ಮುಡಾ ಹಗರಣ ವಿಚಾರವಾಗಿ ಸಿಎಂ ಸಿದ್ದರಾಮಯ್ಯಗೆ ಒಂದಿಲ್ಲೊಂದು ಸಂಕಷ್ಟ ಎದುರಾಗುತ್ತಲೇ ಇದೆ. ಸಿಎಂ ರಾಜಿನಾಮೆಗೆ ಒತ್ತಾಯಿಸುತ್ತಿರುವ ವಿಪಕ್ಷಗಳು ಒಂದೆಡೆಯಾದರೆ, ನಾಳೆ(ಗುರುವಾರ) ಪ್ರಾಸಿಕ್ಯೂಷನ್ ಗೆ ಅನುಮತಿ ವಿಚಾರವಾಗಿ ಹೈಕೋರ್ಟ್ ನಲ್ಲಿ ವಿಚಾರಣೆ ನಡೆಯಲಿದೆ. ಇತ್ತ ಮೈಸೂರಿನಲ್ಲಿಂದು ಸಿಎಂ ಪತ್ನಿ ಪಾರ್ವತಿ ಮೇಲೆ ಮತ್ತೊಂದು ದೂರು ದಾಖಲಾಗಿದೆ. ನಕಲಿ ಸಹಿ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಪತ್ನಿ ವಿರುದ್ಧ ದೂರು ದಾಖಲಿಸಿದ್ದಾರೆ RTI ಕಾರ್ಯಕರ್ತ ಸ್ನೇಹಮಹಿ ಕೃಷ್ಣ. ನಕಲಿ ದಾಖಲೆ ಸೃಷ್ಟಿ ಹಾಗೂ ಕಡತ ನಾಶ ಆರೋಪದ ಮೇಲೆ ಮೈಸೂರಿನ ಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ದೂರನ್ನ ಸಲ್ಲಿಸಿದ್ದಾರೆ.
ಸಿಎಂ ಪತ್ನಿ ಪಾರ್ವತಿ ಬರೆದ ಮೂಲ ಪತ್ರ ನಾಶ ಮಾಡಿ, ಇತ್ತೀಚಿಗೆ ಸೃಷ್ಟಿಸಿರುವ ಪತ್ರವನ್ನು ಕಡತಕ್ಕೆ ಸೇರಿಸಿದ್ದಾರೆ ಎಂದು ದೂರು ನಿಡಿರುವ ಸ್ನೇಹಮಹಿ ಕೃಷ್ಣ, ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಹಾಗೂ ಸಹಚರರ ವಿರುದ್ಧ ಕ್ರಮ ವಹಿಸುವಂತೆಯೂ ದೂರಿನಲ್ಲಿ ದಾಖಲಿಸಿದ್ದಾರೆ. ವೈಟ್ನರ್ ವಿಚಾರವಾಗಿ ಸಮರ್ಥನೆ ನೀಡಿದ್ದ ಸಿಎಂ ಸಿದ್ದರಾಮಯ್ಯ ಬಿಡುಗಡೆ ಮಾಡಿದ್ದ ವೀಡಿಯೋದಲ್ಲಿ ಪತ್ರದಲ್ಲಿ ವೈಟ್ನರ್ ಹಿಂದಿನ ಅಕ್ಷರ ತೋರಿಸಲಾಗಿತ್ತು. ಈ ಪತ್ರದಲ್ಲಿ ದೇವನೂರು 3ನೇ ಹಂತದ ಬಡಾವಣೆಯಲ್ಲಿ ಅಥವಾ ನಂತರ ಅಕ್ಷರಗಳ ಮೇಲೆ ಹಾಕಲಾಗಿದ್ದ ವೈಟ್ನರನ್ನು ಸಿಎಂ ತೋರಿಸಿ ಸಮರ್ಥನೆ ನೀಡಿದ್ದರು. ಆದರೀಗ ಈ ಪತ್ರದ ವಿಚಾರವಾಗಿಯೇ ದೂರು ದಾಖಲಿಸಿರುವ ಸ್ನೇಹಮಹಿ ಕೃಷ್ಣ ಪತ್ರದಲ್ಲಿರುವ ಪಾರ್ವತಿ ಅವರ ಸಹಿ ಹಾಗೂ ಮಾಹಿತಿ ಹಕ್ಕಿನಲ್ಲಿ ಪಡೆದ ಪತ್ರದಲ್ಲಿ ಇರುವ ಸಹಿ ಬದಲಾವಣೆ ಆಗಿರುವ ಬಗ್ಗೆ ದೂರು ನೀಡಿದ್ದಾರೆ.
