ಪ್ರಣಯ ನಗರಿ ಪ್ಯಾರಿಸ್ ಅತಿದೊಡ್ಡ ಕ್ರೀಡಾಕೂಟಕ್ಕೆ ಇಂದು ಸಾಕ್ಷಿಯಾಗಲಿದೆ. 2024 ರ ಬೇಸಿಗೆ ಒಲಿಂಪಿಕ್ಸ್ ಇಂದು ಫ್ರಾನ್ಸ್ ನಲ್ಲಿ ಉದ್ಘಾಟನೆಗೊಳ್ಳಲಿದೆ. ಪ್ಯಾರಿಸ್ ನ ಸೀನ್ ನದಿಯ ಉದ್ದಕ್ಕೂ ಆಯೋಜಿಸಿರುವ ಬಹು ದೊಡ್ಡ ಉದ್ಘಾಟನಾ ಕಾರ್ಯಕ್ರಮದೊಂದಿಗೆ ಪ್ಯಾರಿಸ್ ಒಲಿಂಪಿಕ್ಸ್ ಇಂದು ಪ್ರಾರಂಭಗಲಿದೆ. ಈ ಬಾರಿಯ ಒಲಂಪಿಕ್ಸ್ ಪ್ರೇಕ್ಷಕರು ಮತ್ತು ಕ್ರೀಡಾಪಟುಗಳಿಗೆ ಹೊಸ ಅನುಭವವನ್ನ ನೀಡಲಿದೆ. ಕಾರಣ, ಇದೇ ಮೊದಲ ಬಾರಿಗೆ ಹೊರಾಂಗಣದಲ್ಲಿ ಒಲಂಪಿಕ್ಸ್ ಉದ್ಘಾಟನೆ ಆಗಲಿದ್ದು, ನದಿಯುದ್ದಕ್ಕೂ ಕ್ರೀಡಾಪಟುಗಳು ದೋಣಿಯಲ್ಲಿ ವಿಹರಿಸುವ ಮೂಲಕ ಒಲಂಪಿಕ್ಸ್ ಗೆ ಚಾಲನೆಯನ್ನ ನೀಡಲಿದ್ದಾರೆ. ಕ್ರೀಡಾಂಗಣದ ಹೊರಗೆ ಉದ್ಘಟನೆ ನಡೆಯುತ್ತಿರುವುದು ಒಲಂಪಿಕ್ಸ್ ಇತಿಹಾಸದಲ್ಲೆ ಇದೇ ಮೊದಲು.
2020 ರ ಟೋಕಿಯೋ ಒಲಿಂಪಿಕ್ಸ್ನಲ್ಲಿ ಗೆದ್ದಿದ್ದ ಪದಕಗಳ ದಾಖಲೆ ಮೀರಿಸುವ ಗುರಿಯನ್ನು ಭಾರತ ಹೊಂದಿದ್ದು, ಈ ಬಾರಿಯ ಕ್ರೀಡಾಕೂಟದಲ್ಲಿ 117 ಭಾರತೀಯ ಅಥ್ಲೀಟ್ಗಳು ಭಾಗವಹಿಸಲಿದ್ದಾರೆ. ಅವರಲ್ಲಿ 70 ಪುರುಷರು ಮತ್ತು 47 ಮಹಿಳೆಯರಿದ್ದಾರೆ.
ಉದ್ಘಾಟನೆಗೂ ಮುನ್ನವೇ ಕ್ರೀಡಾಕೂಟ ಶುರುವಾಗಿದ್ದು, ಪ್ಯಾರಿಸ್ ಒಲಂಪಿಕ್ಸ್ ನಲ್ಲಿ ಭಾರತ ಈಗಾಗಲೇ ಭರ್ಜರಿ ಘರ್ಜನೆ ಶುರು ಮಾಡಿದೆ. ಭಾರತೀಯ ಮಹಿಳಾ ಆರ್ಚರಿ ತಂಡವು ಅದ್ಭುತ ಪ್ರದರ್ಶನವನ್ನ ನೀಡಿದೆ. ಭಾರತೀಯ ಪುರುಷರ ಮತ್ತು ಮಹಿಳಾ ಟೇಬಲ್ ಟೆನಿಸ್ ತಂಡಗಳು ಇದೇ ಮೊದಲ ಬಾರಿಗೆ ಒಲಿಂಪಿಕ್ಸ್ಗೆ ಅರ್ಹತೆ ಪಡೆದಿರುವುದು ವಿಶೇಷ.
