ಮೈಸೂರು: ನಂಜನಗೂಡು ತಾಲ್ಲೂಕಿನ ಗಟ್ಟವಾಡಿ ಗ್ರಾಮದಲ್ಲಿ ಬಾಳೆ ಗಿಡಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆಯಾಗಿದೆ. ಘಟನಾ ಸ್ಥಳದಲ್ಲಿ ಕಬ್ಬಿಣದ ರಾಡು, ಕಾರಿನ ಮ್ಯಾಟ್ ಸೇರಿದಂತೆ ಹಲವು ವಸ್ತುಗಳು ಪತ್ತೆಯಾಗಿದ್ದು, ಅತ್ಯಾಚಾರ ಮಾಡಿ ಕೊಲೆ ಮಾಡಿರುವ ಆರೋಪ ಕೇಳಿ ಬಂದಿದೆ.
ಗಟ್ಟವಾಡಿ ಗ್ರಾಮದ ಶಶಿಕಲಾ (38) ಮೃತ ಮಹಿಳೆ. ಗಟ್ಟವಾಡಿ ಗ್ರಾಮದ ನಂಜುಂಡಪ್ಪಅಲಿಯಾಸ್ ಸಿದ್ದಲಿಂಗಪ್ಪ ಎಂಬುವರ ಬಾಳೆ ತೋಟದಲ್ಲಿ ಶವ ಪತ್ತೆಯಾಗಿದೆ. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಶಶಿಕಲಾ ರಾತ್ರಿ 9 ಗಂಟೆಗೆ ಮನೆಗೆ ವಾಪಸ್ ಬರುತ್ತಿದ್ದರು. ನಿನ್ನೆ ರಾತ್ರಿ ಮನೆಗೆ ಬಾರದ ಹಿನ್ನೆಲೆಯಲ್ಲಿ ಹುಡುಕಾಟ ನಡೆಸಲಾಗಿತ್ತು. ಈ ವೇಳೆ ಪೋನ್ ಮಾಡಿದ ನಂಜುಂಡಪ್ಪ, ತನ್ನ ಬಾಳೆ ತೋಟದಲ್ಲಿ ಮೃತ ಮಹಿಳೆ ನೇಣು ಹಾಕಿಕೊಂಡಿರುವ ವಿಷಯ ತಿಳಿಸಿದ್ದಾರೆ.
ಆದರೆ ಘಟನಾ ಸ್ಥಳದಲ್ಲಿ ಕಬ್ಬಿಣದ ರಾಡು, ಕಾರಿನ ಮ್ಯಾಟ್ ಸೇರಿದಂತೆ ಹಲವು ವಸ್ತುಗಳು ಪತ್ತೆಯಾಗಿದ್ದು, ಅತ್ಯಾಚಾರ ಮಾಡಿ ಕೊಲೆ ಮಾಡಿರುವ ಆರೋಪ ಕೇಳಿ ಬಂದಿದೆ. ಸದ್ಯ ಬಾಳೆ ತೋಟದ ಮಾಲೀಕ ನಂಜುಂಡಪ್ಪ ಗ್ರಾಮದಿಂದ ನಾಪತ್ತೆಯಾಗಿದ್ದಾನೆ. ಮೃತಳ ಸಹೋದರ ಮಹದೇವಯ್ಯ ನಂಜುಂಡಪ್ಪ ವಿರುದ್ಧ ದೂರು ನೀಡಿದ್ದು, ನಂಜನಗೂಡು ಡಿವೈಎಸ್ಪಿ ರಘು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.
ಮರಣೋತ್ತರ ಪರೀಕ್ಷೆಗೆಂದು ಶವವನ್ನು ರವಾನಿಸಲು ಪೊಲೀಸರು ಸಿದ್ಧತೆ ಮಾಡುತ್ತಿದ್ದ ಸಂದರ್ಭದಲ್ಲಿ ಅನ್ಯ ವರ್ಗದ ವ್ಯಕ್ತಿ ದಲಿತ ಮಹಿಳೆ ಮೇಲೆ ಅತ್ಯಾಚಾರ ಮಾಡಿ ಕೊಲೆ ಮಾಡಿದ್ದಾನೆ ಎಂದು ಕೆಲ ಸಂಘಟಕರು ಆರೋಪ ಮಾಡಿ ಮಾತಿನ ಚಕಮಕಿ ನಡೆದಿದೆ. ಆರೋಪಿ ಹಾಗೂ ಮೃತ ಮಹಿಳೆ ಪರಸ್ಪರ ಅನ್ಯ ವರ್ಗದವರು ಆದ ಹಿನ್ನೆಲೆ ಸದ್ಯ ಗ್ರಾಮದಲ್ಲಿ ಬೂದಿ ಮುಚ್ಚಿದ ಕೆಂಡದಂತಿರುವ ವಾತಾವರಣ ನಿರ್ಮಾಣವಾಗಿದೆ.
ಮೃತ ಮಹಿಳೆಯ ಶವವನ್ನು ನಂಜನಗೂಡಿನ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಿರುವ ಪೋಲಿಸರು, ದೊಡ್ಡ ಕವಲಂದೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.