ಪಾರ್ವತಿ ಅವರ ಸಹಿ ನಕಲಿ ಆಗಿದೆ ಎಂದಿರುವ ಸ್ನೇಹಮಹಿ ಕೃಷ್ಣ, ವೈಟ್ನರ್ ಹಿಂದಿನ ಪದಗಳನ್ನು ಸಮರ್ಥಿಸಿಕೊಳ್ಳುವ ಸಲುವಾಗಿ ಎಂ.ಲಕ್ಷ್ಮಣ್ ಹಾಗೂ ಪಾರ್ವತಿ ಸಂಚು ರೂಪಿಸಿ ಸುಳ್ಳು ಪತ್ರ ಸೃಷ್ಟಿಸಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಪಾರ್ವತಿ ಸಹಿಯಲ್ಲಿ ಒಟ್ಟು ಒಂಬತ್ತು ವ್ಯತ್ಯಾಸವನ್ನು ಗುರುತಿಸಿರುವ ದೂರುದಾರ ಸ್ನೇಹಮಹಿ ಕೃಷ್ಣ ದಾಖಲೆಗಳೊಂದಿಗೆ ಲಕ್ಷ್ಮೀಪುರಂ ಪೋಲಿಸ್ ಠಾಣೆಯಲ್ಲಿ ದೂರು ದಾಖಲಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುವಂತೆ ಆಗ್ರಹಿಸಿದ್ದಾರೆ.
ಪತ್ರದ ಸಹಿಯಲ್ಲಿ ಸ್ನೇಹಮಹಿ ಕೃಷ್ಣ ಗುರುತಿಸಿರುವ ವ್ಯತ್ಯಾಸಗಳು
1. ಸಹಿಗಳ ಪಕ್ಕದಲ್ಲಿರುವ “ಎಕ್ಸ್” ಗುರುತುಗಳಲ್ಲಿ ವ್ಯತ್ಯಾಸ ಕಂಡು ಬರುತ್ತದೆ (ಬೇರೆ, ಬೇರೆ ರಿತಿಯಾಗಿದೆ),
2. ನನ್ನ ಬಳಿ ಇರುವ ದಾಖಲೆಯಲ್ಲಿ ಇರುವ ಸಹಿಗೂ ಮತ್ತು ಪಕ್ಕದಲ್ಲಿರುವ “ಎಕ್ಸ್” ಗುರುತಿಗೂ ಅಂತರ ಕಡಿಮೆ ಇರುವುದು ಕಂಡು ಬಂದರೆ, ವೀಡಿಯೋದಲ್ಲಿ ಕಂಡು ಬರುವ ದಾಖಲೆಯ ಸಹಿಗೂ ಮತ್ತು ಪಕ್ಕದಲ್ಲಿರುವ “ಎಕ್ಸ್” ಗುರುತಿಗೂ ಅಂತರ ಹೆಚ್ಚು ಇರುವುದು ಕಂಡು ಬರುತ್ತದೆ.
3. ನನ್ನ ಬಳಿ ಇರುವ ದಾಖಲೆಯಲ್ಲಿ “ತ” ಅಕ್ಷರ ಪಕ್ಕದಲ್ಲೇ “ಪಿ” ಅಕ್ಷರದ ಕೆಳಭಾಗದ ಗೆರೆ ಬಂದಿರುವುದು ಕಂಡು ಬರುತ್ತದೆ, ವೀಡಿಯೋದಲ್ಲಿ ಕಂಡು ಬರುವ ದಾಖಲೆಯಲ್ಲಿ “ತ” ಅಕ್ಷರದ ಮೇಲೆ “ಪಿ” ಅಕ್ಷರದ ಗೆರೆ ಇರುವುದು ಕಂಡು ಬರುತ್ತದೆ.