ಒಲಂಪಿಕ್ಸ್ ಹುಟ್ಟಿನ ಗುಟ್ಟು ಏನು ಗೊತ್ತಾ?
ಅಂದಹಾಗೆ 4 ವರ್ಷಗಳಿಗೊಮ್ಮೆ ನಡೆಯುವ ಒಲಂಪಿಕ್ಸ್ ಗೆ ಶತಶತಮಾನಗಳ ಇತಿಹಾಸವಿದೆ. ಕ್ರಿಸ್ತಪೂರ್ವಕ್ಕೂ ಮುನ್ನ ಒಲಂಪಿಕ್ಸ್ ಕ್ರೀಡಾಕೂಟ ನಡೀತಾ ಇತ್ತು ಅಂದ್ರೆ ಖಂಡಿತಾವಾಗ್ಲೂ ನೀವು ನಂಬಲೇ ಬೇಕು. ಒಲಂಪಿಕ್ಸ್ ಕ್ರೀಡಾ ಕೂಟಕ್ಕೆ ಒಲಂಪಿಕ್ಸ್ ಅಂತಲೇ ಹೆಸರು ಬಂದದ್ದು ಯಾಕೆ? ಕ್ರೀಡಾಕೂಟಕ್ಕೆ ದೇವತೆ ಮತ್ತು ದೇವಾಲಯವೂ ಕೂಡ ಇದೆ, ಇದು ನಿಮಗೆ ಗೊತ್ತಾ? ಒಲಂಪಿಕ್ಸ್ ಹುಟ್ಟಿನ ಬಗೆಗೆ ಒಂದಷ್ಟು ಇಂಟರೆಸ್ಟಿಂಗ್ ವಿಚಾರಗಳನ್ನ ತಿಳಿಯೋಣ ಬನ್ನಿ…,
ಕ್ರಿಸ್ತಪೂರ್ವದಲ್ಲಿಯೇ ಒಲಂಪಿಕ್ಸ್ ಕ್ರೀಡಾ ಕೂಟ ಗ್ರೀಸ್ ದೇಶದಲ್ಲಿ ಪ್ರಾರಂಭವಾಗಿತ್ತು. ಒಲಂಪಿಯಾ ಅನ್ನೋ ಬೆಟ್ಟದಲ್ಲಿ ಒಲಂಪಿಕ್ಸ್ ಕ್ರೀಡಾಕೂಟ ಶುರುವಾಯ್ತು. ಅಲ್ಲಿನ ದಂತ ಕಥೆಗಳ ಪ್ರಕಾರ ಜೀಯಸ್ನ ಮಗ ಹರ್ಕ್ಯುಲಸ್ ಈ ಕ್ರೀಡಾಕೂಟವನ್ನ ಆರಂಭಿಸಿದರು. ಸುಮಾರು ಕ್ರಿ.ಪೂ. 776ರಲ್ಲಿ ಗ್ರೀಸ್ನ ಒಲಿಂಪಿಯಾದಲ್ಲಿ ಮೊದಲ ಬಾರಿಗೆ ಒಲಿಂಪಿಕ್ ಕ್ರೀಡಾಕೂಟವನ್ನು ಆಯೋಜನೆ ಮಾಡಲಾಗಿತ್ತು. ಈ ಒಲಿಂಪಿಕ್ಸ್ ಸ್ಪರ್ಧೆಯಲ್ಲಿ ಗೆದ್ದುಕೊಂಡ ಮೊದಲ ಓಟಗಾರ ಒಬ್ಬಬಾಣಸಿಗ. ಎಲಿಸ್ ದ್ವೀಪದ ʻಕೊರೋಬಸ್ʼ ಎಂಬ ಹೆಸರಿನ ಈ ಬಾಣಸಿಗ, ʻಸ್ಟೇಡ್ʼ ಓಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದ ಎನ್ನಲಾಗಿದೆ.ಆರಂಭದ ಒಲಂಪಿಕ್ಸ್ ನಲ್ಲಿ ʼಸ್ಟೇಡ್ʼ ಎಂಬ ಓಟದ ಸ್ಪರ್ಧೆ ಮಾತ್ರ ನಡೆಯುತ್ತಿತ್ತು.
