ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಸೇರಿರುವ ನಟ ದರ್ಶನ್ ಅವರಿಗೆ ಜೈಲಿನಲ್ಲಿ ರಾಜಾತಿಥ್ಯ ನೀಡಲಾಗಿದ್ದು, ಇದಕ್ಕೆ ಸಂಬಂಧಿಸಿದ ಪೋಟೋಗಳು ನಿನ್ನೆ(ಆ.25) ರಂದು ವೈರಲ್ ಆಗಿತ್ತು. ಇದರ ಬೆನ್ನಲ್ಲೆ 7 ಜನ ಜೈಲಾಧಿಕಾರಿಗಳನ್ನು ಅಮಾನತು ಮಾಡಲಾಗಿದೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಬೆಂಗಳೂರಿನಲ್ಲಿ ಇಂದು ತಿಳಿಸಿದ್ದಾರೆ.
ನಟ ದರ್ಶನ್ ಪರಪ್ಪನ ಅಗ್ರಹಾರ ಜೈಲಿನಲ್ಲಿ ಆಹಾರ ಸರಿಹೊಂದುತ್ತಿಲ್ಲ, ಹೀಗಾಗಿ ಆರೋಗ್ಯದಲ್ಲಿ ಏರುಪೇರಾಗುತ್ತಿದ್ದು ಮನೆ ಊಟ, ಹಾಸಿಗೆ ಹಾಗೂ ಕೆಲ ಪುಸ್ತಕಗಳು ಬೇಕೆಂದು ಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು. ಆದರೀಗ ನಿನ್ನೆ ಸಂಜೆಯಿಂದ ವೈರಲ್ ಆಗಿರುವ ಫೋಟೊಗಳಲ್ಲಿ ನಟ ದರ್ಶನ್ ಆರಾಮವಾಗಿ ನಿಶ್ಚಿಂತೆಯಿಂದ ಚೇರ್ ಮೇಲೆ ಕುಳಿತು, ಒಂದು ಕೈಯಲ್ಲಿ ಕಾಫಿ ಕಪ್, ಮತ್ತೊಂದು ಕೈಯಲ್ಲಿ ಸಿಗರೇಟ್ ಹಿಡಿದು ತನ್ನ ಸಹ ಖೈದಿಗಳೊಟ್ಟಿಗೆ ಮಾತನಾಡುತ್ತಾ ಕುಳಿತಿರುವ ಫೋಟೊ ಹಾಗೂ ಮತ್ತೊಬ್ಬ ಖೈದಿಯ ಫೋನಿನಲ್ಲಿ ವೀಡಿಯೋ ಕಾಲ್ ಮಾಡಿರುವ ಫೋಟೋ ವೈರಲ್ ಆಗಿದೆ.
ಈ ವಿಚಾರ ಇದೀಗ ಈ ವಿಚಾರ ರಾಜ್ಯಾದ್ಯಂತ ಪೊಲೀಸ್ ಇಲಾಖೆ ಹಾಗೂ ಜೈಲಿನ ಆಡಳಿತ ಬಗ್ಗೆ ಅನುಮಾನ ಹುಟ್ಟುವಂತೆ ಮಾಡಿದೆ. ಜೈಲಾಧಿಕಾರಿಗಳ ದುರಾಡಳಿತವನ್ನು ಎತ್ತಿ ತೋರಿಸಿದೆ. ರಾಜ್ಯ ಸರ್ಕಾರ ಹಾಗೂ ಗೃಹ ಸಚಿವರಿಗೆ ಮುಖಭಂಗ ಆಗುವಂತೆ ಮಾಡಿದೆ. ಇವರು ಜೈಲಿನೊಳಗೆ ಕಾಣಿಸಿರುವ ರೀತಿ ನೋಡಿದರೆ ನಿಜವಾಗಿಯೂ ನಟ ದರ್ಶನ್ ಜೈಲಿನಲ್ಲಿ ಖೈದಿಯಾಗಿದ್ದಾರಾ ಎಂಬ ಅನುಮಾನ, ಪ್ರಶ್ನೆ ಎಲ್ಲರ ಮೂಡಿದೆ.
ಫೋಟೊಗಳು ವೈರಲ್ ಬೆನ್ನಲ್ಲೆ ಎಚ್ಚೆತ್ತ ಗೃಹ ಸಚಿವ ಜಿ.ಪರಮೇಶ್ವರ ಅವರು ಏಳು ಮಂದಿ ಜೈಲು ಅಧಿಕಾರಿಗಳನ್ನು ಅಮಾನತು ಮಾಡಿ ಆದೇಶಿಸಿದ್ದಾರೆ. ಶರಣಬಸವ, ಖಂಡೇವಾಲಾ, ಶ್ರೀಕಾಂತ್, ಸಂಪತ್, ಪುಟ್ಟಸ್ವಾಮಿ, ವೆಂಕಪ್ಪ, ವಾರ್ಡರ್ ಬಸಪ್ಪ ಸೇರಿದಂತೆ ಏಳು ಮಂದಿ ಜೈಲು ಅಧಿಕಾರಿಗಳು ಅಮಾನತುಗೊಂಡಿದ್ದಾರೆ. ಇನ್ನೂ ಈ ಕುರಿತು ತನಿಖೆಗೆ ನಡೆಸಲಾಗುತ್ತಿದೆ. ಮುಂದೆ ಜೈಲಿನಲ್ಲಿ ಇಂಥಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಲಾಗುವುದು. ಈ ಘಟನೆಯಲ್ಲಿ ಜೈಲು ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಿದೆ. ಇದೇ ಘಟನೆಯಲ್ಲಿ ಜೈಲಿನ ಹಿರಿಯ ಅಧಿಕಾರಿಗಳು ಶಾಮೀಲಾಗಿರುವುದು ಕಂಡು ಬಂದರೆ ಅವರನ್ನು ಸಹ ಅಮಾನತು ಮಾಡಲಾಗುವುದು ಎಂದು ಗೃಹ ಸಚಿವ ಜಿ.ಪರಮೇಶ್ವರ್ ಹೇಳಿದ್ದಾರೆ.
