರಾಜ್ಕುಮಾರ್ ಸಮಾಧಿ ಬಳಿ ಬಂದು ನೀವು ಬೆಳದಾಂಗೆ ನನ್ನ ಮೊಮ್ಮಕ್ಕಳು ಬೆಳೀಬೇಕು. ಅಷ್ಟು ಮಾಡಿ ಎಂದು ಕೋರಿದ್ದರು. ಈ ವಿಚಾರವನ್ನ ಸ್ವತಃ ಧನಂಜಯ ಸಂದರ್ಶನವೊಂದರಲ್ಲಿ ಹೇಳಿ ಭಾವುಕರಾಗಿದ್ರು.