– ಚಾಮುಂಡಿಬೆಟ್ಟದಲ್ಲಿ 3ನೇ ಆಷಾಢ ಶುಕ್ರವಾರದ ಆಚರಣೆ
– ನಗರದ ಹಲವು ಬಡಾವಣೆಗಳು, ವೃತ್ತಗಳಲ್ಲಿ ವಿಶೇಷ ಪೂಜೆ
ಪ್ರತಿನಿಧಿ ವರದಿ ಮೈಸೂರು
ಆಷಾಢ ಮಾಸದ ಮೂರನೇ ಶುಕ್ರವಾರದ ಪ್ರಯುಕ್ತ ಮೈಸೂರಿನ ಚಾಮುಂಡಿಬೆಟ್ಟಕ್ಕೆ ಹಲವು ಗಣ್ಯರು ಸೇರಿದಂತೆ ಸಾವಿರಾರು ಭಕ್ತಾದಿಗಳು ಭೇಟಿ ನೀಡಿ ನಾಡದೇವತೆ ತಾಯಿ ಚಾಮುಂಡೇಶ್ವರಿ ಅಮ್ಮನವರ ದರ್ಶನ ಪಡೆದರು.
ಮುಂಜಾನೆಯೇ ಸುರಿಯುತ್ತಿದ್ದ ತುಂತುರು ಮಳೆಯ ನಡುವೆಯೇ ಬೆಟ್ಟಕ್ಕೆ ಆಗಮಸಿದ ಭಕ್ತಾಧಿಗಳು ಸರತಿ ಸಾಲಿನಲ್ಲಿ ನಿಂತು ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದು ಪುನೀತರಾದರು. ರಾಜ್ಯದ ವಿವಿಧ ಭಾಗಗಳಿಂದ ಬಂದಿದ್ದ ಧಾವಿಸಿ ಬಂದ ಭಕ್ತರು ಸಾಲಿನಲ್ಲಿ ನಿಂತು ಚಾಮುಂಡೇಶ್ವರಿ ದರ್ಶನ ಪಡೆದರೆ, ಕೆಲವರು ಮೆಟ್ಟಿಲುಗಳ ಮೂಲಕ ಬಂದರೆ ಇನ್ನು ಕೆಲವರು ಸಾರಿಗೆ ಬಸ್ನಲ್ಲಿ ಬೆಟ್ಟಕ್ಕೆ ಆಗಮಿಸಿದರು. ಉಚಿತ ಪ್ರವೇಶ, ೫೦ ರೂ, ೧೦೦ ರೂ, ೩೦೦ರೂಗಳ ಸರತಿ ಸಾಲಿನಲ್ಲಿ ನಿಂತು ದೇವಸ್ಥಾನಕ್ಕೆ ತೆರಳಿ ದೇವಿಯ ದರ್ಶನ ಪಡೆದರು. ಸರತಿ ಸಾಲಿನುದ್ದಕ್ಕೂ ಚಾಮುಂಡೇಶ್ವರಿಯ ಜಯಘೋಷಗಳು ಮೊಳಗಿದವು. ಬೆಟ್ಟಕ್ಕೆ ಉಚಿತ ಬಸ್ಗಳಲ್ಲಿ ಮಾತ್ರವಲ್ಲ, ಮೆಟ್ಟಿಲು ಮಾರ್ಗವಾಗಿ ಬರುವ ಭಕ್ತರ ಸಂಖ್ಯೆಯೂ ಅಧಿಕವಾಗಿತ್ತು.
