ವಾಟ್ಸಾಪ್.. ಡಿಜಿಟಲ್ ಯುಗದಲ್ಲಿ ಜನರ ನಾಡಿಮಿಡಿತ. ಜೀವ ಉಳಿಯೋಕೆ ಗಾಳಿ ಹೇಗೆ ಮುಖ್ಯನೋ.. ಪ್ರಸ್ತುತ ಬದುಕು ನಡೆಸಲಿಕ್ಕೆ ವಾಟ್ಸಾಪ್ ಅಷ್ಟೇ ಬಹುಮುಖ್ಯ ಅಗೋಗಿದೆ. ಬೆರಳಂಚಿನ ಜಗತ್ತಲ್ಲಿ ವಾಟ್ಸಾಪ್ ಜನರ ಜೀವನಾಡಿ ಆಗಿದೆ.ವಿಶ್ವದ ನಂ.1 ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸಪ್. ಈ ಆ್ಯಪ್ ತನ್ನ ಬಳಕೆದಾರರ ಅನುಭವವನ್ನ ಸುಧಾರಿಸಲಿಕ್ಕಾಗಿಯೇ ಹೊಸ ಹೊಸ ಫೀಚರ್ ಗಳನ್ನ ಪರಿಚಯಿಸುತ್ತಾ ಇರುತ್ತದೆ. ಇದೀಗ ಇಂಥದ್ದೇ ಒಂದು ಹೊಸ ವೈಶಿಷ್ಟ್ಯವನ್ನು ವಾಟ್ಸಪ್ ತನ್ನ ಬಳಕೆದಾರರಿಗೆ ಪರಿಚಯಿಸಲು ಮುಂದಾಗಿದೆ. ಹೊಸ ಫೀಚರ್ ನಲ್ಲಿ ವಾಟ್ಸಪ್ ಬಳಕೆದಾರರು ಇಂಟರ್ನೆಟ್ ಕನೆಕ್ಷನ್ ಇಲ್ಲದೆಯೂ ಕೂಡ ಫೋಟೋ, ವಿಡಿಯೋ, ಡಾಕ್ಯುಮೆಂಟ್ ಸೇರಿದಂತೆ ಇತರೆ ಯಾವುದೇ ಫೈಲ್ಗಳನ್ನು ಸುಲಭವಾಗಿ ಕಳುಹಿಸಬಹುದು ಎಂಬ ಸೂಪರ್ ನ್ಯೂಸ್ ಡಿಜಿಟಲ್ ಜಗತ್ತಲ್ಲಿ ದೊಡ್ಡ ಸೌಂಡ್ ಮಾಡ್ತಿದೆ.
ಕಾಲಕಾಲಕ್ಕೆ ಹೊಸ ಹೊಸ ಫೀಚರ್ ಗಳನ್ನ ತನ್ನ ಬಳಕೆದಾರರಿಗಾಗಿ ಅಪ್ಡೇಟ್ ಮಾಡುತ್ತಾ ಬರುತ್ತಿರುವ ಮೆಟಾ ಒಡೆತನದ ಜನಪ್ರಿಯ ವಾಟ್ಸಪ್ ಅಪ್ಲಿಕೇಶನ್. ಕಳೆದ ಜೂನ್ 2024 ರಲ್ಲಿ, ಧ್ವನಿ ಮತ್ತು ವೀಡಿಯೊ ಕರೆಗಳಿಗೆ ಸುಧಾರಣೆಗಳನ್ನು ಮಾಡಲಾಯಿತು, ವೀಡಿಯೊ ಕರೆಗಳಲ್ಲಿ 32 ಜನರಿಗೆ ಅವಕಾಶ ನೀಡಲಾಯಿತು, ಸ್ಕ್ರೀನ್ ಹಂಚಿಕೆಗೆ ಆಡಿಯೊವನ್ನು ಸೇರಿಸುವುದು ಮತ್ತು ಕರೆ ವಿಶ್ವಾಸಾರ್ಹತೆಯನ್ನು ಹೆಚ್ಚಿಸಲು ಹೊಸ ಕೊಡೆಕ್ ಅನ್ನು ಪರಿಚಯಿಸುವ ಮೂಲಕ ಹೊಸ ಅಪ್ಡೇಟ್ ಕೊಟ್ಟಿತ್ತು. ಇದೀಗ ಮತ್ತೆ ಹೊಸ ಫೀಚರ್ ಬಳಕೆದಾರರ ಫೈಲ್ ಹಂಚಿಕೆಯನ್ನ ಬಹಳ ಸುಲಭಗೊಳಿಸುತ್ತದೆ.
