ರಾಕಿಂಗ್ ಸ್ಟಾರ್ ಯಶ್ ನಟನೆಯ ಟಾಕ್ಸಿಕ್ ಸಿನಿಮಾ ಸಿಕ್ಕಾಪಟ್ಟೆ ಅದ್ದೂರಿಯಾಗಿ ರೆಡಿಯಾಗ್ತಿದೆ. ರಾಕಿ ಭಾಯ್ ಫ್ಯಾನ್ಸ್ ಚಾತಕಪಕ್ಷಿಗಳಂತೆ ಸಿನಿಮಾಗಾಗಿ ಕಾಯ್ತಿದ್ದಾರೆ. ಆದ್ರೆ, ನಟ ಯಶ್ ನಟನೆಯ ಹೊಸ ಸಿನಿಮಾ ‘ಟಾಕ್ಸಿಕ್’ ಗೆ ಇದೀಗ ಸಂಕಷ್ಟ ಎದುರಾಗಿದೆ. ಸಿನಿಮಾ ಟೈಟಲ್ ರಿಲೀಸಿಂಗ್ ದಿನದಿಂದಲೂ ಒಂದಲ್ಲೊಂದು ಕಾರಣಕ್ಕೆ ಸುದ್ದಿಯಾಗುತ್ತಿರುವ ಟಾಕ್ಸಿಕ್ ಸಿನಿಮಾ ವಿರುದ್ಧ ಇದೀಗ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿದೆ.
ಟಾಕ್ಸಿಕ್ ಸಿನಿಮಾ 70-80ರ ದಶಕದ ಚಿತ್ರಕಥೆ ಹೊಂದಿದ್ದು, ಇದೇ ಕಾರಣಕ್ಕೆ ಸಿನಿಮಾವನ್ನು ಸೆಟ್ಗಳಲ್ಲಿ ಚಿತ್ರೀಕರಣ ಮಾಡಲಾಗುತ್ತಿದೆ. ಹಾಗಾಗಿ ಸಿನಿಮಾಕ್ಕಾಗಿ ಬೃಹತ್ ಸೆಟ್ ಕೂಡ ನಿರ್ಮಿಸಲಾಗಿದೆ. ಬೆಂಗಳೂರಿನ
ಪೀಣ್ಯ ಪ್ಲಾಂಟೇಶನ್ ಜಮೀನಿನ ಬಳಿ ಸುಮಾರು 20 ಎಕರೆ ಜಾಗದಲ್ಲಿ ‘ಟಾಕ್ಸಿಕ್’ ಸಿನಿಮಾಕ್ಕಾಗಿ ಬೃಹತ್ ಸೆಟ್ ಹಾಕಲಾಗಿದೆ. ಆದರೆ ಈ ಸೆಟ್ ಅರಣ್ಯ ಭೂಮಿಯಲ್ಲಿ ಅಕ್ರಮವಾಗಿ ಹಾಕಲಾಗಿದೆ ಎಂದು ಆರೋಪಿಸಿ ವಕೀಲ ಜಿ. ಬಾಲಾಜಿ ನಾಯ್ಡು ಅವರು ಹೈಕೋರ್ಟ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಕಿದ್ದಾರೆ. ಅರ್ಜಿ ವಿಚಾರಣೆಗೆ ಅರ್ಹವೆಂದು ಪರಿಗಣಿಸಿರುವ ಹೈಕೋರ್ಟ್ ‘ಟಾಕ್ಸಿಕ್’ ಸಿನಿಮಾದ ನಿರ್ಮಾಣ ಸಂಸ್ಥೆ ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಎಚ್ಎಂಟಿ ಸಂಸ್ಥೆಗೆ ನೊಟೀಸ್ ನೀಡಿದೆ.
ಇನ್ನೂ ಕಳೆದ ಡಿಸೆಂಬರ್ನಲ್ಲಿ ಭಾರತ, ಮಲೇಶಿಯಾ, ಜಪಾನ್, ನ್ಯೂಜಿಲ್ಯಾಂಡ್, ಆಫ್ರಿಕಾ, ಆಸ್ಟ್ರೇಲಿಯಾ, ರಷ್ಯಾ, ಇಂಗ್ಲೆಂಡ್, ಯೂರೋಪ್ ಸೇರಿದಂತೆ ಹಲವೆಡೆ “ಟಾಕ್ಸಿಕ್” ಟೈಟಲ್ ಅದ್ಧೂರಿಯಾಗಿ ರಿವೀಲ್ ಆಗಿತ್ತು. ಇದುವರೆಗೂ ಕನ್ನಡ ಯಾವ ಸಿನಿಮಾದ ಟೈಟಲ್ ಕೂಡ ವಿಶ್ವದಾದ್ಯಂತ ಈ ರೀತಿ ರಿಲೀಸ್ ಆಗಿರಲಿಲ್ಲ. ಈ ಮೂಲಕ ಹಾಲಿವುಡ್ ರೇಂಜ್ನಲ್ಲಿ ಸಿನಿಮಾ ರಿಲೀಸ್ ಆಗುತ್ತಿದೆ ಎನ್ನುವುದು ಖಚಿತವಾಗಿದೆ. ಸಿನಿಮಾಗೆ ನಿರ್ದೇಶಕಿ ಗೀತು ಮೋಹನ್ ದಾಸ್ ಡೈರೆಕ್ಷನ್ ಇದೆ. ರಾಕಿ ಭಾಯ್ ಯಶ್ ಸಾಕಷ್ಟು ಪರಿಶ್ರಯದಿಂದ ಶೂಟಿಂಗ್ ನಲ್ಲಿ ಭಾಗಿ ಆಗ್ತಿದ್ದಾರೆ. ಸಿನಿಮಾದಲ್ಲಿ ದೊಡ್ಡ ತಾರಾ ಬಳಗವೇ ಇದೆ.