ಮೈಸೂರು: ಬದಲಾಗುತ್ತಿರುವ ಆಹಾರ ಪದ್ಧತಿ ಹಾಗೂ ವಾತಾವರಣದಿಂದ ಇತ್ತೀಚಿನ ದಿನಗಳಲ್ಲಿ ಮನುಷ್ಯನಲ್ಲಿ ಅನಾರೋಗ್ಯ ಹೆಚ್ಚಾಗುತ್ತಿದೆ. ಆದರೆ ಜನರು ಆರೋಗ್ಯಕರವಾಗಿದ್ದರೆ ಆರೋಗ್ಯಕರ ಸಮಾಜದ ನಿರ್ಮಾಣ ಸಾಧ್ಯವಾಗಲಿದೆ ಎಂದು ಸಂಸದ ಯದುವೀರ್ ಒಡೆಯರ್ ಅಭಿಪ್ರಾಯಪಟ್ಟರು.
ಜಿಎಸ್ಎಸ್ ಸಮೂಹ ಸಂಸ್ಥೆಗಳು, ವಿಜಯ ವಿಠಲ ಶಿಕ್ಷಣ ಸಂಸ್ಥೆಗಳು, ಬಿಎಸ್ಎಸ್ ವಿದ್ಯೋದಯ ಹಾಗೂ ವಿವಿಧ ಸಂಸ್ಥೆಗಳ ಸಹಯೋಗದಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆ ಹಾಗೂ ರಕ್ಷಾಬಂಧನದ ಪ್ರಯುಕ್ತ ನಗರದ ಸರಸ್ವತಿಪುರಂನಲ್ಲಿರುವ ವಿಜಯ ವಿಠಲ ಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ಆರೋಗ್ಯ ರಕ್ಷಾ ಅನಾರೋಗ್ಯದಿಂದ ಆರೋಗ್ಯದ ಕಡೆಗೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ವಿದೇಶಿ ವಸ್ತುಗಳ ಬಳಕೆ ಹೆಚ್ಚಾಗುತ್ತಿದ್ದು, ಆಹಾರ ಉತ್ಪನ್ನಗಳಲ್ಲೂ ವಿದೇಶಿ ಉತ್ಪನ್ನಗಳ ಬಳಕೆ ಹೆಚ್ಚಾಗಿದೆ. ವಿದೇಶಿ ವಸ್ತುಗಳ ಬಳಕೆಗಿಂತಲೂ ಸ್ವದೇಶಿ ಉತ್ಪನ್ನಗಳನ್ನು ಬಳಕೆ ಮಾಡಬೇಕಿದ್ದು, ಸಿರಿ ಧಾನ್ಯಗಳು ಪೌಷ್ಠಿಕಾಂಶದ ಆಗರಗಳಾಗಿವೆ. ವಿದೇಶದಿಂದ ಆಮದು ಮಾಡುವ ಆಹಾರ ಪದಾರ್ಥಗಳು ರುಚಿಕರವಾಗಿದ್ದರೂ, ಆರೋಗ್ಯಕ್ಕೆ ಪೂರಕವಾಗಿರುವುದಿಲ್ಲ. ಆದರೆ ನಾವು ಸೇವಿಸುವ ದೇಶೀಯ ಆಹಾರ ಪದಾರ್ಥಗಳು ಔಷಧೀಯ ಗುಣಗಳಿಂದ ಕೂಡಿರಲಿವೆ. ಹೀಗಾಗಿ ನಾವು ನಮ್ಮ ಆಹಾರ ಪದ್ಧತಿಯನ್ನು ಅನುಸರಿಸುವುದರಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ಹೇಳಿದರು.
ಆಯುರ್ವೇದ ಒಂದು ಧರ್ಮದಲ್ಲ:
ಆಹಾರ ಪದ್ಧತಿಯಲ್ಲಿನ ಬದಲಾವಣೆಯೊಂದಿಗೆ ಇತ್ತೀಚಿನ ದಿನಗಳಲ್ಲಿ ಮಾನಸಿಕ ಒತ್ತಡ ಹಾಗೂ ಇತರೆ ಸಮಸ್ಯೆಗಳಿಂದ ದೇಶದಲ್ಲಿ ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿದೆ. ಅಭಿವೃದ್ದಿ ಹೊಂದಿರುವ ದೇಶವಾಗಿರುವ ಚೀನಾದಲ್ಲಿಯೂ ಕೂಡ ಮನುಷ್ಯರಿಗೆ ಅನಾರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತದೆ. ನಮ್ಮ ದೇಶದಲ್ಲಿಯೂ ಕೂಡ ದಿನೇ ದಿನೇ ಅನಾರೋಗ್ಯ ಸಮಸ್ಯೆಗಳು ಕಾಡ ತೊಡಗಿದೆ. ಆದ್ದರಿಂದ ಸಿರಿಧಾನ್ಯಯುತ ಆಹಾರವನ್ನು ಸೇವನೆ ಮಾಡಿ, ಆರೋಗ್ಯ ಕಾಪಾಡಿಕೊಳ್ಳಬೇಕಿದೆ ಎಂದ ಅವರು, ನಮ್ಮ ಆಯುರ್ವೇದ ಪದ್ದತಿ ಮೂಲಕ ನಮ್ಮ ಆರೋಗ್ಯ ಕಾಪಾಡಿಕೊಳ್ಳಬಹುದು. ಆಯುರ್ವೇದ ಎನ್ನುವುದು ಯಾವ ಧರ್ಮಕ್ಕೂ ಸೇರಿದಲ್ಲ, ಅದು ಎಲ್ಲರಿಗೂ ಸಲ್ಲುವಂತದ್ದಾಗಿದೆ. ತಂತ್ರಜ್ಞಾನವು ನಮ್ಮಲ್ಲಿ ಸಾಕಷ್ಟು ಬೆಳೆದಿರುವ ಹಿನ್ನೆಲೆಯಲ್ಲಿ ಆರೋಗ್ಯಕರ ಸಮಾಜ ನಿರ್ಮಾಣ ಮಾಡಲು ಎಲ್ಲರು ಮನಸ್ಸು ಮಾಡಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದ ಅಂಗವಾಗಿ ಸಮಾರಂಭದಲ್ಲಿ ಭಾಗಿಯಾದ ಗಣ್ಯರಿಗೆ ರಾಕಿ ಕಟ್ಟುವ ಮೂಲಕ ರಕ್ಷಾಬಂಧನದ ಶುಭ ಕೋರಲಾಯಿತು. ಕಾರ್ಯಕ್ರಮದಲ್ಲಿ ಜಿಎಸ್ಎಸ್ ಸಮೂಹ ಸಂಸ್ಥೆಗಳ ಮುಖ್ಯಸ್ಥರಾದ ಶ್ರೀಹರಿ ದ್ವಾರಕಾನಾಥ್, ಮೈಸೂರು ಡಯಾಸಿಸ್ ಅರ್ಪೋಸ್ಟೋಲಿಕ್ ಆಡಳಿತಾಧಿಕಾರಿ ಬರ್ನಾಡ್ ಬ್ಲೇಸಿಯಸ್ ಮೊರಾಸ್, ಬ್ರಹ್ಮಕುಮಾರಿ ಮಂಜುಳಾ, ವಿಜಯವಿಠಲ ಶಾಲೆಯ ಕಾರ್ಯದರ್ಶಿ ವಾಸುದೇವಭಟ್, ಹಿನ್ನೆಲೆ ಗಾಯಕ ಶ್ರೀಹರ್ಷ ಸೇರಿದಂತೆ ಇನ್ನಿತರರು ಹಾಜರಿದ್ದರು.