ನಾಡದೇವಿಗೆ ವಿಶೇಷ ಪೂಜೆ: ಮೂರನೇ ಆಶಾಢ ಶುಕ್ರವಾರದ ಹಿನ್ನೆಲೆಯಲ್ಲಿ ನಾಡದೇವತೆ ತಾಯಿ ಚಾಮುಂಡೇಶ್ವರಿ ಅಮ್ಮನವರಿಗೆ ವಿಶೇಷ ಪೂಜೆ ಹಾಗೂ ಅಲಂಕಾರ ಮಾಡಲಾಗಿತ್ತು. ಮುಂಜಾನೆ ಮೂರು ಗಂಟೆಯಿಂದಲೇ ದೇವಸ್ಥಾನದಲ್ಲಿ ಪೂಜಾ ಕೈಂಕರ್ಯಗಳು ಆರಂಭವಾದವು. ಚಾಮುಂಡೇಶ್ವರಿ ವಿಗ್ರಹವನ್ನು ಶುದ್ಧಗೊಳಿಸಿ, ಬಳಿಕ ವಿಶೇಷವಾಗಿ ಅಲಂಕಾರ ಮಾಡಿ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು. ದೇವಾಲಯದ ಪ್ರಧಾನ ಅರ್ಚಕ ಶಶಿಶೇಖರ್ ದೀಕ್ಷಿತ್ ನೇತೃತ್ವದಲ್ಲಿ ರುದ್ರಾಭಿಷೇಕ, ಪಂಚಾಮೃತಾಭಿಷೇಕ, ಕುಂಕುಮಾರ್ಚನೆ, ಏಕದಶ ಪುಷ್ಪಾರ್ಚನೆ, ಸಹಸ್ರನಾಮಾರ್ಚನೆ ಸೇರಿ ವಿವಿಧ ಪೂಜೆಗಳನ್ನು ನೆರವೇರಿಸಲಾಯಿತು. ಬಳಿಕ ೫.೩೦ರಿಂದ ಭಕ್ತರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಯಿತು. ಈ ಮಧ್ಯೆ ಬೆಳಗ್ಗೆ ೯.೩೦ಕ್ಕೆ ಮಹಾಮಂಗಳಾರತಿ, ಸಂಜೆ ೬.೩೦ರಿಂದ ೭ರವರೆಗೆ ಅಭಿಷೇಕ ನೆರವೇರಿಸಲಾಯಿತು. ರಾತ್ರಿ ೯ ಗಂಟೆವರೆಗೂ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು. ದರ್ಶನದ ವೇಳೆ ಯಾವುದೇ ನೂಕು ನುಗ್ಗಲಿಗೆ ಅವಕಾಶವಾಗದಂತೆ ಸೂಕ್ತ ವ್ಯವಸ್ಥೆ ಮಾಡಲಾಗಿತ್ತು.
ನಾಗಲಕ್ಷ್ಮೀ ಅಲಂಕಾರದ ಮೆರಗು: ಆಷಾಢ ಮಾಸದ ಪ್ರತಿ ಶುಕ್ರವಾರದಂದು ಚಾಮುಂಡೇಶ್ವರಿ ದೇವಿಗೆ ವಿಶೇಷ ಅಲಂಕಾರ ಮಾಡಲಾಗುತ್ತದೆ. ಈ ಹಿನ್ನೆಲೆಯಲ್ಲಿ ಮೂರನೇ ಶುಕ್ರವಾರ ಪ್ರಯುಕ್ತ ದೇವಿ ಚಾಮುಂಡೇಶ್ವರಿಗೆ ನಾಗಲಕ್ಷ್ಮೀ ಅಲಂಕಾರವನ್ನು ಮಾಡಲಾಗಿತ್ತು. ಇನ್ನೂ ದೇವಾಲಯದ ಒಳಾಂಗಣ ಕೂಡ ವಿಶೇಷ ಹೂವಿನ ಅಲಂಕಾರದಿಂದ ಆಕರ್ಷಕವಾಗಿತ್ತು. ಪ್ರವೇಶ ದ್ವಾರದಿಂದ ದೇವಸ್ಥಾನದ ಗರ್ಭಗುಡಿವರೆಗೆ ಹೂವುಗಳಿಂದ ಅಲಂಕಾರ ಮಾಡಲಾಗಿತ್ತು. ಆರ್ಕಿಡ್ ಹೂ, ಗುಲಾಬಿ, ಸೇವಂತಿಗೆ, ಚೆಂಡು ಹೂ ಸೇರಿದಂತೆ ನಾನಾ ಬಗೆಯ ಹೂಗಳಿಂದ ದೇವಸ್ಥಾನದ ಆವರಣವನ್ನು ಸಿಂಗರಿಸಲಾಗಿತ್ತು.