4. ನನ್ನ ಬಳಿ ಇರುವ ದಾಖಲೆಯಲ್ಲಿ “ಪಿ” ಅಕ್ಷರದ ಉದ್ದಗೆರೆಯ ಮೇಲ್ಬಾಗದಲ್ಲಿ ಮುಂದೆ ಅಡ್ಡಗೆರೆ ಬಂದಿರುವುದಿಲ್ಲ, ವೀಡಿಯೋದಲ್ಲಿ ಕಂಡು ಬರುವ ದಾಖಲೆಯಲ್ಲಿ “ಪಿ” ಅಕ್ಷರದ ಉದ್ದಗೆರೆಯ ಮೇಲ್ಬಾಗದಲ್ಲಿ ಉದ್ದಗೆರೆಯ ಮುಂದೆ ಅಡ್ಡಗೆರೆ ಬಂದಿರುತ್ತದೆ.
5. ನನ್ನ ಬಳಿ ಇರುವ ದಾಖಲೆಯಲ್ಲಿರುವ “ಆರ್” ಅಕ್ಷರಕ್ಕೂ, ವೀಡಿಯೋದಲ್ಲಿ ಕಂಡು ಬರುವ ದಾಖಲೆ ಯಲ್ಲಿರುವ “ಆರ್” ಅಕ್ಷರಕ್ಕೂ ವ್ಯತ್ಯಾಸ ಕಂಡು ಬರುತ್ತದೆ.
6. ನನ್ನ ಬಳಿ ಇರುವ ದಾಖಲೆಯಲ್ಲಿರುವ “ವಿ” ಅಕ್ಷರಕ್ಕೂ, ವೀಡಿಯೋದಲ್ಲಿ ಕಂಡು ಬರುವ ದಾಖಲೆ ಯಲ್ಲಿರುವ “ವಿ” ಅಕ್ಷರಕ್ಕೂ ವ್ಯತ್ಯಾಸ ಕಂಡು ಬರುತ್ತದೆ.
7. ನನ್ನ ಬಳಿ ಇರುವ ದಾಖಲೆಯಲ್ಲಿರುವ “ಟಿ” ಅಕ್ಷರದ ಮೇಲ್ಬಾಗದಲ್ಲಿ ಎರಡು ಗೆರೆಗಳ ಮಧ್ಯೆ ಅಂತರ ಕಂಡು ಬರುವುದಿಲ್ಲ, ವೀಡಿಯೋದಲ್ಲಿ ಕಂಡು ಬರುವ ದಾಖಲೆಯಲ್ಲಿರುವ “ಟಿ” ಅಕ್ಷರದ ಮೇಲ್ಬಾಗದಲ್ಲಿ ಎರಡು ಗೆರೆಗಳ ನಡುವೆ ಅಂತರ ಕಾಣಿಸುತ್ತದೆ.
8. ನನ್ನ ಬಳಿ ಇರುವ ದಾಖಲೆಯಲ್ಲಿರುವ “ಐ” ಅಕ್ಷರದ ಮೇಲ್ಬಾಗದಲ್ಲಿ ಚುಕ್ಕಿ ಇರುವುದು ಕಂಡು ಬರು ವುದಿಲ್ಲ, ವೀಡಿಯೋದಲ್ಲಿ ಕಂಡು ಬರುವ ದಾಖಲೆಯಲ್ಲಿರುವ “ಐ” ಅಕ್ಷರದ ಮೇಲ್ಬಾಗದಲ್ಲಿ ಚುಕ್ಕಿ ಇರುವುದು ಕಂಡು ಬರುತ್ತದೆ.
9. ನನ್ನ ಬಳಿ ಇರುವ ದಾಖಲೆಯಲ್ಲಿನ ಎರಡನೇ ಗುಟದ ಎಡಭಾಗದಲ್ಲಿ ಟ್ಯಾಗ್ ಹಾಕಿರುವ ಗುರುತು ಕಾಣಿಸಿದರೆ, ಸೃಷ್ಟಿಸಿರುವ ದಾಖಲೆಯ ಬಲಭಾಗದಲ್ಲಿ ಟ್ಯಾಗ್ ಗುರುತು ಕಾಣಿಸುತ್ತದೆ.
ಈ ಮೇಲ್ಕಂಡಂತೆ ಒಟ್ಟು ಒಂಬತ್ತು ಪ್ರಮುಖ ವ್ಯತ್ಯಾಸಗಳು ಕಂಡು ಬರುತ್ತವೆ.