– ಇಂದಿನಿಂದ ಐದು ದಿನಗಳ ಕಾಲ ಬ್ಲಾಗರ್ಸ್ ಮೀಟ್
– ಪ್ರವಾಸಿ ತಾಣಗಳ ಬಗ್ಗೆ ಪ್ರಚಾರ ನೀಡುವ ಪ್ರಯತ್ನ
ಪ್ರತಿನಿಧಿ ವರದಿ ಮೈಸೂರು
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಕೆಲವೇ ದಿನಗಳ ಬಾಕಿ ಉಳಿದಿದ್ದು, ಸಾಂಸ್ಕೃತಿಕ ನಗರಿಯಲ್ಲಿ ಭರ್ಜರಿ ಸಿದ್ಧತೆಗಳು ನಡೆಯುತ್ತಿವೆ. ದಸರೆಯ ಸಂಭ್ರಮದ ನಡುವೆ ಮೈಸೂರು ಹಾಗೂ ಸುತ್ತಮುತ್ತ ಇರುವ ಪ್ರವಾಸಿ ತಾಣಗಳ ಬಗ್ಗೆ ಹೆಚ್ಚು ಪ್ರಚಾರ ನೀಡುವ ಉದ್ದೇಶದೊಂದಿಗೆ ಬ್ಲಾಗರ್ಸ್ ಮೀಟ್ ನಡೆಸಲು ಪ್ರವಾಸೋದ್ಯಮ ಇಲಾಖೆ ಮುಂದಾಗಿದೆ.
ಪ್ರವಾಸೋದ್ಯಮದಲ್ಲಿ ದೇಶ-ವಿದೇಶದಲ್ಲಿ ಮೈಸೂರು ತನ್ನದೇ ಛಾಪು ಮೂಡಿಸಿದ್ದು, ಅಸಂಖ್ಯಾತ ಪ್ರವಾಸಿಗರನ್ನು ತನ್ನ ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ. ಇದರ ಬೆನ್ನಲ್ಲೇ ಮೈಸೂರಿನ ಪ್ರವಾಸಿ ತಾಣಗಳನ್ನು ದೇಶದ ವಿವಿಧ ಭಾಷೆಗಳ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರಪಡಿಸುವ ಉದ್ದೇಶದಿಂದ ಬ್ಲಾಗರ್ಸ್ ಮೀಟ್ ನಡೆಸಲಾಗುತ್ತಿದೆ. ಕೇಂದ್ರ ಸರ್ಕಾರದ ಪ್ರವಾಸೋದ್ಯಮ ಮಂತ್ರಾಲಯದಿಂದ ಮೊದಲ ಬಾರಿಗೆ ಈ ಬ್ಲಾಗರ್ಸ್ ಮೀಟ್ ನಡೆಸಲಾಗುತ್ತಿದ್ದು, ಕರ್ನಾಟಕ ಹಾಗೂ ದೇಶದ ವಿವಿಧ ರಾಜ್ಯಗಳಲ್ಲಿ ತಮ್ಮ ಆಕರ್ಷಕ ಬ್ಲಾಗ್ಗಳ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಪ್ರಖ್ಯಾತಿ ಪಡೆದಿರುವ ಬ್ಲಾಗರ್ಗಳು ಮೈಸೂರಿನಲ್ಲಿ ನಡೆಯುವ ಬ್ಲಾಗರ್ಸ್ ಮೀಟ್ನಲ್ಲಿ ಭಾಗವಹಿಸಲಿದ್ದಾರೆ.