ಬಂದೀಖಾನೆ ಇಲಾಖೆಯ ಡಿಜಿ ಅವರೊಂದಿಗೆ ನಾನು ಮಾತನಾಡಿದೆ, ಅಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸಿಕೊಟ್ಟು ತನಿಖೆ ಮಾಡಿದ್ದೇವೆ, ರಾತ್ರಿ 1 ಗಂಟೆವರೆಗೂ ವಿಚಾರಣೆ ಮಾಡಿದ್ದಾರೆ. ಏಳು ಜನ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಿದ್ದೇವೆ. ಜೈಲರ್ ಗಳಾದ ಶರಣ ಬಸಪ್ಪ ಅಮೀನ ಗಡ್, ಪ್ರಭು ಎಸ್ ಖಂಡೇಲ್ವಾಲ್, ಅಸಿಸ್ಟೆಂಟ್ ಜೈಲರ್ ಗಳಾದ ಶ್ರೀಂಕಾತ್ ತಲವಾರ, ಎಲ್ ಎಸ್ ತಿಪ್ಪೇಸ್ವಾಮಿ ಹಾಗೂ ಹೆಡ್ ವಡರ್ಸ್ ಗಳಾದ ವೆಂಕಪ್ಪ ಕುರ್ತಿ, ಸಂಪತ್ ಕುಮಾರ್ ಕಡಪಟ್ಟಿ ಸೇರಿದಂತೆ ವರ್ಡರ್ ಬಸಪ್ಪ ತೇಲಿ ಅವರನ್ನು ಅಮಾನತು ಮಾಡಲಾಗಿದೆ.
ಅಲ್ಲದೆ ಯಾವ ರೀತಿ ಘಟನೆ ಆಗಿದೆ ಅಂತ ವರದಿ ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಈಗಾಗಲೇ ಡಿಜಿ ಅವರು ಜೈಲಿಗೆ ಭೇಟಿ ನೀಡಲಿದ್ದಾರೆ. ಇಂತಹ ಘಟನೆ ಯಾವುದೇ ಕಾರಣಕ್ಕೂ ನಡೆಯಬಾರದು, ಈ 7 ಅಧಿಕಾರಿಗಳು ಭಾಗಿಯಾಗಿದ್ದಾರೆ ಎಂದು ವರದಿ ಬಂದಿದೆ. ಅದರ ಅನ್ವಯವೇ ಅಮಾನತು ಮಾಡಲಾಗಿದೆ. ಜೈಲಿನ ಹಿರಿಯ ಅಧಿಕಾರಿಗಳನ್ನು ಕೂಡ ವರ್ಗಾವಣೆ ಮಾಡ್ತೇವೆ, ವರದಿ ಬರಲು ಕಾಯುತ್ತಿದ್ದೇವೆ. ಎಲ್ಲಾ ಜೈಲುಗಳಲ್ಲಿ ಜ್ಯಾಮರ್, ಸಿಸಿಟಿವಿ ಹಾಕುತ್ತಿದ್ದೇವೆ. ಆದ್ದರಿಂದ ಇಂತಹ ಘಟನೆಗಳು ನಡೆಯಬಾರದು ಎಂದು ಕಠಿಣ ಕ್ರಮಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.
ಇದೇ ವೇಳೆ ಕೇವಲ ಕೆಳಮಟ್ಟದ ಅಧಿಕಾರಿಗಳನ್ನು ಅಮಾನತು ಮಾಡಿ ಉನ್ನತ ಅಧಿಕಾರಿಗಳನ್ನ ವರ್ಗಾವಣೆ ಮಾಡ್ತೀವಿ ಅನ್ನೋದು ಎಷ್ಟು ಸರಿ ಎಂಬ ಪ್ರಶ್ನೆಗೆ ಸ್ಪಷ್ಟನೆ ನೀಡಿದ ಪರಮೇಶ್ವರ್ ಅವರು, ಘಟನೆ ಆಗಿದೆ ಅದನ್ನು ನಾವು ಸಮರ್ಥನೆ ಮಾಡುತ್ತಿಲ್ಲ, ಈಗ ಪ್ರಕರಣದ ತನಿಕೆ ಆಗ್ತಿದೆ. ಅಲ್ಲದೇ ಹಿರಿಯ ಅಧಿಕಾರಿಗಳ ಬಗ್ಗೆಯೂ ವರದಿ ಕೇಳಿದ್ದೇನೆ. ವರದಿ ಬಂದ ಕೂಡಲೇ ಅವರು ಭಾಗಿಯಾಗಿದ್ದಾರೆ ಅಂತ ಗೊತ್ತಾದರೆ ಅವರನ್ನು ಅಮಾನತು ಮಾಡ್ತೇವೆ. ತನಿಖೆಯಲ್ಲಿ ಎಲ್ಲವೂ ಬೆಳಕಿಗೆ ಬರುತ್ತೆ, ಆಗ ಮುಂದಿನ ಕ್ರಮ ಆಗುತ್ತೆ ಎಂದು ಭರವಸೆ ನೀಡಿದರು.