ಮೈಸೂರು: ಮುಡಾ ಹಗರಣ ಗಬ್ಬೆದ್ದು ನಾರುತ್ತಿದೆ, ಈ ಕೂಡಲೇ ರಾಜ್ಯ ಸರ್ಕಾರವನ್ನು ತಾತ್ಕಾಲಿಕವಾಗಿ ಅಮಾನತ್ತಿನಲ್ಲಿಡಿ ಎಂದು ರಾಜ್ಯಪಾಲರಿಗೆ ವಿಧಾನ ಪರಿಷತ್ ಸದಸ್ಯ ಎಚ್ ವಿಶ್ವನಾಥ್ ಸಲಹೆ ನೀಡಿದ್ದಾರೆ.
ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮುಡಾ ಹಗರಣದ ಬಗ್ಗೆ ಪರ-ವಿರೋಧ ಚರ್ಚೆ ಆಗುತ್ತಿದೆ.
ಮಹಾರಾಜರ ಕಾಲದಿಂದ ಕಾಪಾಡಿಕೊಂಡು ಬಂದ ಶ್ರೀಗಂಧದ ವಾಸನೆ ಈಗ ದುರ್ನಾತ ಬೀರುತ್ತಿದೆ. ರಾಷ್ಟ್ರದಲ್ಲಿ ರಾಜ್ಯದ ಮಾನ ಹರಾಜಾಗುತ್ತಿದೆ. ಕಾಂಗ್ರೆಸ್ ನಾಯಕರು ರಾಜ್ಯಪಾಲರನ್ನು ಕೆಟ್ಟ ಭಾಷೆಯಲ್ಲಿ ಹೀಗಳೆಯುವುದು ಗೌರವ ತರುವುದಿಲ್ಲ. ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಮತ್ತು ಸಿಎಂ ಸಿದ್ದರಾಮಯ್ಯ ಮಾತನಾಡುತ್ತಿರುವ ಭಾಷೆ ಸರಿಯಿಲ್ಲ ಎಂದಿದ್ದಾರೆ.
ಮುಡಾ ವಿಚಾರವಾಗಿ ಅವರು ಮಾತನಾಡಿ, ಸಿದ್ದರಾಮಯ್ಯ ಕೈಕೆಳಗೇ ದಾಖಲೆ ತಿದ್ದುವ ಕೆಲಸ ನಡೆಯುತ್ತಿದೆ. ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಹೆಲಿಕಾಪ್ಟರ್ನಲ್ಲಿ ಬಂದು ದಾಖಲೆಗಳನ್ನು ಹೊತ್ತೊಯ್ದರು, ಇದು ಕಳ್ಳತನ.
ಸಿಎಂ ಪತ್ನಿಗೆ ಸಂಬಂಧಪಟ್ಟ ದಾಖಲೆಗಳಿಗೆ ವೈಟ್ನರ್ ಹಾಕಲಾಗುತ್ತಿದೆ ರಾಜ್ಯದಲ್ಲಿ ಯಾವಾಗಲೂ ಇಂತಹ ಪ್ರಕರಣಗಳು ನಡೆದಿರಲಿಲ್ಲ. ಮುಡಾ ಆಯುಕ್ತರಾಗಿದ್ದ ಜಿ ಟಿ ದಿನೇಶ್ ಕುಮಾರ್ ರನ್ನು ಒದ್ದು ಒಳಗೆ ಹಾಕಬೇಕಿತ್ತು ಆದರೆ ನಿಮಗೆ ಬೇಕಾದವರು ಅಂಥ ಯಾವುದೇ ಕ್ರಮ ಕೈಗೊಂಡಿಲ್ಲವೇ ಎಂದು ಪ್ರಶ್ನಿಸಿದರು.
ಈ ಹಿಂದೆ ವೀರೇಂದ್ರ ಪಾಟೀಲ್ ಸರ್ಕಾರವನ್ನು ಅಮಾನತ್ತಿನಲ್ಲಿಟ್ಟು ವಿಚಾರಣೆ ನಡೆಸಲಾಗಿತ್ತು. ಕಾನೂನಿನ ಮುಂದೆ ಎಲ್ಲರೂ ಸಮಾನರೇ ಸಿದ್ದರಾಮಯ್ಯ, ಕುಮಾರಸ್ವಾಮಿ, ನನಗೆ ಎಲ್ಲರಿಗೂ ಒಂದೇ ಕಾನೂನು ಅನ್ವಯ. ರಾಜ್ಯ ಸರ್ಕಾರವನ್ನು ತಾತ್ಕಾಲಿಕವಾಗಿ ಅಮಾನತ್ತಿನಲ್ಲಿಟ್ಟು ವಿಚಾರಣೆ ನಡೆಸಿ ಎಂದು ರಾಜ್ಯಪಾಲರಿಗೆ ಸಲಹೆ ನೀಡಿದ್ದಾರೆ.
ಕ್ಯಾಬಿನೆಟ್ ಮೀಟಿಂಗ್ ಕರೆದು ಪ್ರಾಸಿಕ್ಯೂಷನ್ ವಿರುದ್ದ ನಿರ್ಣಯ ಕೈಗೊಂಡಿದ್ದು ಯಾಕೆ? ವಾಲ್ಮೀಕಿ ಹಗರಣದಲ್ಲಿ ಏನಾಗಿದೆ ಎಂದು ಎಲ್ಲರಿಗೂ ಗೊತ್ತಿದೆ. ಮುಡಾ ಪ್ರಕರಣದಲ್ಲಿ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧವೇ ಆರೋಪ ಕೇಳಿ ಬಂದಿದೆ ಆದ್ದರಿಂದ ಸರ್ಕಾರವನ್ನು ಅಮಾನತ್ತಿನಲ್ಲಿಡಿ ಎಂದು ಆಗ್ರಹಿಸಿದ ಇವರು ಕುಮಾರಸ್ವಾಮಿ ಪ್ರಕರಣದಲ್ಲಿ ತನಿಖೆ ಆಗಿ ವರದಿ ಬಂದಿದೆ. ಕುಮಾರಸ್ವಾಮಿ ಅವರ ವಿರುದ್ಧವು ಪ್ರಾಸಿಕ್ಯೂಷನ್ ಗೆ ಅನುಮತಿ ಕೊಡದೆ ಯಾಕೆ ಇಟ್ಟುಕೊಂಡಿದ್ದೀರಾ? ಎಂದು ಸುದ್ದಿಗೋಷ್ಠಿಯಲ್ಲಿ ವಿಧಾನಪರಿಷತ್ ಸದಸ್ಯ ಎಚ್ ವಿಶ್ವನಾಥ್ ಪ್ರಶ್ನೆ ಮಾಡಿದ್ದಾರೆ.