ಐದು ದಿನಗಳ ಕಾರ್ಯಕ್ರಮ:
ಮೊದಲ ಬಾರಿಗೆ ನಡೆಯುತ್ತಿರುವ ಬ್ಲಾಗರ್ಸ್ ಮೀಟ್ ಕಾರ್ಯಕ್ರಮಕ್ಕೆ ರಾಜ್ಯ ಸರ್ಕಾರ ಮತ್ತು ಕರ್ನಾಟಕ ಟೂರಿಸಂ ಸೊಸೈಟಿ ಸಹಯೋಗ ನೀಡಿದೆ. ಮೈಸೂರಿನ ಪ್ರವಾಸೋದ್ಯಮ ಉತ್ತೇಜನಕ್ಕಾಗಿ ಸೆ.10 ರಿಂದ 14ರವರೆಗೆ ಮೈಸೂರಿನ ವಿವಿಧ ಪ್ರವಾಸಿ ತಾಣಗಳಲ್ಲಿ ಬ್ಲಾಗರ್ಸ್ ಮೀಟ್ ನಡೆಯಲಿದ್ದು, ಕಾರ್ಯಕ್ರಮದಲ್ಲಿ ಭಾಗವಹಿಸಲಿರುವ ವಿವಿಧ ರಾಜ್ಯಗಳ ಬ್ಲಾಗರ್ಸ್ಗಳು ಮೈಸೂರು ಹಾಗೂ ಸುತ್ತಮುತ್ತಲಿನ ಪ್ರವಾಸಿ ತಾಣಗಳ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರಪಡಿಸುವ ಮೂಲಕ ಹೆಚ್ಚು ಹೆಚ್ಚು ಪ್ರವಾಸಿಗರನ್ನು ಆಕರ್ಷಿಸಲು ಸಹಕರಿಸಲಿದ್ದಾರೆ.|
ಪ್ರಖ್ಯಾತ ಬ್ಲಾಗರ್ಸ್ಗಳು ಭಾಗಿ:
ಮೈಸೂರಿನ ಪ್ರವಾಸೋದ್ಯಮವನ್ನು ಉತ್ತೇಜಿಸುವ ಉದ್ದೇಶದೊಂದಿಗೆ ನಡೆಸುತ್ತಿರುವ ಬ್ಲಾಗರ್ಸ್ ಮೀಟ್ನಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಪ್ರಖ್ಯಾತಿ ಪಡೆದಿರುವ ಪ್ರಮುಖ ಬ್ಲಾಗರ್ಸ್ಗಳು ಭಾಗವಹಿಸುತ್ತಿದ್ದಾರೆ. ಪ್ರಮುಖವಾಗಿ ಕರ್ನಾಟಕದವರಾದ ಸುಜನ್ ಶೆಟ್ಟಿ, ಸ್ಯಾಂಡಿ ಮತ್ತು ವಿಜಯ್ ದಂಪತಿ, ಆಶಿಕ್ ಪಾಲ್ಯಂ, ಲಕ್ಷ್ಮಿ ಶರತ್ ಅವರೊಂದಿಗೆ ತೆಲಂಗಾಣದ ನೀತು ಅಂಡ್ ಬಾಲಾಜಿ, ಪಾಂಡಿಚರಿಯ ವಸಂತ್ ಮುರುಗನ್, ತಮಿಳುನಾಡಿನ ಕಾರ್ತಿಕ್ ಮುರುಳಿ, ಕೇರಳದ ಮುಜೀಬ್ ಪಡಿಕ್ಕಾ, ದಿನಿ ಎಲ್ದೋ, ಮಹಾರಾಷ್ಟ್ರದ ದಿವ್ಯಾಕ್ಷಿ ಗುಪ್ತಾ, ನವೇಲಿ ದೇಶ್ಮುಖ್, ರುಚಿಕಾ ಅಸಾಕ್ತರ್, ಇರ್ಫಾನ್ ಸಿದ್ದಿಕ್ಕಿ, ದೆಹಲಿಯ ಅಮಿತಾ ಪಾಂಡೆ, ನಿಹಾರಿಕಾ ಅರೋರಾ ಅವರು ಭಾಗವಹಿಸುತ್ತಿದ್ದಾರೆ.
