ವಿಶ್ವ ಕ್ರಿಕೆಟ್ ಬೋರ್ಡ್ ನಲ್ಲಿ ಭಾರತೀಯರ ಪಾರುಪತ್ಯ ಮುಂದುವರಿದಿದೆ.ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ (ಐಸಿಸಿ) ನೂತನ ಅಧ್ಯಕ್ಷರಾಗಿ ಜಯ್ ಶಾ ಆಯ್ಕೆಯಾಗಿದ್ದಾರೆ. ಇದೇ 2024ರ ಡಿಸೆಂಬರ್ 1ರಂದು ಅಧಿಕಾರ ಸ್ವೀಕರಿಸಲಿದ್ದಾರೆ. ಇನ್ನು 35 ವರ್ಷದ ಜಯ್ ಶಾ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಸ್ಥಾನಕ್ಕೇರಿದ ಅತ್ಯಂತ ಕಿರಿಯ ವ್ಯಕ್ತಿ ಎನಿಸಿಕೊಂಡಿದ್ದಾರೆ. ಅಲ್ಲದೆ ಈ ಹುದ್ದೆಯನ್ನು ಅಲಂಕರಿಸಿದ ಐದನೇ ಭಾರತೀಯ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.
ಪ್ರಸ್ತುತ ಐಸಿಸಿ ಅಧ್ಯಕ್ಷ ಗ್ರೆಗ್ ಬಾರ್ಕ್ಲೇ ಅವರ ಅಧಿಕಾರಾವಧಿಯು ನವೆಂಬರ್ 30ರಂದು ಕೊನೆಗೊಳ್ಳಲಿದೆ. ಸತತ ಎರಡನೇ ಬಾರಿಗೆ ಹುದ್ದೆ ಅಲಂಕರಿಸಿದ್ದ ಅವರು ಇತ್ತೀಚೆಗೆ ಮೂರನೇ ಅವಧಿಗೆ ಸ್ಪರ್ಧೆಯಿಂದ ದೂರ ಸರಿದಿದ್ದರು. ICC ಅಧ್ಯಕ್ಷರು ತಲಾ ಎರಡು ವರ್ಷಗಳ ಮೂರು ಅವಧಿಗೆ ಅರ್ಹರಾಗಿರುತ್ತಾರೆ. ಆದರೆ ನ್ಯೂಜಿಲೆಂಡ್ ವಕೀಲ ಗ್ರೆಗ್ ಬಾರ್ಕ್ಲೇ ಇದುವರೆಗೆ 4 ವರ್ಷಗಳನ್ನು ಪೂರ್ಣಗೊಳಿಸಿದ್ದಾರೆ. ಬಾರ್ಕ್ಲೇ ಅವರನ್ನು 2020ರ ನವೆಂಬರ್ ನಲ್ಲಿ ICC ಯ ಸ್ವತಂತ್ರ ಅಧ್ಯಕ್ಷರಾಗಿ ನೇಮಿಸಲಾಯಿತು. ನಂತರ 2022ರಲ್ಲಿ ಈ ಹುದ್ದೆಗೆ ಮರು ಆಯ್ಕೆಯಾಗಿದ್ದರು.ಜಯ್ ಶಾ 35ನೇ ವಯಸ್ಸಿಗೆ ಐಸಿಸಿ ಅಧ್ಯಕ್ಷರಾಗಿ ಆಯ್ಕೆಯಾಗುವ ಮೂಲಕ ಐಸಿಸಿ ಇತಿಹಾಸದಲ್ಲಿ ಅತ್ಯಂತ ಕಿರಿಯ ಅಧ್ಯಕ್ಷ ಎಂಬ ಖ್ಯಾತಿಗೆ ಭಾಜನರಾಗಲಿದ್ದಾರೆ. ಈ ಹಿಂದೆ ಜಗಮೋಹನ್ ದಾಲ್ಮಿಯಾ, ಶರದ್ ಪವಾರ್, ಎನ್ ಶ್ರೀನಿವಾಸನ್ ಮತ್ತು ಶಶಾಂಕ್ ಮನೋಹರ್ ಐಸಿಸಿಯನ್ನು ಮುನ್ನಡೆಸಿದ ಭಾರತೀಯರಾಗಿದ್ದಾರೆ.