ಬಹುಕೋಟಿ ಹಗರಣ ಮುಡಾ ನಿವೇಶನ ಹಂಚಿಕೆ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಸಿಎಂ ಸಿದ್ದರಾಮಯ್ಯ ವಿರುದ್ಧ ಇದೀಗ ಮತ್ತೊಂದು ದೂರು ಬೆಂಗಳೂರಿನಲ್ಲಿ ನಿನ್ನೆ ದಾಖಲಾಗಿದೆ. ಸಿಎಂ ಸಿದ್ದರಾಮಯ್ಯ ಅವರಿಗೆ ತಲೆನೋವಾಗಿ ಪರಿಣಮಿಸಿರುವ ಮುಡಾ ಹಗರಣಕ್ಕೆ ಸಂಬಂಧ ಪಟ್ಟಂತೆ ಮೈಸೂರಿನ ಹಕ್ಕು ಕಾರ್ಯಕರ್ತ ಸ್ನೇಹಮಯಿ ಕೃಷ್ಣ, ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಅರ್ಜಿಯನ್ನು ಸಲ್ಲಿಸಿದ್ದಾರೆ.
ಅಧಿಕಾರವನ್ನು ದುರ್ಬಳಕೆ ಮಾಡಿರುವ ಸಿಎಂ ಸಿದ್ದರಾಮಯ್ಯ ಅವರು ಮುಡಾ ನಿವೇಶನಗಳನ್ನು ತನ್ನ ಪತ್ನಿಯ ಹೆಸರಿಗೆ ಪಡೆದುಕೊಂಡಿದ್ದಾರೆ ಹಾಗೂ ಈ ಆರೋಪ ಸಂಬಂಧ ಕ್ರಿಮಿನಲ್ ಪ್ರಕರಣವನ್ನ ದಾಖಲಿಸಿ ತನಿಖೆ ನಡೆಸುವುದಕ್ಕೆ ಸೂಚನೆ ನೀಡಬೇಕೆಂದು ಕೋರಿ ಬೆಂಗಳೂರಿನ ಜನ ಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಕೆಯಾಗಿದೆ.
ಮಾಹಿತಿ ಹಕ್ಕು ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಸಲ್ಲಿಸಿದ್ದ ಖಾಸಗಿ ದೂರಿನ ಸಂಬಂಧ ಆದೇಶ ಹೊರ ಬರುವುದಕ್ಕೂ ಮುನ್ನ ಬೆಂಗಳೂರಿನ ಮಾಹಿತಿ ಹಕ್ಕು ಕಾರ್ಯಕರ್ತ ಟಿ.ಜೆ. ಅಬ್ರಾಹಂ ಮತ್ತೊಂದು ದೂರನ್ನು ಸಲ್ಲಿಸಿದ್ದಾರೆ. ಸೋಮವಾರ ಸಂಜೆ ದೂರು ಸಲ್ಲಿಸಿದ್ದು, ಇಂದು (ಮಂಗಳವಾರ) ವಿಚಾರಣೆ ನಡೆಯುವ ಸಾಧ್ಯತೆಯಿದೆ.
ಮೂಲ ಜಮೀನಿಗೆ ಮಾಲೀಕರೇ ಇಲ್ಲ. ಆ ಜಮೀನು ಸಿದ್ದರಾಮಯ್ಯ ಸಂಬಂಧಿಕರ ಹೆಸರಿಗೆ ಬಂದಿದೆ. ಅಲ್ಲಿಂದ ಸಿದ್ದರಾಮಯ್ಯ ಪತ್ನಿ ಹೆಸರಿಗೆ ಉಡುಗೊರೆಯಾಗಿ ಬಂದಿದ್ದು, ಅಂತಹ ಜಮೀನಿಗೆ ಬದಲಿ ನಿವೇಶನ ಪಡೆದುಕೊಳ್ಳಲಾಗಿದೆ. ಈ ಪ್ರಕ್ರಿಯೆ ಇಲ್ಲದ ಜಮೀನಿಗೆ ಬದಲಿ ನಿವೇಶನ ಪಡೆದುಕೊಂಡಂತಿದೆ. ಪರೋಕ್ಷವಾಗಿ ಅಧಿಕಾರ ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ದೂರಿನಲ್ಲಿ ವಿವರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ಕ್ರಿಮಿನಲ್ ಆರೋಪದಲ್ಲಿ ತನಿಖೆಗೆ ಆದೇಶಿಸಬೇಕು ಎಂದು ದೂರಿನಲ್ಲಿ ಮನವಿ ಮಾಡಲಾಗಿದೆ.