====================
ಬಾಕ್ಸ್
ಬ್ಲಾಗರ್ಸ್ ಮೀಟ್ ಕಾರ್ಯಕ್ರಮದ ವಿವರ
ಐದು ದಿನಗಳ ಬ್ಲಾಗರ್ಸ್ ಮೀಟ್ ವೇಳೆ ಬ್ಲಾಗರ್ಸ್ಗಳು ಪ್ರಮುಖ ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡಲಿದ್ದಾರೆ. ಸೆ.11ರಂದು ನಂಜನಗೂಡಿನ ನಂಜುಂಡೇಶ್ವರ ದೇವಾಲಯಕ್ಕೆ ಭೇಟಿ ನೀಡಲಿದ್ದು, ಇದಾದ ಬಳಿಕ ಬಂಡೀಪುರಕ್ಕೆ ತೆರಳಲಿದ್ದಾರೆ. ಬಳಿಕ ಸೆ.12ರಂದು ಶ್ರೀ ಚೆನ್ನಕೇಶವ ದೇವಾಲಯದ ಅನ್ವೇಷಣೆ ನಡೆಸಲಿರುವ ಬ್ಲಾಗರ್ಗಳು, ನಂತರದಲ್ಲಿ ಮೈಸೂರಿನ ಜಗನ್ಮೋಹನ ಅರಮನೆ ಆವರಣದಲ್ಲಿರುವ ಆರ್ಟ್ ಗ್ಯಾಲರಿಯ ಅನ್ವೇಷಣೆ ನಡೆಸಲಿದ್ದು, ಬಳಿಕ ರೋಸ್ ವುಡ್ ಇನ್ಲೆ ಆರ್ಟ್ ವರ್ಕ್ಶಾಪ್ಗೆ ಭೇಟಿ ನೀಡಲಿದ್ದಾರೆ. ಸೆ.13ರಂದು ಚಾಮುಂಡಿಬೆಟ್ಟದ ಶ್ರೀ ಚಾಮುಂಡೇಶ್ವರಿ ದೇವಸ್ಥಾನಕ್ಕೆ ತೆರಳಿ ದೇವರ ದರ್ಶನ ಪಡೆಯಲಿದ್ದು, ಇದಾದ ನಂತರ ಕೆಎಸ್ಐಸಿ ಮೈಸೂರು ಸಿಲ್ಕ್ ಕಾರ್ಖಾನೆಯ ಅನ್ವೇಷಣೆ ಮಾಡಲಿದ್ದಾರೆ. ಇದಾದ ಬಳಿಕ ಮೈಸೂರಿನ ಪಾರಂಪರಿಕ ಟಾಂಗಾ ಸವಾರಿ ಮೂಲಕ ಮೈಸೂರು ನಗರದಲ್ಲಿ ಸುತ್ತಾಟ ನಡೆಸಲಿದ್ದಾರೆ. ಆ ಬಳಿಕ ವಿಶ್ವವಿಖ್ಯಾತ ಮೈಸೂರು ಅರಮನೆಗೆ ಭೇಟಿ ನೀಡಲಿದ್ದು, ಈ ವೇಳೆ ರಾಜವಂಶಸ್ಥ ಹಾಗೂ ಮೈಸೂರು-ಕೊಡಗು ಸಂಸದ ಯದುವೀರ್ ಒಡೆಯರ್ ಅವರೊಂದಿಗೆ ಸಂವಾದ ಸಹ ನಡೆಸಲಿದ್ದಾರೆ. ಸೆ.14ರಂದು ಸಂತ ಫಿಲೋಮಿನಾ ಚರ್ಚ್ ಹಾಗೂ ದೇವರಾಜ ಮಾರುಕಟ್ಟೆಗೆ ಭೇಟಿ ನೀಡಿ ಅನ್ವೇಷಣೆ ನಡೆಸಲಿದ್ದಾರೆ.
==================
ಇಂದು ಸೋಮನಾಥಪುರದಲ್ಲಿ ಚಾಲನೆ
ಮೊದಲ ಬಾರಿಗೆ ನಡೆಯುವ ಬ್ಲಾಗರ್ಸ್ ಮೀಟ್ಗೆ ಸೆ.10ರ ಬುಧವಾರ ಚಾಲನೆ ದೊರೆಯಲಿದೆ. ಸೋಮನಾಥಪುರದಲ್ಲಿರುವ ಶ್ರೀ ಚನ್ನಕೇಶವ ದೇವಾಲಯದಲ್ಲಿ ನಡೆಯುವ ಸಮಾರಂಭದಲ್ಲಿ ಬ್ಲಾಗರ್ಸ್ ಮೀಟ್ ಆರಂಭವಾಗಲಿದೆ. ಐದು ದಿನಗಳ ಈ ಮೀಟ್ನಲ್ಲಿ ಮೈಸೂರಿನ ಪ್ರಮುಖ ಪ್ರವಾಸಿ ತಾಣಗಳಾದ ಅರಮನೆ, ಚಾಮುಂಡಿಬೆಟ್ಟ, ಸಂತ ಫಿಲೋಮಿನಾ ಚರ್ಚ್, ದೇವರಾಜ ಮಾರುಕಟ್ಟೆ, ನಂಜನಗೂಡು ದೇವಾಲಯ ಸೇರಿದಂತೆ ಇನ್ನಿತರಗಳಿಗೆ ಭೇಟಿ ನೀಡಲಿದ್ದಾರೆ.