78 ನೇ ಸ್ವಾತಂತ್ರೋತ್ಸವ ದಿನಾಚರಣೆಯನ್ನು ನಗರದ ಬನ್ನಿಮಂಟಪ ಪಂಜಿನ ಕವಾಯತು ಮೈದಾನದಲ್ಲಿ ಅದ್ದೂರಿಯಾಗಿ ಆಚರಣೆ ಮಾಡಲಾಯಿತು. ಸಮಾಜ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್. ಸಿ ಮಹದೇವಪ್ಪ ಅವರು ಧ್ವಜಾರೋಹಣ ನೆರವೇರಿಸಿ, ಧ್ವಜವಂದನೆ ಸ್ವೀಕರಿಸಿದರು. ಇದೇ ವೇಳೆ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಗಣ್ಯರು ಪುಷ್ಪಾರ್ಚನೆ ನೆರವೇರಿಸಿದರು. ನಂತರ ಸಚಿವರು ತೆರೆದ ವಾಹನದಲ್ಲಿ ಪೆರೇಡ್ ತಂಡಗಳ ಪರಿವೀಕ್ಷಣೆ ನಡೆಸಿದರು.
ಪೆರೇಡ್ ತುಕಡಿಗಳಿಂದ ಆಕರ್ಷಕ ಪಥ ಸಂಚಲನ ನಡೆಯಿತು. ಪೆರೇಡ್ ನಲ್ಲಿ ಪೊಲೀಸ್ ಇಲಾಖೆಯ ಪುರುಷ ಹಾಗೂ ಮಹಿಳಾ ತಂಡಗಳು, ಗೃಹ ರಕ್ಷಕ ದಳ, ಅಗ್ನಿ ಶಾಮಕ ದಳ, ಅಬಕಾರಿ ದಳ, ಎನ್ ಎಸ್ ಎಸ್, ಎನ್ ಸಿ ಸಿ ತಂಡಗಳು, ವಿಶೇಷ ಚೇತನ ಮಕ್ಕಳ ತಂಡ ಹಾಗೂ ಶಾಲಾ ಕಾಲೇಜು ತಂಡಗಳು ಭಾಗವಹಿಸಿದ್ದವು.
ಬಳಿಕ 78 ಸ್ವಾತಂತ್ರೋತ್ಸವ ದಿನಾಚರಣೆಯ ಶುಭ ಸಂದೇಶ ನೀಡಿದ ಸಚಿವರು, ಹಲವು ಮಹನೀಯರ ತ್ಯಾಗ, ಬಲಿದಾನ, ಹೋರಾಟದ ಮೂಲಕ ಗುಲಾಮಗಿರಿಯ ಸಂಕೋಲೆಯಿಂದ ದೇಶ ಮುಕ್ತವಾಗಿದೆ. ದೇಶಕ್ಕೆ ಸ್ವತಂತ್ರ್ಯ ತಂದು ಕೊಡುವ ನಿಟ್ಟಿನಲ್ಲಿ ಹೋರಾಡಿದ ಸ್ವಾತಂತ್ರ್ಯ ಹೋರಾಟಗಾರರಿಗೆ ನನ್ನ ನಮನಗಳು ಎಂದ ಸಚಿವ ಮಹದೇವಪ್ಪ, ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಅನುಕೂಲತೆ ಪ್ರಸ್ತಾಪಿಸಿದರು.
ಗುಡ್ ಶಫರ್ಡ್ ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಮಕ್ಕಳಿಂದ ವಿವಿಧತೆಯಲ್ಲಿ ಏಕತೆ ದೇಶಭಕ್ತಿ ಗೀತೆ, ನಿರ್ಮಲ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಪ್ರೌಢ ಶಾಲಾ ಮಕ್ಕಳಿಂದ ದೇಶ ಭಕ್ತಿ ಗೀತೆಗೆ ಸಮೂಹ ನೃತ್ಯ ಹಾಗೂ ಸಂತ ಫಿಲೋಮಿನಾ ಪ್ರೌಢ ಶಾಲಾ ಮಕ್ಕಳಿಂದ ದೇಶ ಪ್ರೇಮಿ ಭಗತ್ ಸಿಂಗ್ ಅವರ ಮರಣ ದಂಡನೆಯ ನೃತ್ಯ ರೂಪಕವನ್ನು ಪ್ರದರ್ಶನವನ್ನು ಪ್ರಸ್ತುತಪಡಿಸಿದರು.
ಸಮಾರಂಭದಲ್ಲಿ ಶಾಸಕ ತನ್ವೀರ್ ಸೇಠ್, ಮುಡಾ ಅಧ್ಯಕ್ಷ ಕೆ ಮರಿಗೌಡ, ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್, ಜಿಲ್ಲಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ, ದಕ್ಷಿಣ ವಲಯ ಐಜಿಪಿ ಬೋರಲಿಂಗಯ್ಯ, ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಎಂ. ಗಾಯತ್ರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್, ಅಪರ ಜಿಲ್ಲಾಧಿಕಾರಿ ಡಾ. ಪಿ. ಶಿವರಾಜ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಾರ್ವಜನಿಕರು ಹಾಜರಿದ್ದರು.