ಅಂದಿನ ಒಲಿಂಪಿಕ್ಸ್ ಕ್ರೀಡೆ ನಡೆಯುತ್ತಿದ್ದದ್ದು ಒಲಿಂಪಿಯಾ ಎಂಬ ಬೆಟ್ಟದಲ್ಲಿ. ಆ ಕಾಲದಲ್ಲಿ ಇದು ಗ್ರೀಸ್ನ ಧಾರ್ಮಿಕ ಕೇಂದ್ರವಾಗಿತ್ತು. ಕ್ರೀಡಾಕೂಟ ಸ್ಥಾಪಕ ಹರ್ಕೂಲಸ್ ಈ ಕ್ರೀಡೋತ್ಸವಕ್ಕಾಗಿ ದೇವತೆ ಅಥೆನಾಳ ನೆರವಿನಲ್ಲಿ ಬೆಟ್ಟದ ಮೇಲೆ ಒಲಿಂಪಿಯಾ ದೇವಾಲಯ ಮತ್ತು ವಿಶಾಲ ಕ್ರೀಡಾಂಗವನ್ನ ನಿರ್ಮಿಸಿದ. ಒಲಿಂಪಿಯಾದ ಕ್ರೀಡಾಂಗಣ 40 ಸಾವಿರ ಪ್ರೇಕ್ಷಕರು ಕುಳಿತುಕೊಳ್ಳುವಷ್ಟು ವಿಶಾಲವಾಗಿತ್ತು. ಈ ಪ್ರಾರ್ಥನಾ ಮಂದಿರ, ಪ್ರಪಂಚದ ಏಳು ಅದ್ಭುತಗಳಲ್ಲಿ ಒಂದಾಗಿತ್ತು ಎಂದೂ ಸಹ ದಂತಕಥೆಗಳಲ್ಲಿ ಹೇಳಲಾಗಿದೆ.
ಕಾಲಕ್ರಮೇಣದಲ್ಲಿ ಗ್ರೀಕ್ ಯುವಕರು ಕ್ರೀಡಾಸಕ್ತಿಯನ್ನ ಕಳೆದುಕೊಂಡರು. ಕ್ರಿಸ್ತಪೂರ್ವ 146ರ ಸುಮಾರಿಗೆ ರೋಮನ್ನರು ಗ್ರೀಸ್ ದೇಶವನ್ನ ಆಕ್ರಮಿಸಿದ ನಂತರ ಇಲ್ಲಿನ ಧಾರ್ಮಿಕ ನಂಬಿಕೆ ಕಣ್ಮರೆಯಾಗಿ ಬಹಳ ಕ್ರೂರ ಮತ್ತು ವಿಕೃತ ಕ್ರೀಡೆಗಳು ಈ ಈ ಬೆಟ್ಟದಲ್ಲಿ ಪ್ರಾರಂಭವಾದವು ಎನ್ನಲಾಗಿದೆ. ನಂತರ ಕ್ರಿ.ಶ.394ರ ವೇಳೆಗೆ ಥಿಯೋಡೋಸಿಯಸ್ ರೋಮ್ ನ ಗದ್ದುಗೆ ಏರಿ ಈ ಕ್ರೀಡೆಗಳಿಗೆ ಸಮಾಪ್ತಿ ಹೇಳಿ ಒಲಂಪಿಕ್ಸ್ ಬರೀ ನೆನಪಾಗಿಸಿದ.