ಏನಿದು ಹೊಸ ವಾಟ್ಸಪ್ ಹೊಸ ಫೀಚರ್?
WABetaInfo ವರದಿಯ ಪ್ರಕಾರ, ವಾಟ್ಸ್ಆ್ಯಪ್ ನಿಮಗೆ ಹತ್ತಿರದ ಜನರೊಂದಿಗೆ ಫೈಲ್ಗಳನ್ನು ಹಂಚಿಕೊಳ್ಳಲು ಅನುವು ಮಾಡಿಕೊಡುತ್ತದೆ. ಈ ವೈಶಿಷ್ಟ್ಯದ ಸಹಾಯದಿಂದ, ನೀವು ಇಂಟರ್ನೆಟ್ ಇಲ್ಲದೆ ಇತರರಿಗೆ ಡಾಕ್ಯುಮೆಂಟ್ಗಳು, ಫೋಟೋಗಳು, ವೀಡಿಯೊಗಳು ಮತ್ತು ಇತರ ಯಾವುದೇ ಫೈಲ್ಗಳನ್ನು ಸುಲಭವಾಗಿ ಕಳುಹಿಸಲು ಸಾಧ್ಯವಾಗುತ್ತದೆ. ಈ ವೈಶಿಷ್ಟ್ಯವು ಮೊದಲು ಆಂಡ್ರಾಯ್ಡ್ ಬಳಕೆದಾರರಿಗೆ ಬಂದಿತ್ತು, ಆದರೆ ಇದನ್ನು ಇನ್ನೂ ಎಲ್ಲರಿಗೂ ವಿಸ್ತರಿಸಲಾಗಿಲ್ಲ. ಈಗ ಈ ವೈಶಿಷ್ಟ್ಯವು ಐಒಎಸ್ ಬಳಕೆದಾರರಿಗೆ ಪರೀಕ್ಷಾ ಹಂತದಲ್ಲಿದೆ.
ಪರೀಕ್ಷೆಗಾಗಿ ಬಿಡುಗಡೆ ಮಾಡಿದ ಆ್ಯಪ್ನಲ್ಲಿ ಸ್ಕ್ರೀನ್ಶಾಟ್ ತೋರಿಸಲಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಇದರಲ್ಲಿ, ಡಿಸ್ಪ್ಲೇ ಮೇಲೆ ಸ್ಕ್ಯಾನರ್ ಕಾಣಿಸಿಕೊಳ್ಳುತ್ತದೆ, ಅದರ ಸಹಾಯದಿಂದ ನೀವು ಹತ್ತಿರದ ಜನರಿಗೆ ಫೋಟೋಗಳು, ವಿಡಿಯೊಗಳು ಮತ್ತು ಇತರ ಫೈಲ್ಗಳನ್ನು ಕಳುಹಿಸಲು ಸಾಧ್ಯವಾಗುತ್ತದೆ. ಈ ವೈಶಿಷ್ಟ್ಯದ ಹೆಸರು “Neraby Share” ಆಗಿರುತ್ತದೆ.
ವಾಟ್ಸ್ಆ್ಯಪ್ ತನ್ನ iOS ಅಪ್ಲಿಕೇಶನ್ನಲ್ಲಿಯೂ ಇದೇ ರೀತಿಯ ವೈಶಿಷ್ಟ್ಯವನ್ನು ತರಲು ಯೋಚಿಸುತ್ತಿದೆ
ನೀವು ಹತ್ತಿರದ ಜನರಿಗೆ ಫೈಲ್ಗಳನ್ನು ಕಳುಹಿಸಲು ಸಾಧ್ಯವಾಗುತ್ತದೆ. ಈ ವೈಶಿಷ್ಟ್ಯವು ಆ್ಯಪಲ್ನ ಏರ್ಡ್ರಾಪ್ನಂತೆಯೇ ಇರುತ್ತದೆ.
