ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಚಿಕ್ಕಣ್ಣ ಬಸವೇಶ್ವರ ನಗರದಲ್ಲಿರುವ ತನಿಖಾಧಿಕಾರಿ ಮುಂದೆ ಗುರುವಾರ ವಿಚಾರಣೆಗೆ ಹಾಜರಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಚಿಕ್ಕಣ್ಣ ಎರಡನೇ ಬಾರಿಗೆ ವಿಚಾರಣೆಗೆ ಇಂದು ಹಾಜರಾಗಿದ್ದಾರೆ. ಕಳೆದ ಬಾರಿ ವಿಚಾರಣೆ ಬಳಿಕ ನಟ ದರ್ಶನ್ ಅವರನ್ನು ಕಾಣಲು ಪರಪ್ಪನ ಅಗ್ರಹಾರ ಜೈಲಿಗೆ ಹೋಗಿದ್ದರಿಂದ ನಟ ಚಿಕ್ಕಣ್ಣನನ್ನು ಮತ್ತೆ ಈ ಬಾರಿ ಎಸಿಪಿ ಚಂದನ್ ವಿಚಾರಣೆಗೆ ಕರೆದಿದ್ದಾರೆ ಎನ್ನಲಾಗಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ವಿಚಾರಣೆ ಎದುರಿಸಿದ್ದ ನಟ ಚಿಕ್ಕಣ್ಣ ನ್ಯಾಯಾಧೀಶರ ಮುಂದೆಯೂ ಹಾಜರಾಗಿದ್ದರು. ಸಿಆರ್ ಪಿಸಿ 164 ಅಡಿಯಲ್ಲಿ ಅವರ ಹೇಳಿಕೆ ದಾಖಲು ಮಾಡಿಕೊಳ್ಳಲಾಗಿತ್ತು.ನಾನೊಬ್ಬ ಸಾಕ್ಷಿದಾರನಾಗಿದ್ದುಕೊಂಡು ಜೈಲಿಗೆ ಹೋಗಿ ದರ್ಶನ್ ಜತೆಗೆ ಮಾತನಾಡಿಸಬಾರದು ಎಂಬುದು ನನಗೆ ತಿಳಿದಿರಲಿಲ್ಲ. ಹಾಗಾಗಿ ನಾನು ಪರಪ್ಪನ ಅಗ್ರಹಾರಕ್ಕೆ ಹೋಗಿ ದರ್ಶನ್ ಭೇಟಿ ಮಾಡಿ ಬಂದಿದ್ದೆ. ಹೀಗಾಗಿ ಪೊಲೀಸರು ವಿಚಾರಣೆಗೆ ಬರುವಂತೆ ನಿನ್ನೆ ಬುಧವಾರ ನೋಟಿಸ್ ಕೊಟ್ಟು 9 ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ಸೂಚನೆ ಕೊಡಲಾಗಿತ್ತು. ಈ ನಿಟ್ಟಿನಲ್ಲಿ ಗುರುವಾರ ಬಂದು ವಿಚಾರಣೆಗೆ ಹಾಜರಾಗಿದ್ದೇನೆ. ವಿಚಾರಣೆ ವೇಳೆ ಪರಪ್ಪನ ಅಗ್ರಹಾರ ಜೈಲಿಗೆ ಹೋಗಿದ್ದರ ಬಗ್ಗೆ ಒಂದಷ್ಟು ಪ್ರಶ್ನೆ ಕೇಳಿದ್ದರು ಅದಕ್ಕೆ ಉತ್ತರ ಕೊಟ್ಟಿದ್ದಿನಿ. ಮತ್ತೆ ವಿಚಾರಣೆಗೆ ಕರೆದರೆ ಬರುತ್ತೇನೆ. ಸದ್ಯ ವಿಚಾರಣೆಗೆ ಬರುವುದಕ್ಕೆ ಹೇಳಿಲ್ಲ. ಸಾಕ್ಷಿದಾರ ಹೋಗ ಬಾರದು ಅನ್ನೋದು ನನಗೆ ತಿಳಿದಿರಲಿಲ್ಲ, ಗೊತ್ತಿದ್ದರೆ ಹೋಗಿ ದರ್ಶನ್ನನ್ನು ಜೈಲಿನಲ್ಲಿ ಭೇಟಿ ಆಗುತ್ತಿರಲಿಲ್ಲ ಎಂದು ಚಿಕ್ಕಣ್ಣ ಪ್ರತಿಕ್ರಿಯಿಸಿದ್ದಾರೆ.