ಭಕ್ತರಿಗೆ ಪ್ರಸಾದ ವಿತರಣೆ: ಬೆಟ್ಟಕ್ಕೆ ಆಗಮಿಸಿದ ಭಕ್ತರಿಗೆ ಮಲ್ಟಿ ಲೆವೆಲ್ ಪಾರ್ಕಿಂಗ್ ಸ್ಥಳದಲ್ಲಿ ದೇವುಬಾಯಿ ರಾಜಾ ವೈದ್ಯಪಂಡಿತ್ ಪಿ.ಎಚ್.ಚಂದ್ರಬಾನ್ ಸಿಂಗ್ ಮೆಮೋರಿಯಲ್ ಹರ್ಬಲ್ ಗಾರ್ಡನ್ ಮತ್ತು ಹೋಲಿಸ್ಟಿಕ್ ಹಾಸ್ಪಿಟಲ್ ಕಾಂಪ್ಲೆಕ್ಸ್ ಟ್ರಸ್ಟ್ ವತಿಯಿಂದ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ಉಪ್ಪಿಟ್ಟು, ಕೇಸರಿಬಾತ್, ಬಾತ್, ಅಲಸಂದೆ ಹುಳಿ, ಅನ್ನ ಸಾಂಬಾರ್ ವಿತರಿಸಲಾಯಿತು.
ಹಲವು ಗಣ್ಯರಿಂದ ದರ್ಶನ: ಮೂರನೇ ಆಷಾಢ ಶುಕ್ರವಾರದ ಹಿನ್ನೆಲೆಯಲ್ಲಿ ಚಾಮುಂಡಿಬೆಟ್ಟಕ್ಕೆ ಹಲವು ಗಣ್ಯರು ಭೇಟಿ ನೀಡಿ ಚಾಮುಂಡೇಶ್ವರಿಯ ದರ್ಶನ ಪಡೆದರು. ನಟ ದರ್ಶನ್ ಸಹೋದರ ದಿನಕರ್, ಸಹೋದರಿ ಪುತ್ರ ಚಂದನ್, ನಟ ಚಿಕ್ಕಣ್ಣ, ಸೂರಜ್ ರೇವಣ್ಣ ಸೇರಿದಂತೆ ಹಲವರು ಬೆಟ್ಟಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದರು.
=========
ಬಾಕ್ಸ್
ನಗರದ ಎಲ್ಲೆಡೆ ಸಂಭ್ರಮ: 3ನೇ ಆಷಾಢ ಶುಕ್ರವಾರದ ಹಿನ್ನೆಲೆಯಲ್ಲಿ ನಗರದ ವಿವಿಧೆಡೆ ಇರುವ ಚಾಮುಂಡೇಶ್ವರಿ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಅಲ್ಲದೆ ಹಲವೆಡೆ ಸಾರ್ವಜನಿಕರಿಗೆ ಪ್ರಸಾದ ವಿತರಿಸಲಾಯಿತು. ನಗರದ ಅಗ್ರಹಾರ, ವಿಜಯನಗರ, ಚಾಮುಂಡಿಪುರಂ, ಕುವೆಂಪುನಗರ, ಒಂಟಿಕೊಪ್ಪಲು, ಆರ್ಟಿಒ, ಶಾರದಾದೇವಿನಗರ, ಹಿನಕಲ್, ಬೋಗಾದಿ, ಹೂಟಗಳ್ಳಿ ಸೇರಿದಂತೆ ಹಲವು ಬಡಾವಣೆಗಳು, ವೃತ್ತಗಳಲ್ಲಿ ಚಾಮುಂಡೇಶ್ವರಿ ಅಮ್ಮನವರಿಗೆ ಪೂಜೆ ಸಲ್ಲಿಸಿ, ಭಕ್ತರಿಗೆ ಪ್ರಸಾದ ವಿತರಿಸಲಾಯಿತು.
========
ಫೋಟೋಗಳಿವೆ