ವಿವಿಧ ಸಂಘಟನೆಗಳ ಆಕ್ರೋಶ । ಚಾಮರಾಜನಗರಲ್ಲಿ ಬೃಹತ್ ಪ್ರತಿಭಟನೆ
ಪ್ರತಿನಿಧಿ ವರದಿ ಚಾಮರಾಜನಗರ
ಎಸ್ಸಿಪಿ, ಟಿಎಸ್ಪಿ ಮೀಸಲು ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಹಾಗೂ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣವನ್ನು ದುರ್ಬಳಕೆ ಮಾಡಿಕೊಂಡಿರುವ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ ಮೀಸಲಾತಿ ಸಂರಕ್ಷಣಾ ಸಮಿತಿ, ಎಸ್ಸಿಪಿ, ಟಿಎಸ್ಪಿ ಅನುದಾನ ಸಂರಕ್ಷಣಾ ಸಮಿತಿ ಹಾಗೂ ಸ್ವರಾಜ್ ಸಂಘಟನೆಯ ಕಾರ್ಯಕರ್ತರು ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.
ನಗರದ ಶ್ರೀ ಚಾಮರಾಜೇಶ್ವರಸ್ವಾಮಿ ದೇಗುಲದ ಎದುರು ಜಮಾಯಿಸಿದ ಪ್ರತಿಭಟನಾಕಾರರು, ಮೆರವಣಿಗೆ ಹೊರಟು ಬಿ.ರಾಚಯ್ಯ ಜೋಡಿ ರಸ್ತೆ ಮೂಲಕ ಜಿಲ್ಲಾಡಳಿತ ಭವನ ತಲುಪಿದರು. ಮೆರವಣಿಗೆ ಯುದ್ಧಕ್ಕೂ ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ಹೊರ ಹಾಕಿದರು.
ರಾಜ್ಯ ಸರ್ಕಾರ 2023-24 ಹಾಗೂ 2024-25ನೇ ಸಾಲಿನ ಎಸ್ಸಿ, ಎಸ್ಟಿ ಸಮುದಾಯಗಳ ಅಭಿವೃದ್ಧಿಗೆ ಮೀಸಲಿಟ್ಟಿದ್ದ ಎಸ್ಸಿಪಿ, ಟಿಎಸ್ಪಿ ಯೋಜನೆಯ ಮೀಸಲು ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಂಡು ಎಸ್ಸಿ, ಎಸ್ಟಿ ಸಮುದಾಯಗಳಿಗೆ ಅನ್ಯಾಯ ಮಾಡಿದೆ. ಈ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಳ್ಳುತ್ತಿರುವುದರಿಂದ ಎಸ್ಸಿ, ಎಸ್ಟಿ ವಿದ್ಯಾರ್ಥಿಗಳಿಗೆ ಸಮಯಕ್ಕೆ ಸರಿಯಾಗಿ ವಿದ್ಯಾರ್ಥಿ ವೇತನ ಬಿಡುಗಡೆಯಾಗುತ್ತಿಲ್ಲ. ಮೆರಿಟ್ ವಿದ್ಯಾರ್ಥಿಗಳ ವೇತನ ರದ್ದು ಮಾಡಲಾಗಿದೆ. ವಿದೇಶಿ ವ್ಯಾಸಂಗ ಮಾಡಲು ಜಾರಿಯಾಗಿದ್ದ ಪ್ರಬುದ್ಧ ಯೋಜನೆಯನ್ನು ರದ್ದುಗೊಳಿಸಲಾಗಿದೆ. ಸರ್ಕಾರಿ ಶಾಲಾ ಕಾಲೇಜು ಇತರ ವೃತ್ತಿಪರ ಕೋರ್ಸ್ಗಳ ಪ್ರವೇಶ ಶುಲ್ಕವನ್ನು ಶೇ.100ರಷ್ಟು ಹೆಚ್ಚಿಸಿ ಎಸ್ಸಿ, ಎಸ್ಟಿ ವಿದ್ಯಾರ್ಥಿಗಳನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡುತ್ತಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ಹೊರ ಹಾಕಿದರು.
ಮೀಸಲು ಹಣ ದುರ್ಬಳಕೆಯಿಂದ ಸಮಾಜ ಕಲ್ಯಾಣ ಇಲಾಖೆಯ ಯೋಜನೆಗಳಾದ ಸ್ವಯಂ ಉದ್ಯೋಗ ಯೋಜನೆ, ಉದ್ಯಮ ಶೀಲತಾ, ಮೈಕ್ರೋ ಕ್ರೆಡಿಟ್ ಪ್ರೇರಣ, ಗಂಗಾ ಕಲ್ಯಾಣ, ಭೂ ಒಡೆತನ, ಸಮೃದ್ಧಿ ಯೋಜನೆ, ಐರಾವತ ಯೋಜನೆ ಹಾಗೂ ಇನ್ನು ಹತ್ತು ಹಲವು ಯೋಜನೆಗಳು ಸ್ಥಗಿತಗೊಂಡಿವೆ. ಸರ್ಕಾರ ಸಾಮಾನ್ಯ ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಂಡಿರುವ ಎಸ್ಸಿಪಿ, ಟಿಎಸ್ಪಿ ಹಣವನ್ನು ಕಾಯ್ದೆಯ ಪ್ರಕಾರ 7ಎ ಮತ್ತು 7ಬಿ ಈ ಕಾಲಂನ ಅಭಿವೃದ್ಧಿ ಚಟುವಟಿಕೆಗಳಿಗೆ ಬಳಸಿಕೊಳ್ಳಬೇಕು ಎಂದು ಆಗ್ರಹಿಸಿದರು.
ಸಿ.ಕೆ.ಮಂಜುನಾಥ್, ಸೋಮಶೇಖರ್, ಧರಣೇಂದ್ರ, ನಾಗೇಶ್, ವಿಷ್ಣು,ಶಿವಕುಮಾರ್, ಪ್ರಸನ್ನ, ಮಹದೇವಸ್ವಾಮಿ, ನಾರಾಯಣ, ಮಹದೇವ ಮಂಜುನಾಥ, ಕೃಷ್ಣಕುಮಾರ್, ಪ್ರಸನ್ನಕುಮಾರ್ ಸೇರಿದಂತೆ ಇತರರಿದ್ದರು.
8ಸಿಎಚ್ಎನ್.1: ಎಸ್ಸಿಪಿ ಮತ್ತು ಟಿಎಸ್ಪಿ ಹಣ ಹಾಗೂ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣವನ್ನು ದುರ್ಬಳಕೆ ಮಾಡಿಕೊಂಡಿರುವ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ ಚಾಮರಾಜನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.