ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಇಂದು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದಾರೆ. ಗೃಹ ಕಛೇರಿ ʼಕೃಷ್ಣʼದಲ್ಲಿ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನ, ಆಂಧ್ರಪ್ರದೇಶದ ಡಿಸಿಎಂ ಪವನ ಕಲ್ಯಾಣ್ ಇಂದು ಭೇಟಿ ಮಾಡಿದ್ದಾರೆ.
ಜನಸೇವಾ ಪಕ್ಷದ ನಾಯಕ ಪವನ್ ಕಲ್ಯಾಣ್ ಆಂಧ್ರದಲ್ಲಿ ನೂತನ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಮೊದಲ ಬಾರಿಗೆ ನೆರೆ ರಾಜ್ಯಕ್ಕೆ ಭೇಟಿ ನೀಡಿದ್ದಾರೆ. ಆನೆ ಹಾವಳಿ ತಡೆಗಟ್ಟುವ ಸಂಬಂಧ ವಿಧಾನಸೌಧದಲ್ಲಿ ನಡೆಯುವ ಸಭೆಗಾಗಿ ಪರಿಸರ ಮತ್ತು ಅರಣ್ಯ ಖಾತೆ ಸಚಿವ ಪವನ್ ಕಲ್ಯಾಣ್ ಕರ್ನಾಟಕ್ಕೆ ಆಗಮಿಸಿದ್ದಾರೆ. ರಾಜ್ಯದ ಅರಣ್ಯ ಸಚಿವ ಈಶ್ವರ ಖಂಡ್ರೆ ಅಧ್ಯಕ್ಷತೆಯಲ್ಲಿ ಈ ಸಭೆ ನಡೆಯುತ್ತಿದೆ.
2022-23ರಲ್ಲಿ ನಡೆದ ಆನೆಗಳ ಗಣತಿ ಬಳಿಕ ಆನೆಗಳ ಸಂಖ್ಯೆಯಲ್ಲಿ ಕರ್ನಾಟಕವೇ ಮೊದಲ ಸ್ಥಾನದಲ್ಲಿದೆ. ರಾಜ್ಯದಲ್ಲಿ 6,395 ಆನೆಗಳಿವೆ. ಪ್ರತಿ 5 ವರ್ಷಗಳಿಗೊಮ್ಮೆ ಆನೆಗಳ ಗಣತಿ ನಡೆಸಲಾಗುತ್ತದೆ. ಆದರೆ ಈ ವರ್ಷದ ಮೇ ತಿಂಗಳಿನಲ್ಲಿ ಮೂರು ದಿನಗಳ ಕಾಲ ಕರ್ನಾಟಕದ ಜೊತೆ ಗಡಿ ಹಂಚಿಕೊಂಡಿರುವ 4 ರಾಜ್ಯಗಳಲ್ಲಿ ಆನೆಗಳ ವಿಶೇಷ ಗಣತಿಯನ್ನು ನಡೆಸಲಾಗಿತ್ತು. ಗಡಿಭಾಗದಲ್ಲಿ ಆನೆಗಳ ಹಾವಳಿ ತಡೆಗೆ ಕೈಗೊಳ್ಳಲು ಈ ವಿಶೇಷ ಗಣತಿ ನಡೆದಿತ್ತು.
ಕರ್ನಾಟಕ, ತಮಿಳುನಾಡು, ಕೇರಳ, ತೆಲಂಗಾಣ ಮತ್ತು ಆಂಧ್ರ ಪ್ರದೇಶ ರಾಜ್ಯಗಳ ಗಡಿಗಳಲ್ಲಿ ವಿಶೇಷವಾಗಿ ಆನೆಗಳ ಗಣತಿಯನ್ನು ಮೇ 23 ರಿಂದ 25ರ ತನಕ ನಡೆಸಲಾಗಿತ್ತು.ಈಗ ಗಣತಿಯ ವರದಿ ಅನ್ವಯ ಗಡಿಯಲ್ಲಿ ಆನೆಗಳ ಹಾವಳಿ ತಡೆಯಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚಿಸಲು ಸಭೆ ನಡೆಸಲಾಗುತ್ತಿದೆ.