ನಾಡ ಹಬ್ಬ ದಸರಾ ಮಹೋತ್ಸವ 2024 ರ ಹಿನ್ನೆಲೆ ಮೈಸೂರಿಗೆ ಆಗಮಿಸಿರುವ ದಸರಾ ಗಜಪಡೆಗೆ ಇಂದು ತೂಕ ಪರಿಶೀಲನೆ ಮಾಡಲಾಗಿದೆ. ವಾಡಿಕೆಯಂತೆ ಗಜಪಡೆ ಅರಮನೆಗೆ ಆಗಮಿಸಿದ ಅಥವಾ ಮರುದಿನ ತೂಕ ಪರೀಕ್ಷೆ ಮಾಡಲಾಗುತ್ತದೆ. ಅಂತೆಯೇ ಇಂದು ಕಾಡಿನಿಂದ ನಾಡಿಗೆ ಆಗಮಿಸಿರುವ ದಸರಾ ಗಜಪಡೆಗೆ ತೂಕ ಪರೀಕ್ಷೆ ನೆರವೇರಿದೆ. ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಒಂಬತ್ತು ಆನೆಗಳಿಗೆ ತೂಕ ಚೆಕ್ ಮಾಡಲಾಗಿದೆ. ನಗರದ ಧನ್ವಂತರಿ ರಸ್ತೆಯಲ್ಲಿರೋ ಸಾಯಿರಾಮ್ ಅಂಡ್ ಕೊ., ತೂಕ ಮಾಪನಕೇಂದ್ರದಲ್ಲಿ ಆನೆಗಳ ತೂಕ ಪರೀಕ್ಷೆ ನಡೆಸಿಲಾಗಿದೆ. ತೂಕ ಪರಿಶೀಲನೆ ನಂತರ ಆನೆಗಳಿಗೆ ಪ್ರತಿನಿತ್ಯದ ಪೌಷ್ಟಿಕ ಆಹಾರ ಪದಾರ್ಥ ವಿತರಣೆ ಮಾಡಲಾಗಿದೆ.
ಬಳಿಕ ಮಾಧ್ಯಮಗಳೊಂದಿಗೆ ಡಿಸಿಎಫ್ ಡಾ ಪ್ರಭುಗೌಡ ಮಾತನಾಡಿ, ಜಂಬೂ ಸವಾರಿ ಮೆರವಣಿಗೆಗಾಗಿ ತಾಲೀಮು ಆನೆಗಳಿಗೆ ನಾಳೆಯಿಂದಲೇ ತಾಲೀಮು ಪ್ರಾರಂಬಿಸಲಾಗುತ್ತದೆ. ಬೆಳಗ್ಗೆ ಸಂಜೆ ಎರಡು ಸಮಯ ಅರಮನೆಯಿಂದ ಬನ್ನಿಮಂಟಪದವರೆಗೆ ನಡೆಯಲಿರುವ ತಾಲೀಮಿನಲ್ಲಿ ನಗರದ ಸದ್ದುಗದ್ದಲಕ್ಕೆ ವಿಚಲಿತವಾಗದಂತೆ ಆನೆಗಳಿಗೆ ತರಬೇತಿ ನೀಡುವುದೇ ತಾಲೀಮಿನ ಉದ್ದೇಶ ಎಂದಿದ್ದಾರೆ. ಅಭಿಮನ್ಯು : 5560 ಕೆಜಿ, ಭೀಮ : 4945 ಕೆಜಿ, ಏಕಲವ್ಯ : 4730 ಕೆಜಿ, ಕಂಜನ್ : 4515 ಕೆಜಿ, ಧನಂಜಯ : 5155 ಕೆಜಿ, ಲಕ್ಷ್ಮಿ : 2480 ಕೆಜಿ, ವರಲಕ್ಷ್ಮಿ : 3495 ಕೆಜಿ, ರೋಹಿತ : 3625 ಕೆಜಿ, ಗೋಪಿ : 4970 ಕೆಜಿ ತೂಕವಿದ್ದು, ಅರಮನೆಗೆ ಬಂದ ಗಜಪಡೆಗೆ ತೂಕ ಪರೀಕ್ಷೆ ಮಾಡಲಾಗಿದೆ. ಆನೆಗಳ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸಲಾಗುತ್ತದೆ. ಆನೆಗಳ ತೂಕದ ಆಧಾರದ ಮೇಲೆ ಪೌಷ್ಟಿಕ ಆಹಾರ ನೀಡಲಾಗುತ್ತೆ. ದಸರಾಗೆ ಮುನ್ನ ಮತ್ತೆ ಆನೆಗಳ ತೂಕ ಪರೀಕ್ಷೆ ಮಾಡುತ್ತೇವೆ. ಎಲ್ಲಾ ಆನೆಗಳ ಆರೋಗ್ಯ ಚೆನ್ನಾಗಿದೆ. ನಾಳೆಯಿಂದಲೇ ಗಜಪಡೆಗಳ ತಾಲೀಮು ಆರಂಭವಾಗಲಿದೆ ಎಂದು ತಿಳಿಸಿದ್ದಾರೆ.