ಪ್ರತಿನಿಧಿ ವರದಿ ಮಡಿಕೇರಿ
ಜಿಲ್ಲೆಯಾದ್ಯಂತ 10 ದಿನಗಳಿಂದ ಭಾರಿ ಮಳೆ, ಗಾಳಿಯಿಂದಾಗಿ ವಿದ್ಯುತ್ ಜಾಲಕ್ಕೆ ಹಾನಿಯಾಗುತ್ತಿದ್ದು, ದುರಸ್ತಿ ಕಾರ್ಯ ಸಮರೋಪಾದಿಯಲ್ಲಿ ಸಾಗಿದೆ. ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿರುವುದರಿಂದ ಸಾರ್ವಜನಿಕರು ಸಹಕರಿಸುವಂತೆ ಸೆಸ್ಕ್ ಮನವಿ ಮಾಡಿದೆ.
ವಿದ್ಯುತ್ ಜಾಲದ ಪುನರ್ ಸ್ಥಾಪನೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದ್ದು, 500ಕ್ಕೂ ಹೆಚ್ಚು ಸಿಬ್ಬಂದಿ ಹಗಲಿರುಳು ಕಾರ್ಯದಲ್ಲಿ ನಿರತರಾಗಿದ್ದಾರೆ. ಇಲ್ಲಿವರೆಗೆ ಒಟ್ಟು 2454 ಕಂಬಗಳು, 46 ವಿದ್ಯುತ್ ಪರಿವರ್ತಕಗಳು ಮತ್ತು 1.72 ಕಿಲೋ ಮೀಟರ್ ತಂತಿ ಹಾನಿಯಾಗಿದೆ. 2,150 ಕಂಬಗಳನ್ನು ಹಾಗೂ ಎಲ್ಲ ಪರಿವರ್ತಕಗಳನ್ನು ದುರಸ್ತಿಗೊಳಿಸಿ ವಿದ್ಯುತ್ ಮರುಸ್ಥಾಪನೆ ಮಾಡಲಾಗಿದೆ. ದಿನನಿತ್ಯ ಸರಾಸರಿ 100 ಕಂಬಗಳ ಬದಲಾವಣೆಯ ಕಾಮಗಾರಿಯನ್ನು ಕೈಗೊಳ್ಳಲಾಗುತ್ತಿದೆ. ಮಳೆ ಹಾಗೂ ಗಾಳಿಯ ತೀವ್ರತೆ ಹೆಚ್ಚಾಗಿರುವುದರಿಂದ ಪ್ರತಿದಿನ 80ರಿಂದ 100 ಕಂಬಗಳು ಹಾನಿಯಾಗುತ್ತಿದೆ.
ಹಾನಿ ಸರಿಪಡಿಸುವ ನಿಟ್ಟಿನಲ್ಲಿ 502 ಸಿಬ್ಬಂದಿ ನಿಯೋಜಿಸಿ ಕಾಮಗಾರಿ ಮುಂದುವರಿಸಲಾಗಿದೆ. ವಿದ್ಯುತ್ ಜಾಲದ ದುರಸ್ತಿ ಕಾರ್ಯವನ್ನು ಚುರುಕುಗೊಳಿಸಲು ಹಾಗೂ ವಿದ್ಯುತ್ ಜಾಲವನ್ನು ಪುನಃ ಸ್ಥಾಪಿಸಲು ಮಡಿಕೇರಿ ವಿಭಾಗದ 231 ಸಿಬ್ಬಂದಿ, ಇತರ ವಿಭಾಗಗಳಿಂದ, ಹೊರಗುತ್ತಿಗೆಯಿಂದ 136 ಸಿಬ್ಬಂದಿ ಹಾಗೂ 135 ವಿದ್ಯುತ್ ಗುತ್ತಿಗೆದಾರರ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಎಲ್ಲ ಸಿಬ್ಬಂದಿ ಸಾರ್ವಜನಿಕರಿಗೆ ವಿದ್ಯುತ್ ಪೂರೈಕೆಯಲ್ಲಿ ತೊಂದರೆಯಾಗದಂತೆ ಗಮನ ವಹಿಸುವ ಸಲುವಾಗಿ ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ವಿದ್ಯುತ್ ಜಾಲದ ಮರುಸ್ಥಾಪನೆ ಕಾರ್ಯ ಮತ್ತು ಬ್ರೇಕ್ ಡೌನ್ ನಿರ್ವಹಣೆ ಕಾರ್ಯದಲ್ಲಿ ನಿರತರಾಗಿರುವುದರಿಂದ ಕೆಲವೊಂದು ಸಂದರ್ಭಗಳಲ್ಲಿ ಗ್ರಾಹಕರ ದೂರವಾಣಿ ಕರೆಗಳನ್ನು ಸ್ವೀಕರಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಗ್ರಾಹಕರ ದೂರಗಳನ್ನು ದಾಖಲಿಸಿ, ನಿವಾರಿಸುವ ನಿಟ್ಟಿನಲ್ಲಿ ಮಡಿಕೇರಿ ವಿಭಾಗಕ್ಕೆ ಪ್ರತ್ಯೇಕವಾಗಿ ನೀಡಲಾಗಿರುವ ಟೋಲ್ ಫ್ರೀ ಸಂಖ್ಯೆ 9141038902 ಅನ್ನು ಸಂಪರ್ಕಿಸುವಂತೆ ಕಾರ್ಯಪಾಲಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದೆ.