ರಾಜ್ಯದ ಆರು ರಂಗಾಯಣಗಳಿಗೆ ನಿರ್ದೇಶಕರ ನೇಮಕ ಮಾಡಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆದೇಶ ಹೊರಡಿಸಿದೆ. ಹಿಂದುಳಿದ ವರ್ಗಗಳ ಕಲ್ಯಾಣ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಇಂದು ರಾಜ್ಯದ ಆರು ರಂಗಾಯಣಗಳಿಗೆ ನಿರ್ದೇಶಕರನ್ನು ನೇಮಕ ಮಾಡುವ ಮೂಲಕ ರಾಜ್ಯದ ರಂಗಭೂಮಿ ಚಟುವಟಿಕೆಗಳಿಗೆ ದೊಡ್ಡ ಮಟ್ಟದಲ್ಲಿ ಚಾಲನೆ ನೀಡಿದ್ದಾರೆ.
ಮೈಸೂರು ರಂಗಾಯಣ ನಿರ್ದೇಶಕರಾಗಿ ಸತೀಶ್ ತಿಪಟೂರು, ಧಾರವಾಡಕ್ಕೆ ರಾಜು ತಾಳಿಕೋಟೆ, ಶಿವಮೊಗ್ಗಕ್ಕೆ ಪ್ರಸನ್ನ ಡಿ.ಸಾಗರ, ಕಲಬುರಗಿಗೆ ಡಾ. ಸುಜಾತ ಜಂಗಮ ಶೆಟ್ಟಿ, ದಾವಣಗೆರೆಯ ವೃತ್ತಿ ರಂಗಭೂಮಿ ರಂಗಾಯಣ ನಿರ್ದೇಶಕರಾಗಿ ಮಲ್ಲಿಕಾರ್ಜುನ ಕಡಕೋಳ ಹಾಗೂ ಕಾರ್ಕಳದ ಯಕ್ಷ ರಂಗಾಯಣ ನಿರ್ದೇಶಕರಾಗಿ ವೆಂಕಟರಮಣ ಐತಾಳ ನೇಮಕಗೊಂಡಿದ್ದಾರೆ ಎಂದು ಸಚಿವ ಶಿವರಾಜ ತಂಗಡಗಿ ತಿಳಿಸಿದ್ದಾರೆ.
ಈ ಸಂಬಂಧ ಅಧಿಕೃತ ಸರ್ಕಾರಿ ಆದೇಶವನ್ನು ಹೊರಡಿಸಲಾಗಿದೆ, ನಿರ್ದೇಶಕರು ಅಧಿಕಾರ ವಹಿಸಿಕೊಂಡ ಕೂಡಲೇ ರಂಗಾಯಣಗಳ ಕಾರ್ಯ ಚಟುವಟಿಕೆಗಳನ್ನು ವೇಗಗತಿಯಲ್ಲಿ ಕೈಗೊಳ್ಳಲು ಹಾಗೂ ರಂಗಭೂಮಿಯ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಸೂಚಿಸಲಾಗಿದೆ ಎಂದು ಸಚಿವ ಶಿವರಾಜ ತಂಗಡಗಿ ಹೇಳಿದರು.
ಇದಲ್ಲದೆ ವಿವಿಧ ಅಕಾಡೆಮಿಗಳಲ್ಲಿ ಖಾಲಿ ಇದ್ದ ಸದಸ್ಯರ ನೇಮಕಾತಿ ಆದೇಶವನ್ನು ಸಹ ಹೊರಡಿಸಲಾಗಿದೆ ಎಂದು ಸಚಿವ ಶಿವರಾಜ ತಂಗಡಗಿ ಹೇಳಿದರು. ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಸದಸ್ಯರಾಗಿ ಅಕ್ಷತಾ ಎಂ.ನಾಯಕ್ (ಮಂಗಳೂರು), ಕರ್ನಾಟಕ ರಾಜ್ಯ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಸದಸ್ಯರಾಗಿ ವಿನೋದ್ ಮೂಡಗದ್ದೆ, ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಸದಸ್ಯರಾಗಿ ರಾಘವೇಂದ್ರ ಕಿನ್ನಾಳ (ಕೊಪ್ಪಳ) ಹಾಗೂ ಶಿವಪ್ರಸಾದ್ (ಚನ್ನಪಟ್ಟಣ), ಕರ್ನಾಟಕ ಲಲಿತಕಲಾ ಅಕಾಡೆಮಿ ಸದಸ್ಯರಾಗಿ ಎಚ್.ಎಸ್. ಮಂಜುನಾಥ್ (ಹಾಸನ) ಹಾಗೂ ಕರ್ನಾಟಕ ಬಯಲಾಟ ಅಕಾಡೆಮಿ ಹೆಚ್ಚುವರಿ ಸದಸ್ಯರಾಗಿ ಲಕ್ಷ್ಮಣ ಹಣಮಂತ ದೇಸಾರಟ್ಟಿ (ಬಾಗಲಕೋಟೆ) ಅವರನ್ನು ನೇಮಕ ಮಾಡಲಾಗಿದೆ ಎಂದು ತಿಳಿಸಿದರು.