ಮೈಸೂರು: ಮೈಸೂರಿನ ಖಾಸಗಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದ ವಿದ್ಯಾರ್ಥಿನಿ ಅನಾರೋಗ್ಯದಿಂದ ಮೃತಳಾಗಿರುವ ಘಟನೆ ನಡೆದಿದೆ. ಮೈಸೂರಿನ ದಕ್ಷ ಪಿಯು ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಜಯಪ್ರಾರ್ಥನಾ(17) ಮೃತ ವಿದ್ಯಾರ್ಥಿನಿ.
ಮೈಸೂರಿನ ಹೂಟಗಳ್ಳಿಯಲ್ಲಿರುವ ದಕ್ಷ ಪಿಯು ಕಾಲೇಜಿನಲ್ಲಿ ಜಯಪ್ರಾರ್ಥನಾ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದಳು. ಮೂಲತಃ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ನಿವಾಸಿಯಾದ ವಿದ್ಯಾರ್ಥಿನಿ, ಹಾಸ್ಟೆಲ್ ನಲ್ಲಿ ಉಳಿದು ವ್ಯಾಸಂಗ ಮಾಡುತ್ತಿದ್ದಳು. ಭಾನುವಾರ ಊಟ ಮಾಡಿದ ನಂತರ ಜಯಪ್ರಾರ್ಥನಾಳ ಆರೋಗ್ಯದಲ್ಲಿ ಏರುಪೇರಾಗಿ ಅಸ್ವಸ್ಥಳಾಗಿದ್ದಳು. ವಿಚಾರ ತಿಳಿದು ಕಾಲೇಜು ಆಡಳಿತ ಮಂಡಳಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿತ್ತು. ಆದರೆ ಮಗಳ ಅನಾರೋಗ್ಯ ವಿಚಾರವನ್ನು ಭಾನುವಾರವೇ ಪೋಷಕರ ಗಮನಕ್ಕೆ ತರದೇ ಕಾಲೇಜು ಆಡಳಿತ ಮಂಡಳಿ ನಿರ್ಲಕ್ಷ್ಯ ತೋರಿದೆ.
ಸೋಮವಾರ ಬೆಳಿಗ್ಗೆ ಜಯಪ್ರಾರ್ಥನಾಳ ಆರೋಗ್ಯದಲ್ಲಿ ಮತ್ತೆ ಏರುಪೇರಾಗಿದ್ದು, ಆ ಸಮಯದಲ್ಲಿ ಪೋಷಕರಿಗೆ ಆಡಳಿತ ಮಂಡಳಿವಿಷಯ ಮುಟ್ಟಿಸಿದೆ. ಆದರೆ ಪೋಷಕರು ಬರುವ ಮುನ್ನವೇ ಜಯಪ್ರಾರ್ಥನಾ ಮೃತ ಪಟ್ಟಿದ್ದು, ಮಗಳ ಸಾವಿಗೆ ಕಾಲೇಜು ಆಡಳಿತ ಮಂಡಳಿಯೇ ಕಾರಣ ಎಂದು ಪೋಷಕರು ಆರೋಪಿಸಿದ್ದಾರೆ.
ಘಟನೆ ಸಂಬಂಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.