ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವ 2024 ಹಿನ್ನೆಲೆ ಮೈಸೂರಿಗೆ ದಸರಾ ಗಜಪಡೆಯ ಎರಡನೇ ತಂಡದ ಆನೆಗಳು ಮೈಸೂರಿಗೆ ಆಗಮಿಸಿವೆ. ಮತ್ತಿಗೋಡು ಆನೆ ಶಿಬಿರದ ಮಹೇಂದ್ರ, ದುಬಾರೆ ಶಿಬಿರದ ಸುಗ್ರೀವ, ಪ್ರಶಾಂತ್, ದೊಡ್ಡಹರವೆ ಶಿಬಿರದ ಲಕ್ಷ್ಮಿ, ರಾಮಾಪುರ ಆನೆಶಿಬಿರದ ಹಿರಣ್ಯಾ ಆನೆಗಳು ಮೈಸೂರಿಗೆ ಆಗಮಿಸಿದ್ದು, ಒಟ್ಟಾರೆ 5 ಆನೆಗಳು 2 ನೇ ತಂಡವಾಗಿ ಮೈಸೂರು ದಸರಾ ಮಹೋತ್ಸವಕ್ಕೆ ಆಗಮಿಸಿವೆ.
ಲಾರಿಗಳ ಮೂಲಕ ಮೈಸೂರಿಗೆ ಬಂದಿಳಿದಿರುವ ಐದು ಆನೆಗಳಿಗೂ ಅರಮನೆಯ ಜಯಮಾರ್ತಾಂಡ ದ್ವಾರದ ಬಳಿ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿ ಸ್ವಾಗತ. ಕೋರಲಾಯಿತು. ಇದೇ ವೇಳೆ ಅರಮನೆ ಮಂಡಳಿ ಉಪನಿರ್ದೇಶಕ ಟಿ ಎಸ್ ಸುಬ್ರಹ್ಮಣ್ಯ, ಡಿಸಿಎಫ್ ಡಾ ಐ ಬಿ ಪ್ರಭುಗೌಡ ಸೇರಿದಂತೆ ಇನ್ನಿತರ ಪ್ರಮುಖರು ಆನೆಗಳಿಗೆ ಪುಷ್ಪಾರ್ಚನೆ ನೆರವೇರಿಸಿದರು.
ಮೈಸೂರು ದಸರಾ ಹಿನ್ನೆಲೆ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಮೊದಲ ತಂಡದಲ್ಲಿ 9 ಆನೆಗಳು ಮೈಸೂರಿಗೆ ಆಗಮಿಸಿದ್ದವು. ಇದೀಗ 2 ನೇ ತಂಡದಲ್ಲಿ 5 ಆನೆಗಳು ಆಗಮಿಸಿದ್ದು, ಒಟ್ಟಾರೆ 14 ಆನೆಗಳ ದಸರಾ ಗಜಪಡೆ ಅರಮನೆ ಅಂಗಳದಲ್ಲಿ ವಾಸ್ತವ್ಯ ಹೂಡಿವೆ.