ಫೈಲ್ ಹಂಚಿಕೊಳ್ಳಲು, ನೀವು ಮತ್ತೊಬ್ಬ ವ್ಯಕ್ತಿಯ ಮೊಬೈಲ್ನಿಂದ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಬೇಕು. ಇದು ವೈ-ಫೈ ಅಥವಾ ಬ್ಲೂಟೂತ್ ಮೂಲಕ ಕಾರ್ಯನಿರ್ವಹಿಸುತ್ತದೆ. ಹೀಗಾಗಿ ಇಂಟರ್ನೆಟ್ ಸಂಪರ್ಕದ ಅಗತ್ಯವಿಲ್ಲ. ಈ ಮೂಲಕ ನೀವು ಇಂಟರ್ನೆಟ್ ಇಲ್ಲದೆ ನಿಮ್ಮ ಸುತ್ತಲಿನ ಜನರಿಗೆ ಫೈಲ್ಗಳನ್ನು ಕಳುಹಿಸಬಹುದು. ಇಂಟರ್ನೆಟ್ ವೇಗವು ನಿಧಾನವಾಗಿರುವ ಅಥವಾ ಕಾರ್ಯನಿರ್ವಹಿಸದಿರುವ ಪ್ರದೇಶಗಳಲ್ಲಿ ಇದು ವಿಶೇಷವಾಗಿ ಉಪಯುಕ್ತವಾಗಿದೆ.
ಈ ಹೊಸ ವೈಶಿಷ್ಟ್ಯದೊಂದಿಗೆ, ನೀವು ಉತ್ತಮ ಗುಣಮಟ್ಟದ ಫೋಟೊಗಳು, ವಿಡಿಯೊಗಳು ಮತ್ತು ಡಾಕ್ಯುಮೆಂಟ್ಗಳಂತಹ ದೊಡ್ಡ ಫೈಲ್ಗಳನ್ನು ಸುಲಭವಾಗಿ ಹಂಚಿಕೊಳ್ಳಬಹುದು. ಇನ್ನೂ ಉತ್ತಮವಾದ ವಿಷಯವೆಂದರೆ ನೀವು ಆಂಡ್ರಾಯ್ಡ್ ಅಥವಾ ಐಫೋನ್ ಅನ್ನು ಬಳಸುತ್ತಿದ್ದರೂ ಈ ವೈಶಿಷ್ಟ್ಯವು ಕಾರ್ಯನಿರ್ವಹಿಸುತ್ತದೆ.
ಇಲ್ಲಿ ನೀವು ಯಾವ ಮೊಬೈಲ್ ಬಳಸುತ್ತಿರುವಿರಿ ಮತ್ತು ನೀವು ಫೈಲ್ ಅನ್ನು ಕಳುಹಿಸುತ್ತಿರುವ ವ್ಯಕ್ತಿಯು ಯಾವ ಮೊಬೈಲ್ ಬಳಸುತ್ತಿದ್ದಾರೆ ಎಂಬುದು ಮುಖ್ಯವಲ್ಲ. ಹೆಚ್ಚುವರಿಯಾಗಿ, ಈ ವೈಶಿಷ್ಟ್ಯವು ಎಂಡ್-ಟು-ಎಂಡ್ ಎನ್ಕ್ರಿಪ್ಶನ್ನೊಂದಿಗೆ ಸಹ ಕಾರ್ಯನಿರ್ವಹಿಸುತ್ತದೆ. ಅಂದರೆ ನೀವು ಯಾರಿಗೆ ಕಳುಹಿಸಿದ್ದೀರೋ ಅವರಿಗೆ ಮಾತ್ರ ನೀವು ಕಳುಹಿಸುತ್ತಿರುವ ಫೈಲ್ ಅನ್ನು ನೋಡಲು ಸಾಧ್ಯವಾಗುತ್ತದೆ.
ಒಟ್ನಲ್ಲಿ ವಾಟ್ಸಾಪ್ ಕಾಲದಿಂದ ಕಾಲಕ್ಕೆ ಹೊಸ ಫೀಚರ್ ನಿಂದ ಜನರ ಮನಸೂರೆಗೊಂಡಿದ್ದು, ಆದಷ್ಟು ಬೇಗ ಹೊಸ ಫೀಚರ್ ಬರಲಿ ಅಂತ ಡಿಜಿಟಲ್ ಪ್ರಿಯರು ಆಶಿಸುತ್ತಿದ್ದಾರೆ..