ಜಗತ್ತನ್ನೇ ನಿಬ್ಬೆರಗಾಗಿಸಿ ಮತ್ತೆ ಶುರುವಾಯ್ತು ಒಲಂಪಿಕ್ಸ್..!
18ನೇ ಶತಮಾನದ ವೇಳೆಗೆ ಗ್ರೀಸ್ ದೇಶ ಟರ್ಕಿಯ ಒಟ್ಟೋಮನ್ ಸಾಮ್ರಾಜ್ಯದ ಸಾಮಂತ ರಾಷ್ಟ್ರವಾಗಿತ್ತು. ಒಟ್ಟೋಮನ್ಗಳ ವಿರುದ್ಧ ಗ್ರೀಕರು ಸ್ವಾತಂತ್ರ್ಯ ಹೋರಾಟ ನಡೆಸಿದ್ದರು. ಆ ಕಾಲದಲ್ಲಿ ʻಪೆಲೋಪೊನೀಸ್’ ಎಂಬ ದ್ವೀಪದ ನಡುವೆ ಮರಳಿನಲ್ಲಿ ಒಂದು ಪುರಾತನ ಸ್ತಂಭದ ಅವಶೇಷ ಪತ್ತೆಯಾಗಿತ್ತು. ಜರ್ಮನಿಯ ಆರ್ನ್ಸ್ ಕರ್ಟಿಯಸ್ (1814-1896) ಎಂಬ ಪುರಾತತ್ತ್ವ ಶೋಧಕ, ಈ ಸ್ತಂಭದ ಕೆಳಗೆ ಗ್ರೀಸ್ನ ಗತಕಾಲದ ಇತಿಹಾಸ ಇರಬೇಕು ಎಂದು ಲೆಕ್ಕ ಹಾಕಿದ್ದ. ಅವನ ಸತತ ಪ್ರಯತ್ನದ ಫಲವಾಗಿ ಮಣ್ಣಿನ ಅಡಿಯಲ್ಲಿ ಹೂತು ಹೋಗಿದ್ದ ಒಲಿಂಪಿಯಾ ಪಟ್ಟಣ ಮೇಲೆದ್ದು ಬಂತು. ʻಒಲಿಂಪಿಯಾ’ ಎಂಬ ಜಾಗ ನಿಜಕ್ಕೂ ಇತ್ತು ಎಂದು ತಿಳಿದಾಗ ಜಗತ್ತೇ ಬೆರಗಾಗಿತ್ತು.
ಹೀಗಾಗಿ ಮತ್ತೇ ಈ ಕ್ರೀಡಾಕೂಟಕ್ಕೆ ಚಾಲನೆ ಸಿಕ್ಕಿದ್ದು, 1859 ರಲ್ಲಿ. ಇವಾಂಜೆಲಾಸ್ ಝಪ್ಪಾನ್ ಎಂಬುವವರು ಪ್ರಪ್ರಥಮವಾಗಿ ಒಲಿಂಪಿಕ್ ಕ್ರೀಡಾಕೂಟವನ್ನು ಪ್ರಾಯೋಜಿಸಿದರು. 1896 ರಲ್ಲಿ ಪ್ರಥಮ ಬಾರಿಗೆ ಗ್ರೀಸ್ನ ಈಗಿನ ರಾಜಾಧಾನಿ ಅಥೆನ್ಸ್ ನಗರದಲ್ಲಿ ಬೇಸಿಗೆ ಒಲಿಂಪಿಕ್ ಕ್ರೀಡಾಕೂಟ ಆಯೋಜಿಸಲಾಯಿತು. ಹಾಗೂ ಇದು ಮೊದಲ ಆಧುನಿಕ ಒಲಿಂಪಿಕ್ ಕ್ರೀಡಾ ಕೂಟವಾಯಿತು.